ಮದ್ಯೋತ್ಸವ : ರಾಜ್ಯಾದ್ಯಂತ ಎಣ್ಣೆ ಅಂಗಡಿ ಓಪನ್, ಗುಂಡು ಪ್ರಿಯರಿಗೆ ಸ್ವರ್ಗ ಸಿಕ್ಕ ಖುಷಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 4- ಸರಿಸುಮಾರು 42 ದಿನಗಳ ನಂತರ ಇಂದಿನಿಂದ ರಾಜ್ಯಾದ್ಯಂತ ( ಕಂಟೋನ್ಮೆಂಟ್ ಜೋನ್ ಹೊರತುಪಡಿಸಿ) ಮದ್ಯದಂಗಡಿಗಳು ತೆರೆದಿದ್ದು, ಎಣ್ಣೆ ಇಲ್ಲದೆ ಕಂಗಾಲಾಗಿದ್ದ ಮದ್ಯಪ್ರಿಯರಿಗೆ ಸ್ವರ್ಗವೇ ಸಿಕ್ಕಂತಾಗಿದೆ.

ರಾಜಧಾನಿ ಬೆಂಗಳೂರು, ಬೆಳಗಾವಿ, ಮಂಗಳೂರು , ಮೈಸೂರು, ಶಿವಮೊಗ್ಗ, ದಾವಣಗೆರೆ, ಕೊಡಗು, ಬೀದರ್,ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಳಗ್ಗೆ 9 ಗಂಟೆಯಿಂದಲ್ಲೇ ಮದ್ಯದಂಗಡಿಗಳು ಆರಂಭವಾಗಿವೆ.

ಎಂಎಸ್‍ಐಎಲ್, ಔಟ್‍ಲೆಟ್, ಸಿಎಎಲ್-2, ಸಿಎಎಲ್-11ಗಳಲ್ಲಿ ಮಾತ್ರ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. 42 ದಿನಗಳವರೆಗೆ ಎಣ್ಣೆ ಸಿಗದೆ ಕಂಗಾಲಾಗಿದ್ದ ಪಾನಪ್ರಿಯರು ಕಳೆದ ರಾತ್ರಿಯಿಂದಲೇ ಅಂಗಡಿಗಳ ಮುಂದೆ ಸರತಿಯಲ್ಲಿ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.

ಕೆಲವು ಕಡೆ ಅಂಗಡಿಗಳನ್ನು ತೆರೆಯುವ ಮುನ್ನ ಪೂಜೆ, ಹೋಮಹವನ ಮಾಡಿರುವುದಲ್ಲದೆ ಸಹಿ ಹಂಚಿ ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿಯೂ ಮದ್ಯದಂಗಡಿಗಳನ್ನು ತೆರೆದಿರುವುದು ಕಂಡುಬಂದಿದೆ.

ಭದ್ರತೆ: ಸರ್ಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡುತ್ತಿದ್ದಂತೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.ಮದ್ಯದಂಗಡಿಗಳ ಎದುರು ಸೂಕ್ತ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಗುರುತುಗಳನ್ನು ಮಾಡಲಾಗಿದ್ದು, ಅಂಗಡಿಗಳ ಸಿಬ್ಬಂದಿಗಳಿಗೂ ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯ ಮಳಿಗೆಗಳು ಸೇರಿದಂತೆ ಬಹುತೇಕ ಎಲ್ಲಾ ಖಾಸಗಿ ಮದ್ಯದಂಗಡಿಗಳು ತೆರೆದಿದ್ದು, ಕೇವಲ ಮದ್ಯ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. 40 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಕಿಕ್ ಪ್ರಿಯರು ಇಂದು ಮದ್ಯ ಖರೀದಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಇನ್ನು ಕೆಲವು ಕಡೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಆರಂಭಿಸಲು ಅಧಿಕಾರಿಗಳು ಅವಕಾಶ ನೀಡಿಲ್ಲ. ಬೆಂಗಳೂರಿನ ಕುರುಬರಹಳ್ಳಿಯ ಅಂಗಡಿಯೊಂದರಲ್ಲಿ ಸಂಗ್ರಹಿಸಿದ್ದ ಮದ್ಯಕ್ಕೂ ಲೆಕ್ಕಕ್ಕೂ ವ್ಯತ್ಯಾಸ ಕಂಡುಬಂದ ಕಾರಣ ಅಬಕಾರಿ ಅಧಿಕಾರಿಗಳು ತೆರೆಯಲು ಅವಕಾಶವನ್ನೇ ಕೊಟ್ಟಿಲ್ಲ.

ಇದೇ ರೀತಿ ರಾಜ್ಯದ ಹಲವಾರು ಕಡೆ ಮದ್ಯದಂಗಡಿಗಳು ಬಂದ್ ಆದ ವೇಳೆ ಕದ್ದುಮುಚ್ಚಿ ಮದ್ಯ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದ ಕಾರಣ ಗಡಿಭಾಗಗಳಲ್ಲಿರುವ ಜನರು ಮದ್ಯ ಖರೀದಿಸಲು ಕದ್ದುಮುಚ್ಚಿ ಅಲ್ಲಲ್ಲಿ ನುಸುಳುತ್ತಿದ್ದ ದೃಶ್ಯಗಳು ಕಂಡುಬಂದಿದೆ.

ಆದರೆ ಪೊಲೀಸರು ಅತಿಯಾದ ಬಿಗಿ ಭದ್ರತೆಯನ್ನು ಕೈಗೊಂಡಿರುವ ಕಾರಣ ಹೊರರಾಜ್ಯಗಳಿಂದ ಯಾರೊಬ್ಬರನ್ನೂ ಒಳಬಿಡುತ್ತಿಲ್ಲ. ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಖರೀದಿಸಿ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಎಣ್ಣೆ ಇಲ್ಲದೆ ಕಂಗಾಲಾಗಿದ್ದ ಕೆಲವರು ಸಿಕ್ಕ ತಕ್ಷಣವೇ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ನಡುರಸ್ತೆಯಲ್ಲೇ ತೂರಾಡುತ್ತಿದ್ದ ದೃಶ್ಯಗಳು ಹಲವೆಡೆ ಕಂಡುಬಂದಿವೆ.
ಇನ್ನು ಕೆಲವೆಡೆ ಸರತಿ ಸಾಲಿನಲ್ಲಿ ಗಂಟಲೇಗಟ್ಟಲೇ ಕಾದು ಮದ್ಯವನ್ನು ಖರೀದಿಸುತ್ತಿದ್ದಾರೆ. ಬಹುತೇಕ ಕಡೆ ಹನುಮಂತನ ಬಾಲದಂತೆ ಸರದಿ ಬೆಳೆದಿತ್ತು.

# ಜೈಕಾರ:
ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜೈಕಾರ ಹಾಕಿರುವ ಪ್ರಸಂಗವೂ ನಡೆದಿದೆ. ನಮ್ಮ ಕಷ್ಟವನ್ನು ಅರಿತು ಮುಖ್ಯಮಂತ್ರಿಯವರು ಮದ್ಯದಂಗಡಿ ತೆರೆಯಲು ಅನುಮತಿ ಕೊಟ್ಟಿದ್ದಾರೆ.

ಯಡಿಯೂರಪ್ಪ ಜೀ ಜೈ ಎಂದು ಅನೇಕರು ಅಂಗಡಿಗಳ ಜೈಕಾರದ ಘೋಷಣೆಗಳನ್ನು ಕೂಗಿದರು. ಮದ್ಯದಂಗಡಿಗಳಿಗೆ ತೆರೆಯಲು ಅವಕಾಶ ನೀಡಿರುವುದರಿಂದ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿಗಳ ಮುಂದೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಅಲ್ಲದೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿತ್ತು. ಏಕಕಾಲದಲ್ಲಿ ಮುಗಿಬಿದ್ದು ಜನರು ಮದ್ಯ ಕೊಳ್ಳಲು ಮುಂದಾದರೆ ನೂಕುನುಗ್ಗಲು ಉಂಟಾಗುವುದಲ್ಲದೆ ಸೋಂಕು ಹರಡಬಹುದೆಂಬ ಭೀತಿಯಿಂದಾಗಿ ನಿಯಮಗಳನ್ನು ಚಾಚೂ ತಪ್ಪದೆ ಪಾಲನೆ ಮಾಡುವಂತೆ ಆದೇಶ ನೀಡಲಾಗಿತ್ತು.

ಬೆಂಗಳೂರಿನ ಕಸ್ತೂರಿ ಬಾ ರಸ್ತೆಯಲ್ಲಿರುವ ಮದ್ಯದಂಗಡಿಯೊಂದರಲ್ಲಿ ಮದ್ಯ ಕೊಳ್ಳಲು ಸರದಿಯಲ್ಲಿ ನಿಂತಿದ್ದ ಯುವತಿಯೊಬ್ಬಳು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಪ್ರಸಂಗವೂ ನಡೆದಿದೆ.

ಬಿಯರ್ ಖರೀದಿಸಲು ಬೆಳಗ್ಗೆಯೇ ಸರದಿಯಲ್ಲಿ ನಿಂತಿದ್ದ ಯುವತಿಯೊಬ್ಬಳು ಗಂಟೆಗಟ್ಟಲೇ ನಿಂತಿದ್ದರಿಂದ ಸುಸ್ತಾಗಿ ಕುಸಿದುಬಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೀಗೆ ಲಾಕ್‍ಡೌನ್‍ನಿಂದಾಗಿ 42 ದಿನಗಳಿಂದ ಪರಿತಪಿಸುತ್ತಿದ್ದ ಎಣ್ಣೆ ಪ್ರಿಯರಿಗೆ ಇಂದು ಮದ್ಯದಂಗಡಿಗಳು ಪ್ರಾರಂಭವಾಗಿರುವುದು ಸ್ವರ್ಗಕ್ಕೆ ಮೂರುಗೇಣು ಎನ್ನುವಂತಾಗಿದೆ.

Facebook Comments

Sri Raghav

Admin