ಬುದ್ದಿ ಕಲಿಯದ ಬೆಂಗಳೂರಿನ ಜನ, ಕಾದಿದೆ ಕೊರೋನಾಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ನಗರದ 38ಕ್ಕೂ ಹೆಚ್ಚು ಪ್ರದೇಶಗಳು ಕೊರೊನಾ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿದ್ದರೂ ಇಲ್ಲಿನ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಉಚಿತ ಹಾಲಿಗಾಗಿ ಲಗ್ಗೆರೆ ವಾರ್ಡ್‍ನಲ್ಲಿ ಎರಡು ಕಿ.ಮೀ.ಗೂ ಹೆಚ್ಚು ಉದ್ದ ಜನ ಕ್ಯೂ ನಿಂತಿದ್ದರು. ಇದೀಗ ಸಿದ್ದಾಪುರ ವಾರ್ಡ್‍ನ ಲಾಲ್‍ಬಾಗ್ ಸಮೀಪ ರೇಷನ್ ಕಿಟ್ ಪಡೆಯಲು ಜನ ಇರುವೆ ಸಾಲಿನಂತೆ ಸಾಲುಗಟ್ಟಿ ನಿಂತಿದ್ದಾರೆ.

ರೇಷನ್ ಕಿಟ್ ಪಡೆಯಲು ಮಾಸ್ಕ್ ಇಲ್ಲದೆ, ಸಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೂ ಯಾವೊಬ್ಬ ಮುಖಂಡರೂ ಇದರ ಬಗ್ಗೆ ಗಮನ ಹರಿಸದಿರುವುದು ದುರಂತವೇ ಸರಿ.ಈಗಾಗಲೇ ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ಮೃತ ವ್ಯಕ್ತಿ ಹಲವಾರು ಜನರೊಂದಿಗೆ ಸಂಪರ್ಕವಿರಿಸಿಕೊಂಡಿದ್ದ. ಇದುವರೆಗೂ ಅಲ್ಲಿನ 79ಕ್ಕೂ ಹೆಚ್ಚು ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಹಾಟ್‍ಸ್ಪಾಟ್ ಆಗಿರುವ ಟಿಪ್ಪು ನಗರದ ಜನ ಸ್ವಯಂ ಪ್ರೇರಿತವಾಗಿ ತಮ್ಮ ಪ್ರದೇಶವನ್ನು ಸೀಲ್‍ಡೌನ್ ಮಾಡಿಕೊಂಡಿದ್ದಾರೆ. ಮನೆಯಿಂದ ಹೊರ ಬರಲು ಜನ ಹೆದರುತ್ತಿರುವುದರಿಂದ ಟಿಪ್ಪು ನಗರದ ಪ್ರತಿ ಗಲ್ಲಿಯೂ ಖಾಲಿ ಖಾಲಿಯಾಗಿದೆ. ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಬ್ಬಿಣ ಮತ್ತಿತರ ವಸ್ತುಗಳಿಂದ ಸೀಲ್ ಮಾಡಲಾಗಿದೆ.

ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಸೀಲ್‍ಡೌನ್‍ಗೆ ಒಳಗಾಗಿದ್ದ ಬಾಪೂಜಿನಗರ ಮತ್ತು ಪಾದರಾಯನಪುರದ ಜನರ ಆತಂಕಕ್ಕೆ ಒಳಗಾಗಿದ್ದಾರೆ.ಸೀಲ್‍ಡೌನ್ ಆಗಿದ್ದರೂ ಉದಾಸೀನದಿಂದ ಬೀದಿ ಬೀದಿ ಸುತ್ತುತ್ತಿದ್ದ ಈ ಎರಡು ವಾರ್ಡ್‍ಗಳ ನಾಗರಿಕರು ಟಿಪ್ಪು ನಗರದ ಪ್ರಕರಣದ ನಂತರ ಎಚ್ಚೆತ್ತುಕೊಂಡಿದ್ದಾರೆ. ಈ ವಾರ್ಡ್‍ಗಳ ಜನರು ಮನೆ ಬಿಟ್ಟು ಹೊರ ಬರುತ್ತಿಲ್ಲ. ಹೀಗಾಗಿ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿವೆ.

# ಎಲ್ಲೆಲ್ಲಿ ಹಾಟ್‍ಸ್ಪಾಟ್‍ಗಳು:
ಬೊಮ್ಮನಹಳ್ಳಿಯ ಸಿಂಗಸಂದ್ರ, ಬೇಗೂರು. ಮಹದೇವಪುರದ ಹಗದೂರು, ಗರುಡುಚಾರ್‍ಪಾಳ್ಯ, ವರ್ತೂರು, ಹೂಡಿ, ಹೊರಮಾವು, ರಾಮಮುರ್ತಿನಗರ. ಬೆಂಗಳೂರು ಪೂರ್ವ ವಲಯದ ವಸಂತನಗರ, ಗಂಗಾನಗರ, ಲಿಂಗರಾಜಪುರ, ಜೀವನ್ ಭೀಮಾನಗರ, ರಾಧಾಕೃಷ್ಣ ಟೆಂಪಲ್, ಸಿ.ವಿ.ರಾಮನ್‍ನಗರ, ರಾಮಸ್ವಾಮಿಪಾಳ್ಯ, ಮಾರುತಿ ಸೇವಾ ನಗರ, ಸಂಪಗಿರಾಮನಗರ. ದಕ್ಷಿಣ ವಲಯದ ಗಿರಿನಗರ, ಆಡುಗೋಡಿ, ಸದ್ದುಗುಂಟೆ ಪಾಳ್ಯ, ಶಾಕಾಂಬರಿನಗರ, ಜೆ.ಪಿ.ನಗರ, ಗುರ್ರಪ್ಪನಪಾಳ್ಯ, ಬಾಪೂಜಿನಗರ, ಹೊಸಹಳ್ಳಿ, ಸುಧಾಮನಗರ, ಮಡಿವಾಳ, ಅತ್ತಿಗುಪ್ಪೆ, ಕರಿಸಂದ್ರ. ಪಶ್ಚಿಮವಲಯದ ಅರಮನೆನಗರ, ನಾಗರಬಾವಿ, ನಾಗಪುರ, ಶಿವನಗರ, ಅಜಾದ್‍ನಗರ, ಜೆ.ಜೆ.ನಗರ, ಸುಭಾಷ್‍ನಗರ ಹಾಗೂ ಯಲಹಂಕದ ಥಣಿಸಂದ್ರ ಮತ್ತು ಬ್ಯಾಟರಾಯನಪುರ ವಾರ್ಡ್‍ಗಳು ಕೊರೊನಾ ಹಾಟ್‍ಸ್ಪಾಟ್‍ಗಳಾಗಿವೆ.

ಬಿಬಿಎಂಪಿಯ 198 ವಾರ್ಡ್‍ಗಳ ಪೈಕಿ 36 ವಾರ್ಡ್‍ಗಳನ್ನು ಹಾಟ್‍ಸ್ಪಾಟ್‍ಗಳೆಂದು ಗುರುತಿಸಲಾಗಿದೆ. ಈ ಹಾಟ್‍ಸ್ಪಾಟ್‍ಗಳಲ್ಲಿ ದಿನೇ ದಿನೇ ಕೊರೊನಾ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ ಎನ್ನುವುದು ಬಿಬಿಎಂಪಿ ವಾರ್‍ರೂಂ ಮಾಹಿತಿಯಲ್ಲಿ ಬಹಿರಂಗಗೊಂಡಿದೆ.ಒಬ್ಬ ಸೋಂಕಿತ 50ಕ್ಕೂ ಹೆಚ್ಚು ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವುದು ಗೊತ್ತಾಗಿದ್ದು, ಸೋಂಕಿತ ವ್ಯಕ್ತಿ ವಾಸವಾಗಿರುವ ಮೂರು ಕಿ.ಮೀ. ಪ್ರದೇಶವನ್ನು ಬಫರ್‍ಜೋನ್ ಎಂದು ಗುರುತಿಸಲಾಗಿದ್ದು, ಈ ಪ್ರದೇಶಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ನಗರದಲ್ಲಿ ಇದುವರೆಗೂ 80 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 52 ಪುರುಷರು ಹಾಗೂ 25 ಮಹಿಳೆಯರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.

ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 31 ಸೋಂಕಿತರು ಗುಣಮುಖರಾಗಿ ಮನೆಗಳಿಗೆ ವಾಪಸಾಗಿದ್ದಾರೆ. 21 ಪುರುಷರು ಹಾಗೂ 11 ಮಹಿಳೆಯರು ಸೋಂಕು ಮುಕ್ತರಾಗಿದ್ದು, ಇತರ ಹಲವಾರು ಮಂದಿ ಕ್ವಾರಂಟೈನ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ನಗರದ ಜನತೆ ಇನ್ನು ಮುಂದಾದರೂ ಅನಾವಶ್ಯಕವಾಗಿ ಬೀದಿಗಿಳಿಯುವುದನ್ನು ಬಿಟ್ಟು ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲಿರುವುದೇ ಸೂಕ್ತ.

ಬೇಜವಾಬ್ದಾರಿಯಿಂದ ಬೀದಿಗಿಳಿದು ಮಹಾಮಾರಿ ಕೊರೊನಾವನ್ನು ಮೈ ಮೇಲೆ ಎಳೆದುಕೊಂಡು ಮನೆಗಳಿಗೆ ತೆರಳಿದರೆ ಇನ್ನಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಮನೆಯಲ್ಲೇ ಇದ್ದು ಮಾರಣಾಂತಿಕ ರೋಗದಿಂದ ಪಾರಾಗುವತ್ತ ಗಮನ ಹರಿಸಬೇಕಿದೆ.

Facebook Comments

Sri Raghav

Admin