ಸಡಿಲಗೊಳ್ಳುತ್ತಿವೆ ಲಾಕ್ ಡೌನ್ ನಿಯಮಾವಳಿಗಳು, ಕೊರೋನಾ ಸೋಂಕು ಮತ್ತಷ್ಟು ಹೆಚ್ಚುವ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.1- ದಿನ ಬಳಕೆ ವಸ್ತುಗಳ ಖರೀದಿ ನೆಪದಲ್ಲಿ ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗುತ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ರಾಜ್ಯ ಸರ್ಕಾರದ ಮುಂಜಾಗೃತೆಯ ಕ್ರಮವಾಗಿ ಕರ್ನಾಟಕದಲ್ಲಿ ಸೋಂಕು ವ್ಯಾಪಿಸುವ ಪ್ರಮಾಣ ಹಾಗೂ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ತೆಗೆದುಕೊಂಡಿರುವ ಕ್ರಮಗಳು ಶ್ಲಾಘನಾರ್ಹವಾಗಿವೆ.

ಅಲ್ಲಿ ಅನಗತ್ಯವಾಗಿ ನಡೆದ ಲಾಠಿ ಪ್ರಹಾರಗಳು ಹಾಗೂ ಧಾರ್ಮಿಕ ಸಭೆಗಳ ಹೆಸರಿನಲ್ಲಿ ನಡೆದ ಜನಸಂದಣಿ ಹೊರತು ಪಡಿಸಿ ರಾಜ್ಯ ಸರ್ಕಾರದ ಕ್ರಮಗಳ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಿವೆ.ದೇಶದಲ್ಲೇ ಮೊದಲ ಬಾರಿ ರಾಜ್ಯದ ಕಲ್ಬುರ್ಗಿ ಜಿಲ್ಲೆಯಲ್ಲಿ ಕೊರೊನಾ ಸಾವು ಸಂಭವಿಸಿತ್ತು. ಅಂದಿನಿಂದ ಮುಂದಿನ ಅನಾವುತಗಳ ಬಗ್ಗೆ ಭಾರೀ ಆತಂಕವೇ ಇತ್ತು. ಆದರೆ ಯಮಕಿಂಕರನಂತೆ ಬಂದೊದಗಿದ ಅಪಾಯದ ತೀವ್ರತೆ ಕಡಿಮೆಯಾಗಿದೆ.

ಆದರೆ ಇತ್ತೀಚೆಗೆ ಜನ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಲಾರಂಭಿಸಿದ್ದಾರೆ. ಬೆಂಗಳೂರು ನಗರದಲ್ಲಿ ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಅಡ್ಡ ಇಟ್ಟು ಸಂಚಾರವನ್ನು ನಿರ್ಬಂಧಿಸಿದ್ದಾರೆ. ಬಡಾವಣೆಗಳ ನಡುವೆಯೂ ಹಗ್ಗಗಳನ್ನು ಕಟ್ಟಿ ಜನ ಸಂಚಾರವನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ಮನೆಯಲ್ಲಿರಲಾರದೆ ರಾಜೋರೋಷವಾಗಿ ಊರು ಸುತ್ತುತ್ತಿದ್ದಾರೆ.

ಸಂಜೆಯ ವೇಳೆ ಮಾರುಕಟ್ಟೆ ಸ್ಥಳಗಳು ಎಂದಿನಂತೆ ಗಿಜಿಗುಡುತ್ತಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು, ಸೋಪು ಹಚ್ಚಿ ಕೈತೊಳೆದುಕೊಳ್ಳುವುದು…. ಸೇರಿದಂತೆ ಈ ಯಾವ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ಪಾಸ್ ಸಹಿತವಾದ ಅನುಮತಿ ನೀಡಲಾಗಿದೆ. ಕೇಲವು ಕಡೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳೆ ಹಣ್ಣು ತರಕಾರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.

ಆದರೆ ಬೆಂಗಳೂರಿನಲ್ಲಿ ಸಂಚಾರ ನಿರ್ಬಂದಿಸಲಾಗಿದೆಯಾದರೂ ಅಗತ್ಯ ವಸ್ತುಗಳ ಪೂರೈಕೆಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಆರಂಭದಲ್ಲಿ ಒಂದು ವಾರ ಕಾಲ ಮನೆಯಲ್ಲಿದ್ದ ದಿನಸಿಗಳನ್ನು ಬಳಕೆ ಮಾಡಿಕೊಂಡು ಲಾಕ್ ಡೌನ್ ಪಾಲಿಸಿದ್ದ ನಾಗರೀಕರು ದಿನ ಕಳೆದಂತೆ ದಿನಸಿಗಳಿಗೆ ಮತ್ತು ಹಣ್ಣು ತರಕಾರಿಗಳಿಗೆ ಹೊರ ಬರಲಾರಂಭಿಸಿದ್ದಾರೆ.

ಈವರೆಗೂ ನಿಯಂತ್ರಣದಲ್ಲಿದ್ದ ಸೋಂಕು ಇನ್ನು ಮುಂದೆ ಹೆಚ್ಚಾಗುವ ಆತಂಕಗಳು ಕಾಡಲಾರಂಭಿಸಿವೆ. ಲಾಕ್ ಡೌನ್ ಅವಧಿ 21 ದಿನಗಳವರೆಗೆ ಇದೆ. ಅಷ್ಟು ದಿನಗಳ ಮಟ್ಟಿಗೆ ದಿನಸಿ ದಾಸ್ತಾನು ಮಾಡಿಕೊಳ್ಳಲು ಜನರಿಗೆ ಅವಕಾಶವೂ ಸಿಕ್ಕಿರಲಿಲ್ಲ. ಏಕಾಏಕಿ ಘೋಷಣೆಯಾದ ಲಾಕ್ ಡೌನ್ ಆರಂಭದಲ್ಲಿ ಅನುಸರಣೆಗೆ ಜನ ಸಹಕರಿಸಿದರು.

ಆದರೆ ದಿನ ಕಳೆದಂತೆ ಅಗತ್ಯ ವಸ್ತುಗಳಿಗೆ ಹೊರ ಬರಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಲಿ ಕಾರ್ಮಿಕರು, ಭಿಕ್ಷುಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜಂಟಿಯಾಗಿ ಊಟ ತಲುಪಿಸುವ ಪ್ರಯತ್ನ ಮಾಡುತ್ತಿವೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಕ್ಕಿಯನ್ನು ಪೂರೈಸುವ ಯೋಜನೆಯೂ ಜಾರಿಯಲ್ಲಿದೆ. ಆದರೆ ಅದಿನ್ನು ಅನುಷ್ಠಾನವಾಗಿಲ್ಲ.

ಇದು ಅನಿರೀಕ್ಷಿತ ಸನ್ನಿವೇಶ. ಜನ ಸಹಕರಿಸಬೇಕು ಎಂದು ಸರ್ಕಾರದ ಪ್ರತಿನಿಧಿಗಳು ಮನವಿ ಮಾಡುತ್ತಿದ್ದಾರೆ. ಆದರೆ ಆ ಮನವಿ ಜನರ ಹೊಟ್ಟೆ ತುಂಬಿಸುತ್ತಿಲ್ಲ. ನೂತನ ಸಚಿವರಲ್ಲಿ ಈ ಸಂದರ್ಭದಲ್ಲಿ ಪ್ರಚಾರ ಗಿಟ್ಟಿಸಲು ಅನಾರೋಗ್ಯಕರ ಪೈಪೋಟಿ ನಡೆಯುತ್ತಿದೆ. ಇಲಾಖೆಗಳ ಸಚಿವರು ತಮ್ಮ ಜವಾಬ್ದಾರಿ ಅರಿತು ಸರಿಯಾಗಿ ಕೆಲಸ ಮಾಡಿದ್ದರೆ ಬಹಳಷ್ಟು ಸಮಸ್ಯೆಗಳು ಬಗೆ ಹರಿಯುತ್ತಿದ್ದವು. ಆದರೆ ಅದಾಗುತ್ತಿಲ್ಲ.

ಬಡತನ ರೇಖೆಗಿಂತ ಕೆಳಗಿರುವವರ ಬಗ್ಗೆ ಕಾಳಜಿ ವಹಿಸುವುದಾಗಿ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಅವರಿಗಿಂತ ಮೇಲ್ಪಟ್ಟ ಸ್ಥರದ ಜನರ ಬಗ್ಗೆ ಯಾರು ಮಾತನಾಡುತ್ತಿಲ್ಲ. ದುಡ್ಡಿದ್ದರೂ ದಿನಸಿ ಖರೀದಿಗೆ ಹೋಗುವಂತಿಲ್ಲ, ಸೋಂಕು ಮತ್ತು ಪೊಲೀಸರ ಭಯ ಒಂದು ಕಡೆಯಾದರೆ, ಇನ್ನೂ ಕೆಲವರು ಯಾವುದೇ ಭಯ ಇಲ್ಲದೆ ಹೊರ ಬಂದು ಸೋಂಕಿಗೆ ಆಹಾರ ಒದಗಿಸುತ್ತಿದ್ದಾರೆ. ಜೊತೆಗೆ ಸೋಂಕಿನ ತೀವ್ರತೆ ಹೆಚ್ಚಲು ಕುಮ್ಮಕ್ಕು ನೀಡುತ್ತಿದ್ದಾರೆ.

Facebook Comments

Sri Raghav

Admin