ಸಹಜ ಸ್ಥಿತಿಗೆ ಮರಳಿದ ಬೆಂಗಳೂರು, ರಸ್ತೆಗಳಿದ ವಾಹನಗಳು, ವಾಣಿಜ್ಯ ಚಟುವಟಿಕೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 4- ಕಳೆದ 42 ದಿನಗಳಿಂದ ವ್ಯಾಪಾರ ವಹಿವಾಟು , ಜನಸಂಚಾರ ಇಲ್ಲದೆ ಸಂಪೂರ್ಣವಾಗಿ ಸ್ತಬ್ದಗೊಂಡಿದ್ದ ರಾಜಧಾನಿ ಬೆಂಗಳೂರು ಇಂದಿನಿಂದ ಸಹಜ ಸ್ಥಿತಿಗೆ ಮರಳುತ್ತಿದೆ. ಬಟ್ಟೆ ಅಂಗಡಿಗಳು, ಮಾಲ್‍ಗಳು, ಕ್ಷೌರಿಕ ಅಂಗಡಿಗಳು ಹೊರತುಪಡಿಸಿ ಉಳಿದಂತೆ ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದ್ದು, ಗರಬಡಿದಿದ್ದ ಬೆಂಗಳೂರು ಮತ್ತೆ ಗರಿಗೆದರಿದೆ.

ಕೆಲವು ಷರತ್ತುಗಳನ್ನು ಸಡಿಲಗೊಳಿಸಿರುವ ಪೊಲೀಸರು ಇಂದು ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಹೀಗಾಗಿ 42 ದಿನಗಳಿಂದ ವಾಹನವಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಮತ್ತೆ ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರ ಎಂದಿನಂತೆ ಪ್ರಾರಂಭವಾಗಿದೆ.

ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಂದು ಸಿಬ್ಬಂದಿಯ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈವರೆಗೂ ನಿರ್ಧಿಷ್ಟ ಸಂಖ್ಯೆಯ ಸಿಬ್ಬಂದಿಗೆ ಮಾತ್ರ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಇಂದು ಎಲ್ಲ ಇಲಾಖೆಗಳ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ದೃಶ್ಯ ಕಂಡುಬಂದಿತು. ಪ್ರತಿಯೊಬ್ಬರನ್ನು ಬಿಗಿ ತಪಾಸಣೆ ಹಾಗೂ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾನಿಟೈಸರ್ ಬಳಸುವಂತೆ ಸೂಚನೆ ಕೊಡಲಾಗಿತ್ತು.

ಐಟಿಬಿಟಿ ಕಂಪನಿಗಳ ನೌಕರರು ಪಾಸ್ ಪಡೆದು ತಮ್ಮ ಕರ್ತವ್ಯಕ್ಕೆ ಹಾಜರಾಗಬಹುದೆಂದು ಸೂಚನೆ ಕೊಟ್ಟಿದ್ದರಿಂದ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದ ಟೆಕ್ಕಿಗಳು ಇಂದು ಕಚೇರಿಯತ್ತ ಮುಖ ಮಾಡಿದ್ದಾರೆ.

ಈವರೆಗೂ ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿತ್ತು. ಇದೀಗ ಬಂಗಾರದಂಗಡಿ, ಬಟ್ಟೆ, ಸೆಲೂನ್‍ಶಾಪ್ ಹೊರತುಪಡಿಸಿ ಉಳಿದಂತೆ ಎಲ್ಲ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ವಾಹನಗಳ ಸಂಚಾರ, ಸಾರ್ವಜನಿಕರ ತಿರುಗಾಟಕ್ಕೆ ಅವಕಾಶ ನೀಡಿದ್ದರಿಂದ ಮುಂಜಾನೆಯಿಂದಲೇ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡ ದೃಶ್ಯವು ಕಂಡುಬಂದಿದೆ.

ಪ್ರಮುಖ ರಸ್ತೆಗಳಾದ ವಿಮಾನ ನಿಲಾಣ, ಎಂ.ಜಿರಸ್ತೆ, ಹೊರವರ್ತುಲ, ಮೈಸೂರುರಸ್ತೆ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಮತ್ತಿತರ ರಸ್ತೆ ಮಾರ್ಗಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಹಾಗೂ ಕಚೇರಿಗಳಿಗೆ ವಾಹನಗಳಲ್ಲಿ ತೆರಳುತ್ತಿದ್ದರು.

ಅದರೆ ಎಲ್ಲಿಯೂ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ಅನುಮತಿ ಇಲ್ಲದ ಕಾರಣ ಹಲವೆಡೆ ಜನ ಸಂದಣಿ ಕಡಿಮೆಯಾಗಿತ್ತು. ಅನಗತ್ಯವಾಗಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ vಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಲಾಕ್‍ಡೌನ್‍ನಿಂದ ಒಂದು ರೀತಿ ಗೃಹಬಂಧನ ಅನುಭವಿಸಿದ್ದವರು ಅತಿ ಉತ್ಸಾಹದಿಂದಲೇ ತಮ್ಮ ದಿನಚರಿಯನ್ನು ಆರಂಭಿಸಿದ್ದಾರೆ. ದುಡಿಮೆ ಇಲ್ಲದೆ ಮಂಕಾದ ಕೆಲವು ಕಾರ್ಮಿಕರಿಗೆ ಲಾಕ್‍ಡೌನ್ ಸಡಿಲಿಕೆಯಿಂದ ಹೋದ ಜೀವ ಬಂದಂತಾಗಿದೆ. ಮೇ 3ರವರೆಗೆ ಲಾಕ್‍ಡೌನ್ ವಿಧಿಸಿದ್ದ ಸರ್ಕಾರ ಮೇ 17ಕ್ಕೆ ಮುಂದುವರೆಸಿದ್ದರೂ ಆರ್ಥಿಕ ಸುಧಾರಣೆ ಹಿನ್ನೆಲೆಯಲ್ಲಿ ಇಂದಿನಿಂದ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದೆ.

Facebook Comments

Sri Raghav

Admin