ದಾವಣಗೆರೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಅರ್ಥಿಕ ಚಟುವಟಿಕೆಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಮೇ.13- ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ದಾವಣಗೆರೆ ಜನರಿಗೆ ಜಿಲ್ಲಾಡಳಿತ ಸಿಹಿ ಸುದ್ದಿ ನೀಡಿದೆ. ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಅರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಹತ್ವದ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪು ವಲಯ ಇದ್ದರೂ ಕೂಡ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಸೇರಿದಂತೆ ಕೋವಿಡ್ ನಿಯಂತ್ರಣದ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದರು.

ಕೈಗಾರಿಕಾ ಪ್ರದೇಶ ಮತ್ತು ಗ್ರಾಮಾಂತರ ಕೈಗಾರಿಕೆಗಳು, ರಫ್ತು, ಅಗತ್ಯ ವಸ್ತುಗಳ ಅಂಗಡಿಗಳು, ಸಣ್ಣಪುಟ್ಟ ಬಟ್ಟೆ ಅಂಗಡಿ, ಸ್ಟುಡಿಯೋ, ಮೆಕ್ಯಾನಿಕ್ ಶಾಪ್, ಉತ್ಪಾದನಾ ಘಟಕಗಳು, ಇ-ಕಾಮರ್ಸ್, ಸರ್ಕಾರಿ ಕಚೇರಿಗಳು ಹಾಗೂ ಶೇ.33 ಸಿಬ್ಬಂದಿಗಳೊಂದಿಗೆ ಖಾಸಗಿ ಕಚೇರಿಗಳನ್ನು ಆರಂಭಿಸಬಹುದು. ಆರ್ಥಿಕ ಚಟುವಟಿಕೆದಾರರು ಪಾಲಿಕೆಗೆ ಸ್ವಯಂ ಘೋಷಣಾ ಮುಚ್ಚಳಿಕೆ ಬರೆದು ಚಟುವಟಿಕೆ ಆರಂಭಿಸಬೇಕು.

ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮೊದಲು ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಗೆ ಅಂಗಡಿಯನ್ನು ಸೀಲ್ ಮಾಡಿಸಲಾಗುವುದು.

ಸರ್ಕಾರದ ಮಾರ್ಗಸೂಚಿಯಂತೆ ಅಂತರ ಜಿಲ್ಲೆ, ರಾಜ್ಯ ಸಾರಿಗೆ, ವಿಮಾನಯಾನ, ಶಾಲಾ ಕಾಲೇಜು, ಸಿನೆಮಾ,ಧರ್ಮ ಸಭೆಗಳು, ಇತರೆ ಸಭೆ ಸಮಾರಂಭಗಳು, ಪ್ರಾರ್ಥನಾ ಮಂದಿರಗಳು, ಶಾಪಿಂಗ್ ಮಾಲï, ಮನರಂಜನಾ ಸ್ಥಳಗಳು, ಕ್ಷೌರದ ಅಂಗಡಿಗಳು, ಜಿಮï, ಬಾರ್‍ಗಳು ಸೇರಿದಂತೆ ಜನಸಂದಣಿ ಆಗುವುದನ್ನು ನಿಷೇಧಿಸಲಾಗಿದೆ.

ಇಂದು ಅಹಮದಾಬಾದ್ ಪ್ರಯಾಣ ಹಿನ್ನೆಲೆ ಹೊಂದಿರುವ 22 ಜನರು ಜಿಲ್ಲೆಗೆ ಆಗಮಿಸಿದ್ದು , ಅವರನ್ನು ಕ್ವಾರಂಟೈನ್ ಮಾಡಿ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್  ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಶಿವನಗರದಲ್ಲಿ ಕಂಟೈನ್‍ಮೆಂಟï ಝೋನ್ ಸ್ಥಾಪನೆ ಬಗ್ಗೆ ಸ್ಥಳೀಯರಿಂದ ಸ್ವಲ್ಪ ಆಕ್ಷೇಪಣೆ ಬಂದ ಹಿನ್ನೆಲೆ ಇಂದು ನಾನು, ಡಿಸಿ, ಪಾಲಿಕೆ ಆಯುಕ್ತರು ಭೇಟಿ ನೀಡಿ ಅವರ ಕುಂದು ಕೊರತೆ ಆಲಿಸಿ, ಆಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ತಿಳಿಸಿ ಬಂದಿದ್ದೇವೆ. ಜೊತೆಗೆ ಕುಡಿಯುವ ನೀರಿನ ಅವರ ಬೇಡಿಕೆಗೆ ಸ್ಪಂದಿಸಿ ಪಾಲಿಕೆ ವತಿಯಿಂದ ಮೋಟಾರ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Facebook Comments

Sri Raghav

Admin