ಲೋಕಲ್ ದಂಗಲ್ ಗೆದ್ದೋರು ಯಾರು..? ಇಲ್ಲಿದೆ ಸ್ಥಳೀಯ ಸಂಸ್ಥೆಯ ಚುನಾವಣೆಯ ಕಂಪ್ಲೀಟ್ ರಿಪೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31-ಲೋಕಸಭೆ ಮಹಾಸಮರದಲ್ಲಿ ಬಿಜೆಪಿಯನ್ನು ಕೈಹಿಡಿದಿದ್ದ ಮತದಾರರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶ ನೀಡದೇ ಪ್ರಬುದ್ಧತೆಯನ್ನು ಮೆರೆದಿದ್ದಾನೆ.

ಮೇಲ್ನೋಟಕ್ಕೆ ಈ ಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರು. ಸೋತು ಸಣ್ಣವಾಗಿದ್ದ ಕಾಂಗ್ರೆಸ್‍ಗೆ ನೈತಿಕ ಶಕ್ತಿಯನ್ನು ಹೆಚ್ಚುವಂತೆ ಮಾಡಿದ್ದರೆ, ಜೆಡಿಎಸ್ ಯಥಾಸ್ಥಿತಿಯಲ್ಲಿದೆ. ಬಿಜೆಪಿಯವರು ಬೀಗುವ ಸ್ಥಿತಿಯಲ್ಲೂ ಇಲ್ಲ.

30 ಪುರಸಭೆಗಳ ಪೈಕಿ ಬಿಜೆಪಿ-6, ಕಾಂಗ್ರೆಸ್-12, ಜೆಡಿಎಸ್-12 ಹಾಗೂ 10 ಕಡೆ ಅತಂತ್ರ ಪರಸ್ಥಿತಿ ನಿರ್ಮಾಣವಾಗಿದೆ.19ಪಟ್ಟಣ ಪಂಚಾಯ್ತಿಗಳ ಪೈಕಿ ಬಿಜೆಪಿ-8, ಕಾಂಗ್ರೆಸ್-3, ಹಾಗೂ 8 ಕಡೆ ಅತಂತ್ರ ಫಲಿತಾಂಶ ಬಂದಿದ್ದರೆ, ಜೆಡಿಎಸ್ ಸೊನ್ನೆಯಲ್ಲಿ ಸೋತಿದೆ.

7ನಗರಸಭೆಗಳ ಪೈಕಿ 2 ಕಡೆ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿದಿದ್ದು, 5ಕಡೆ ಅತಂತ್ರ ಪರಿಸ್ಥಿತಿ 5ಕಡೆ ಯಾವುದೇ ಪಕ್ಷಕ್ಕೂ ಬಹುಮತ ಬಾರದಿರುವುದರಿಂದ ಮೈತ್ರಿ ಮೂಲಕ ಅಧಿಕಾರ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

248 ನಗರಸಭೆಯ ವಾರ್ಡ್‍ಗಳ ಪೈಕಿ ಬಿಜೆಪಿ -56, ಕಾಂಗ್ರೆಸ್-90, ಜೆಡಿಎಸ್-38, ಬಿಎಸ್‍ಪಿ-2, ಪಕ್ಷೇತರ-25 ಹಾಗೂ ಇತರೆ-6 ಕಡೆ ಗೆಲುವು ಸಾಧಿಸಿದ್ದಾರೆ. ಪುರಸಭೆಯ ಒಟ್ಟು 783 ವಾರ್ಡ್‍ಗಳಲ್ಲಿ ಬಿಜೆಪಿ-184, ಕಾಂಗ್ರೆಸ್-322, ಜೆಡಿಎಸ್-102, ಬಿಎಸ್‍ಪಿ-1, ಸಿಪಿಐಎಂ-2, ಪಕ್ಷೇತರರು-102, ಮತ್ತು ಇತರರ-1 ವಾರ್ಡ್‍ಗಳಲ್ಲಿ ವಿಜಯತರಾಗಿದ್ದಾರೆ.

ಪಟ್ಟಣ ಪಂಚಾಯ್ತಿಯ 132ವಾರ್ಡ್‍ಗಳ ಪೈಕಿ ಬಿಜೆಪಿ-126, ಕಾಂಗ್ರೆಸ್-97, ಜೆಡಿಎಸ್-34 ಹಾಗೂ ಪಕ್ಷೇತರರು 40ವಾರ್ಡ್‍ಗಳಲ್ಲಿ ಗೆಲುವಿನ ನಗೆಬೀರಿದ್ದಾರೆ. ಬಸವಕಲ್ಯಾಣ ಹಾಗೂ ಶಹಾಪುರ ನಗರಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಹರಿಹರ, ಹಿರಿಯೂರು, ಶಿಢ್ಲಘಟ್ಟ, ತಿಪಟೂರು, ನಂಜನಗೂಡು ನಗರಸಭೆಗೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ.

ನಂಜನಗೂಡಿನ 31ವಾರ್ಡ್‍ಗಳಲ್ಲಿ ಬಿಜೆಪಿ 15ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೂರು ವಾರ್ಡ್‍ಗಳಲ್ಲಿ ಪಕ್ಷೇತರ ಗೆದ್ದಿರುವುದರಿಂದ ಅವರ ಬೆಂಬಲ ಪಡೆಯುವುದು ಅನಿವಾರ್ಯ.

ಕೊಪ್ಪ, ಶೃಂಗೇರಿ, ಮೂಡಗೇರೆ, ಸುಳ್ಯ, ಕಲಘಟಗಿ, ಹೊನ್ನಾವರ, ಸಿದ್ದಾಪುರ, ಔರದ ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.  ನರಸಿಂಹರಾಜಪುರ, ಮೂಲ್ಕಿ, ಯಳಂದೂರು, ಕಮಲಪುರ ಪಟ್ಟಣ ಪಂಚಾಯ್ತಿಗಳು ಕಾಂಗ್ರೆಸ್ ಪಾಲಾಗಿದೆ.

ಉಳಿದಂತೆ ಮೊಳ್ಕಾಲ್ಮೂರು, ಹೊಳ್ಕೆರೆ, ತುರವೇಕೆರೆ, ಆಲೂರು, ಅರಕಲಗೂಡು ಪಟ್ಟಣ ಪಂಚಾಯ್ತಿಗಳಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಂದಿಲ್ಲ. ಪಟ್ಟಣಪಂಚಾಯ್ತಿ ಫಲಿತಾಂಶದಲ್ಲಿ ಆನೇಕಲ್, ಬಂಗಾರಪೇಟೆ, ಬಾಗೇಪಲ್ಲಿ, ಪಾವಗಡ, ಕುಣಿಗಲ್, ಕೆ.ಆರ್.ನಗರ, ಬನ್ನೂರು, ಶ್ರೀರಂಗಪಟ್ಟಣ, ಬಸವನಬಾಗೇವಾಡಿ, ಬಾಲ್ಕಿ, ಹುಮನಾಬಾದ್, ಚಿಟಗುಪ್ಪ, ಸಂಡೂರು, ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿದೆ.

ಮೂಡಬಿದರೆ, ಗುಂಡ್ಲಪೇಟೆ, ಮುಂಡರಗಿ, ಬ್ಯಾಡಗಿ ಪಟ್ಟಣ ಪಂಚಾಯ್ತಿ ಬಿಜೆಪಿ ಪಾಲಾಗಿದೆ.  ಬನ್ನೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ತನ್ನ ವಶಕ್ಕೆ ತೆಗೆದುಕೊಂಡಿದೆ.  ಶ್ರೀನಿವಾಸಪುರ, ಮಾಲೂರು, ಕಡೂರು, ಮಳವಳ್ಳಿ, ಕೆ.ಆರ್.ಪೇಟೆ, ತಾಳಿಕೋಟೆ, ಇಂಡಿ, ಶಿಗ್ಗಾವ, ಭಟ್ಕಳ ಪಟ್ಟಣ ಪಂಚಾಯ್ತಿಯಲ್ಲಿ ಅತಂತ್ರ ಫಲಿತಾಂಶ ನಿರ್ಮಾಣವಾಗಿದೆ.

# ವಿಧಾನ ಸಭೆಯಂತೆ ಮೈತ್ರಿ ಅನಿವಾರ್ಯ :
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳದೆ ಇದ್ದ ಕಾರಣ ಬಹುತೇಕ ಕಡೆ ಅತಂತ್ರ ಪರಸ್ಥಿತಿ ನಿರ್ಮಾಣವಾಗಿರುವುದು ಫಲಿತಾಂಶದಿಂದ ಸಾಬೀತಾಗಿದೆ.

ಕಾರ್ಯಕರ್ತರ ಅಭಿಪ್ರಾಯಕ್ಕೆ ತಲೆಬಾಗಿದ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ. ಫ್ರೆಂಡಲಿ ಫೈಟ್‍ಗೆ ದೋಸ್ತಿ ಪಕ್ಷಗಳು ತೀರ್ಮಾನಿಸಿದ್ದರು. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡಿದ್ದರೆ. ಫಲಿತಾಂಶದಲ್ಲಿ ದೋಸ್ತಿ ಪಕ್ಷಗಳು ಮೈಲುಗೈ ಸಾಧಿಸುತ್ತಿದ್ದರು.

ಆದರೆ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಕೆಲವು ಕ್ಷೇತ್ರಗಳನ್ನು ಹೊರತು ಪಡಿಸಿದರೆ ವಿಧಾನಸಭೆಯಲ್ಲಿ ದೋಸ್ತಿ ಹೊರಗಡೆ ಕುಸ್ತಿ ಎಂಬ ಪರಸ್ಥಿತಿ ನಿರ್ಮಾಣವಾಗಿತ್ತು.  ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಗ್ಗೂಡದ ಕಾರಣ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 25ಸ್ಥಾನಗಳನ್ನು ಗೆದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿತ್ತು.

ಈ ಫಲಿತಾಂಶ ವಿಭಿನ್ನವಾದ ತೀರ್ಪು ನೀಡಿರುವುದರಿಂದ ಯಾವ ಪಕ್ಷಗಳು ನಾವೇ ಗೆದ್ದಿದ್ದೇವೆ ಎಂದು ಭುಜ ತಟ್ಟಿ ಬೀಗುವಂತಹ ಸ್ಥಿತಿಯಲ್ಲಿ ಇಲ್ಲ. ಮೂರು ಪಕ್ಷಗಳಿಗೂ ಮತದಾರರ ಒಂದೊಂದು ರೀತಿ ತೀರ್ಪು ನೀಡಿರುವುದರಿಂದ ತಾನು ಚುನಾವಣೆಯಿಂದ ಚುನಾವಣೆಗೆ ವಿಭಿನ್ನವಾದ ತೀರ್ಪು ನೀಡುತ್ತಾನೆಂದು ಸಾಬೀತು ಮಾಡಿದ್ದಾರೆ.

Facebook Comments

Sri Raghav

Admin