ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿ ಮತ್ತೆ ಚುನಾವಣಾ ಕಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15-ಇತ್ತೀಚೆಗಷ್ಟೇ ವಿಧಾನ ಸಭೆ ಉಪಚುನಾವಣೆ ಎದುರಿಸಿದ ಚಿಕ್ಕಬಳ್ಳಾಪುರ, ಹೊಸಕೋಟೆ ನಗರಗಳಿಗೆ ಈಗ ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದೆ.
ರಾಜ್ಯ ಚುನಾವಣಾ ಆಯೋಗ ನಿನ್ನೆ ಸಂಜೆ ಅಧಿಕೃತವಾಗಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಘೋಷಿಸಿದೆ.

ನಾಲ್ಕು ನಗರಸಭೆಯ 124 ವಾರ್ಡ್ ಗಳು, ಬಳ್ಳಾರಿ ಜಿಲ್ಲೆ ತೇಕಲಕೋಟೆ ಪಟ್ಟಣ ಪಂಚಾಯ್ತಿ ಯ 20 ವಾರ್ಡ್‍ಗಳು, ವಿಜಯಪುರ ಜಿಲ್ಲೆ ಸಿಂಧಗಿ ಪುರಸಭೆಯ 23 ವಾರ್ಡ್‍ಗಳು ಸೇರಿ 167 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಸಿರಗುಪ್ಪ ನಗರಸಭೆಗಳಲ್ಲಿ ತಲಾ 31 ವಾರ್ಡ್‍ಗಳಿಗೆ, ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್‍ಗೆ , ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣ ಪಂಚಾಯ್ತಿಯ 5ನೇ ವಾರ್ಡ್‍ಗೆ, ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣ ಪಂಚಾಯ್ತಿ 12ನೇ ವಾರ್ಡ್‍ಗೆ ಚುನಾವಣೆ ಎದುರಾಗಿದೆ.
ಜ.21 ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಜಾರಿ ಮಾಡುತ್ತಿದ್ದು, ಜ.28 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜ.29 ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜ.31 ಉಮೇದು ವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.

ಫೆ.9 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ಯವರೆಗೆ ಮತದಾನ ನಡೆಯಲಿದೆ. ಅಗತ್ಯವಿದ್ದಲ್ಲಿ ಫೆ.10 ರಂದು ಮರು ಮತದಾನ ನಡೆಯಲಿದೆ. ಫೆ.11 ರಂದು ಮತ ಎಣಿಕೆ ನಡೆಯಲಿದೆ. ಫಲಿತಾಂಶ ಘೋಷಣೆಯಾದ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ. ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸೀಮಿತವಾಗಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತಿದೆ.

ನಗರಸಭೆಯ ಅಭ್ಯರ್ಥಿಗಳು 2ಲಕ್ಷ, ಪುರಸಭೆ ಅಭ್ಯರ್ಥಿ ಗಳು 1.50ಲಕ್ಷ, ಪಟ್ಟಣ ಪಂಚಾಯ್ತಿ ಅಭ್ಯರ್ಥಿಗಳು 1ಲಕ್ಷ ಚುನಾವಣಾ ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಮತ ಯಂತ್ರದಲ್ಲಿ ನೋಟಾ ಅಳವಡಿಸಲಾಗಿದೆ. ಅಭ್ಯರ್ಥಿಗಳ ಭಾವಚಿತ್ರ ಇದೆ.

ಪಂಚಾಯತ್ ಫೈಟ್:ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹೆಬ್ಬಾಳ ಜಿಲ್ಲಾ ಪಂಚಾಯ್ತಿ ಕ್ಷೇತ್ರ, ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ, ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ, ಮಾಲೂರು ತಾಲೂಕಿನ ಲಕ್ಕೂರು, ಚಿಂತಾಮಣಿ ತಾಲೂಕಿನ ಕುರುಬೂರು, ಗೌರಿಬಿದನೂರು ತಾಲೂಕಿನ ಅಲಕಪುರ, ಗಂಗಸಂದ್ರ, ಶ್ಯಾಂಪುರ, ರಾಮದುರ್ಗದ ಕಟಕೋಳ,ಹಾನಗಲ್‍ನ ತಿಳವಳ್ಳಿ, ಸಿರಗುಪ್ಪದ ಕರೂರು ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ.

ಜ.25 ರಂದು ಅಧಿಸೂಚನೆ ಜಾರಿಯಾಗಲಿದ್ದು, ಜ.28 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ, ಜ.29 ನಾಮಪತ್ರ ಪರಿಶೀಲನೆ, ವಾಪಸ್ ಪಡೆಯಲು ಜ.31 ಕಡೇ ದಿನವಾಗಿದೆ. ಫೆ.9 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗ ಮತದಾನ ನಡೆಯಲಿದೆ. ಅಗತ್ಯವಿದ್ದರೆ ಫೆ.10 ರಂದು ಮರು ಮತದಾನ ನಡೆಯಲಿದ್ದು, ಫೆ.11 ರಂದು ಮತ ಎಣಿಕೆ ನಡೆದು, ಅದೇ ದಿನ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

Facebook Comments

Sri Raghav

Admin