ಚಿತ್ರರಂಗಕ್ಕೆ ಒಲಿಯುವಳೇ ವರಮಹಾಲಕ್ಷ್ಮಿ…?

ಈ ಸುದ್ದಿಯನ್ನು ಶೇರ್ ಮಾಡಿ

– ಎನ್.ಎಸ್.ರಾಮಚಂದ್ರ
ಸಿನಿಮಾ ಉದ್ಯಮಕ್ಕೆ ಅಗ್ನಿ ಪರೀಕ್ಷೆ ಪ್ರಾರಂಭವಾಗಲಿದೆ. ಇದರಲ್ಲಿ ತೇರ್ಗಡೆ ಆದರೆ ಮಾತ್ರ ಉಳಿಗಾಲ. ಇಲ್ಲದಿದ್ದರೆ ಮತ್ತೆ ಅಂಧಕಾರ. ಜುಲೈ 31ರ ನಂತರ ಅನ್‍ಲಾಕ್ 3.0 ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಈ ಹಂತದಲ್ಲಿ ಚಿತ್ರಮಂದಿರಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ.

ಈಗಾಗಲೇ ಹಲವಾರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆಯಲ್ಲದೆ, ಕೊರೊನಾ ಲಾಕ್‍ಡೌನ್ ಆದಾಗ ಸ್ಥಗಿತಗೊಂಡಿದ್ದ ಚಿತ್ರಗಳ ಪ್ರದರ್ಶನವನ್ನು ಆದ್ಯತೆಯ ಮೇಲೆ ಪುನರಾರಂಭಿಸಬೇಕಾಗಿದೆ.

ಚಿತ್ರ ಪ್ರದರ್ಶನಕ್ಕೆ ಅವಕಾಶ ದೊರೆಯಲಿದೆ ಎಂಬ ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರ ಮಾಲೀಕರು ಜಾಗೃತರಾಗಿದ್ದಾರೆ. ಚಿತ್ರಮಂದಿರಗಳು ತೆರೆದರೂ ಹಲವು ನಿರ್ಬಂಧಗಳನ್ನು ಅನುಸರಿಸಬೇಕು.

ಥಿಯೇಟರ್ ಒಳಗೆ ಸೀಟ್‍ಗಳ ನಡುವೆ ಅಂತರ ನೋಡಿ ಜನರನ್ನು ಕೂರಿಸಬೇಕು. ಪ್ರತಿ ಪ್ರದರ್ಶನದ ನಂತರ ಇಡೀ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು, ಚಿತ್ರಮಂದಿರದ ಆವರಣದಲ್ಲಿ ಆಹಾರ ಮಾರಾಟ, ಸರಬರಾಜು ಮಾಡಬಾರದು, ಪ್ರದರ್ಶನದ ನಡುವೆ ಅರ್ಧ ಗಂಟೆ ಅವಧಿಯ ಇಂಟರ್‍ವಲ್ ಇರಬೇಕು, ಪ್ರತಿಯೊಬ್ಬ ಪ್ರೇಕ್ಷಕನ ಜ್ವರ ತಪಾಸಣೆ ಮಾಡಬೇಕು,

ಚಿತ್ರಮಂದಿರದ ಸಿಬ್ಬಂದಿ ವರ್ಗದವರ ಆರೋಗ್ಯ ಸುಸ್ಥಿತಿಯಲ್ಲಿರಬೇಕು, ಪ್ರದರ್ಶನ ಮುಗಿದ ನಂತರ ಚಿತ್ರಮಂದಿರದಿಂದ ಹೊರಗೆ ಬರುವ ಹಾಗೂ ಮುಂದಿನ ಪ್ರದರ್ಶನಕ್ಕಾಗಿ ಒಳಗೆ ಹೋಗುವ ಜನರ ನೂಕುನುಗ್ಗಲಾಗಬಾರದು, ಚಿತ್ರಮಂದಿರದ ಒಟ್ಟು ಆಸನ ಸಾಮಥ್ರ್ಯದ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ಕೊಡಬೇಕು ಮುಂತಾದ ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ.

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಮುಖಂಡರಾದ ಕೆ.ವಿ.ಚಂದ್ರಶೇಖರ್ ಅವರು ಪ್ರತಿಕ್ರಿಯಿಸುತ್ತ, ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯ ಅಂದಿದ್ದಾರೆ.

ಚಿತ್ರಮಂದಿರದ ಒಟ್ಟು ಆಸನ ಸಾಮಥ್ರ್ಯದ ಶೇ.25 ಮಂದಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದುಬಂತು. ಶೇ.25ರಷ್ಟು ಪ್ರೇಕ್ಷಕರಿಗಾಗಿ ಸಿನಿಮಾ ನಡೆಸುವುದು ಅಸಾಧ್ಯ.

ಅದರ ಬದಲು ಚಿತ್ರಮಂದಿರವನ್ನು ಬಂದ್ ಮಾಡುವುದೇ ಲೇಸು ಎಂದು ನಿರ್ಧರಿಸಿದ್ದೆವು. ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡುವುದಾದರೆ ಅಭ್ಯಂತರವಿಲ್ಲ. ಸರ್ಕಾರದ ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ನಾವು ಸಿದ್ಧ ಎಂದು ಚಂದ್ರಶೇಖರ್ ಅವರು ಈ ಸಂಜೆಯೊಂದಿಗೆ ಮಾತನಾಡುತ್ತಾ ತಿಳಿಸಿದರು.

ನಮ್ಮ ಒಟ್ಟು ಜನಸಂಖ್ಯೆಯ ಪೈಕಿ ಶೇ.10ರಷ್ಟು ಮಾತ್ರ ಸಿನಿಮಾಸಕ್ತರು. ಅವರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತಪ್ಪದೆ ಬರುತ್ತಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆರೆ ಕಂಡರೆ ಅದಕ್ಕೆ ಖಂಡಿತವಾಗಿಯೂ ಒಳ್ಳೆ ಓಪನಿಂಗ್ ಸಿಗುತ್ತದೆ. ಆದರೆ, ನನ್ನ ಪ್ರಕಾರ ಆ ಚಿತ್ರ ತಕ್ಷಣ ಬಿಡುಗಡೆ ಆಗುವುದಿಲ್ಲ. ಕೆಲವು ವಾರಗಳು ಬೇಕು.

ಆರಂಭದಲ್ಲಿ ಕೆಲ ಸೀಮಿತ ಬಂಡವಾಳದ ಸಿನಿಮಾಗಳು ಬರುತ್ತವೆ. ಅವು ಪ್ರಯೋಗಕ್ಕೆ ಒಳಗಾಗುತ್ತವೆ. ಅಂತಹ ಸಿನಿಮಾಗಳಿಗೂ ಪ್ರೇಕ್ಷಕರು ಆಸಕ್ತಿ ತೋರುತ್ತಾರಾ ಅಂತ ನೋಡಬೇಕು ಎಂದು ಚಂದ್ರಶೇಖರ್ ಹೇಳಿದರು.

ಕನ್ನಡ ಚಿತ್ರರಂಗದ ಪಾಲಿಗೆ ವರಮಹಾಲಕ್ಷ್ಮಿ ಹಬ್ಬ ಅದೃಷ್ಟದ ಸಂಕೇತ. ಆ ಹಬ್ಬದಂದು ಪ್ರತಿವರ್ಷ ಹಲವು ಹೊಸ ಸಿನಿಮಾಗಳು ಸೆಟ್ಟೇರುತ್ತವೆ. ಭಾರೀ ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವರ್ಷ ಮಾತ್ರ ಚಿತ್ರರಂಗದ ಪಾಲಿಗೆ ಹಬ್ಬದ ಭರ್ಜರಿ ಸಡಗರವಿಲ್ಲ.

ಜಯರಾಜ್ (ಧನಂಜಯ್ ನಾಯಕ), ರತ್ನನ್ ಪರಪಂಚ ಮುಂತಾದ ಒಂದೆರಡು ಸಿನಿಮಾಗಳಿಗೆ ವರಮಹಾಲಕ್ಷ್ಮಿ ಹಬ್ಬದಂದು ಚಾಲನೆ ಸಿಗಬಹುದು.

ವಿಜಯ್ ಕಿರಗಂದೂರ್ ನಿರ್ಮಿಸಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಕೆಜಿಎಫ್-2 ಚಿತ್ರದ ಹೊಸ ಪೋಸ್ಟರ್ ಅನ್ನು ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಯಶ್ ನಾಯಕನಾಗಿರುವ ಈ ಚಿತ್ರದಲ್ಲಿ ಹಿಂದಿಯ ಖ್ಯಾತನಟ ಸಂಜಯ್‍ದತ್ ಅಭಿನಯಿಸಿದ್ದಾರೆ. ಅವರ ಪಾತ್ರದ ಹೆಸರು ಅಧೀರ.

ಇದೇ 29ರಂದು ಅವರ ಜನ್ಮದಿನ. ಆದ್ದರಿಂದ ಅವರ ವಿಶೇಷ ಭಂಗಿಯಿಂದ ಕೂಡಿದ ಪೋಸ್ಟರ್ ರಿಲೀಸ್ ಆಗಲಿದೆ. ರಚಿತಾರಾಮ್ ಅವರ ಹೊಸ ಚಿತ್ರವೊಂದರ ಘೋಷಣೆ ಆಗುವ ಸಂಭವವೂ ಇದೆ. ಇದಲ್ಲದೆ ಧ್ರುವ ಸರ್ಜಾ ಅವರ ಪೊಗರು (ತೆಲುಗು) ಎಂಬ ಚಿತ್ರದ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಕಾಲಚಕ್ರ ಎಂಬ ಸಿನಿಮಾದ ಹಾಡೂ ರಿಲೀಸ್ ಆಗಲಿದೆ.

ಒಟ್ಟಿನಲ್ಲಿ ಅನ್‍ಲಾಕ್ 3.0ಅನ್ನು ಕನ್ನಡ ಚಿತ್ರೋದ್ಯಮವು ಕುತೂಹಲದಿಂದ ಎದುರು ನೋಡುತ್ತಿದೆ. ಜನಸಾಮಾನ್ಯರನ್ನು ಕೊರೊನಾ ಭೀತಿ ಕಾಡುತ್ತಿರುವುದರಿಂದ ಅವರು ಚಿತ್ರಮಂದಿರಕ್ಕೆ ನಿರ್ಭೀತಿಯಿಂದ ಬರುತ್ತಾರೋ, ಇಲ್ಲವೋ ಅನ್ನುವುದು ಸದ್ಯದ ಪ್ರಶ್ನೆ.

ಆಗಸ್ಟ್ 1ರಿಂದ ಚಿತ್ರಮಂದಿರಗಳ ಬಾಗಿಲು ತೆರೆಯುವ ನಿರೀಕ್ಷೆ ಇದೆ. ಕೊರೊನಾ ಭೀತಿಯ ನಡುವೆಯೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಇದೊಂದು ಅಗ್ನಿ ಪರೀಕ್ಷೆ. ಇದನ್ನೆದುರಿಸಲು ಕನ್ನಡ ಚಿತ್ರರಂಗ ಸನ್ನದ್ಧವಾಗುತ್ತಿದೆ. ಈ ಪರೀಕ್ಷೆಯ ಫಲಿತಾಂಶವು ಚಿತ್ರರಂಗದ ಪ್ರಗತಿಯ ಮೇಲೆ ಗಾಢ ಪರಿಣಾಮ ಬೀರಲಿದೆ.

Facebook Comments

Sri Raghav

Admin