ಲಾಕ್ ಡೌನ್ ಸಡಿಲಿಕೆ : ಬೆಂಗಳೂರಲ್ಲಿ ಏಕಾಏಕಿ ರಸ್ತೆಗಿಳಿದ ಲಕ್ಷಾಂತರ ವಾಹನಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.23- ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಭಾಗಶಃ ಸಡಿಲಿಕೆ ಮಾಡಿದ ಬೆನ್ನಲ್ಲೆ ಬೆಂಗಳೂರಿನಲ್ಲಿಂದು ಲಕ್ಷಾಂತರ ವಾಹನಗಳು ಏಕಾಏಕಿ ರಸ್ತೆಗಿಳಿದಿದ್ದರಿಂದ ಸಂಚಾರ ದಟ್ಟಣೆ ಎಂದಿನಂತೆ ಕಂಡು ಬಂದಿದ್ದು, ಮಹಾಮಾರಿ ಕೊರೊನಾ ಮತ್ತೆ ತನ್ನ ಸಾಂಕ್ರಾಮಿಕತೆಯನ್ನು ಹೆಚ್ಚಿಸಲಿದೆಯೇ ಎಂಬ ಭಯ ಆವರಿಸಿದೆ.

ಕೋವಿಡ್ -19 ನಿಯಂತ್ರಣಕ್ಕೆ ಬಂತು ಎನ್ನುವ ಹಂತದಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ನ ಬಿಗಿ ನಿಯಮಗಳನ್ನು ಸಡಿಲಗೊಳಿಡಿದೆ. ಇದರಿಂದ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಲಕ್ಷಾಂತರ ಮಂದಿ ಮನೆಯಿಂದ ಹೊರ ಬಂದಿದ್ದಾರೆ. ಒಮ್ಮೆಲೆ ಸಾವಿರಾರು ಮಂದಿ ಆಗಮಿಸಿದ್ದರಿಂದ ಪೊಲೀಸರು ತಪಾಸಣೆ ನಡೆಸಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ಬಹಳಷ್ಟು ಮಂದಿ ಅಗತ್ಯ ಸೇವೆಯಲ್ಲದೆ ಇದ್ದರೂ ಮನೆಯಿಂದ ಹೊರಗೆ ಬಂದು ಸಂಚರಿಸಲಾರಂಭಿಸಿದ್ದಾರೆ. ಇದರಿಂದ ಇನ್ನೇನು ಹತೋಟಿಗೆ ಬಂತು ಎಂಬಂತಿದ್ದ ಕೊರೊನಾ ಮತ್ತೆ ಉಲ್ಭಣಿಸುವ ಸಾಧ್ಯತೆಗಳು ಎದುರಾಗಿವೆ.

ಇಂದು ಬೆಂಗಳೂರಿನಲ್ಲಿ ತುಮಕೂರು ರಸ್ತೆ, ಏರ್ ಪೋರ್ಟ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಛಾಗಿತ್ತು. ನಗರದ ಒಳಭಾಗದಲ್ಲಿ ಕೆ.ಆರ್.ವೃತ್ತ, ಕಾರ್ಪೊರೆಷನ್ ಸರ್ಕಲ್, ಕೆ.ಜಿ.ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿತ್ತು.

# ದುರುಪಯೋಗವಾದ ಸಡಿಲಿಕೆ:
ಶೇ.33ರಷ್ಟು ನೌಕರರನ್ನು ಬಳಸಿಕೊಂಡು ಕೆಲ ಕಂಪೆನಿಗಳು ಮತ್ತು ಸರ್ಕಾರಿ ಕಚೇರಿಗಳು ಕೆಲಸ ನಿರ್ವಹಿಸಬಹುದು ಎಂಬ ವಿನಾಯಿತಿ ನೀಡಲಾಗಿದೆ. ಆದರೆ ಒಟ್ಟು ಸಿಬ್ಬಂದಿ ಎಷ್ಟಿದ್ದಾರೆ ಎಂಬ ಲೆಕ್ಕಾಚಾರ ಪೊಲೀಸರ ಬಳಿ ಇಲ್ಲ, ಈಗ ತರಾತುರಿಯಲ್ಲಿ ಕಚೇರಿಯ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿ ಸಂಖ್ಯೆ ಲೆಕ್ಕ ಹಾಕಿ ಪಾಸ್ ವಿತರಿಸಲು ಸಮಯವಾಕಾಶ ಇಲ್ಲ. ಹಾಗಾಗಿ ಕೆಲ ಕಂಪೆನಿಗಳು ಶೇ.33ರಷ್ಟು ಸಿಬ್ಬಂದಿ ಎಂಬ ನಿಯಮವನ್ನು ದುರುಪಯೋಗ ಪಡಿಸಿಕೊಂಡು ಅತಿ ಹೆಚ್ಚಿನ ಪಾಸ್ ಗಳನ್ನು ಪಡೆದುಕೊಳ್ಳುತ್ತಿವೆ. ಪಾಸ್ ಹಂಚಿಕೆಯಲ್ಲಿ ಭ್ರಷ್ಟಚಾರದ ವಾಸನೆ ಹೊಡೆಯುತ್ತಿದೆ.

ಸರ್ಕಾರ ನಿರ್ಮಾಣ ಕಾಮಗಾರಿಗಳಿಗೆ, ಕೆಲವು ವೃತ್ತಿ ನಿರತರಿಗೆ ಅನುಮತಿ ನೀಡಿದೆ. ನಿರ್ಮಾಣ ಕಾರ್ಯಕ್ಕೆ ಬೇಕಾದ ಕಲ್ಲು, ಮರಳು, ಸಿಮೆಂಟ್ ಗಳ ಸಾಗಾಣಿಕೆಗೆ ಅನುಮತಿ ನೀಡಲಾಗಿದೆ. ಆದರೆ ಹಾರ್ಡ್ ವೇರ್ ಅಂಗಡಿಗಳ ಆರಂಭಕ್ಕೆ ಅನುಮತಿ ಇಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಪೈಂಟಿಂಗ್ ಮತ್ತು ಹಾರ್ಡ್ ವೇರ್ ಸಲಕರಣೆಗಳಿಲ್ಲದೆ ನಿರ್ಮಾಣ ಕಾರ್ಯ ಮುಂದುವರೆಯುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

# ಪೊಲೀಸರ ಅಸಹಾಯಕತೆ:
ಇಂದು ಬೆಳಗ್ಗೆಯಿಂದಲೇ ಸಾಕಷ್ಟು ವಾಹನಗಳು ರಸ್ತೆಗಿಳಿದಿದ್ದವು. ಆರಂಭದಲ್ಲಿ ಪೊಲೀಸರು ಕೆಲ ವಾಹನಗಳನ್ನು ತಪಾಸಣೆ ಮಾಡಿದರಾದರೂ ಸಾಗರೋಪಾದಿಯಲ್ಲಿ ಬರುತ್ತಿರುವ ವಾಹನಗಳ ಪೈಕಿ ಪ್ರತಿಯೊಂದನ್ನು ಪರಿಶೀಲನೆ ಮಾಡಲಾಗದೆ ಕೈ ಚೆಲ್ಲಿ ನಿಂತರು. ಕೆಲವೆಡೆ ತಪಾಸಣೆ ಮಾಡಲು ಮುಂದಾದರಾದರೂ ಟ್ರಾಫಿಕ್ ಜಾಮ್ ಆಗಿ ಸಾಮಾಜಿಕ ಅಂತರ ಎಂಬುದು ಅಪಹಾಸ್ಯಕ್ಕೀಡಾಯಿತು. ಹೀಗಾಗಿ ಪೊಲೀಸರು ತಪಾಸಣೆಯನ್ನು ಕೈ ಬಿಟ್ಟು ಸಂಚಾರ ವ್ಯವಸ್ಥೆ ಸುಧಾರಣೆಗೆ ಮುಂದಾದರು.

ದ್ವಿಚಕ್ರವಾಹನದಲ್ಲಿ ಒಬ್ಬರು ಮಾತ್ರ, ಖಾಸಗಿ ಕಾರಿನಲ್ಲಿ ಇಬ್ಬರು ಮಾತ್ರ ಸಂಚರಿಸಬೇಕು ಎಂಬ ನಿಯಮ ಪಾಲನೆಯಾಗಿರಲಿಲ್ಲ. ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗಾಗಿ ಬಿಟ್ಟಿದ್ದ ಬಸ್ ಮತ್ತು ಲಘು ವಾಹನಗಳಲ್ಲಿ ಸಾಮಾಜಿಕ ಅಂತರ ಇಲ್ಲದೆ ಪ್ರಯಾಣಿಕರು ಒತ್ತಾಗಿ ಕುಳಿತಿದ್ದರು. ಆರಂಭದಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನು ಹಾಕಿರಲಿಲ್ಲ. ವಾಹನ ಸಂಖ್ಯೆ ಹೆಚ್ಚಾದಂತೆ ಸಿಗ್ನಲ್ ಗಳನ್ನು ಹಾಕುವುದು ಅನಿವಾರ್ಯವಾಯಿತು.

ಕೊರೊನಾ ಮಹಾಮಾರಿಯ ಸಣ್ಣ ಸೋಂಕು ಮತ್ತಷ್ಟು ಅನಾವುತ ಸೃಷ್ಠಿಸಲಿದೆ ಎಂಬ ಸತ್ಯ ಜಗತ್ತಿನ ಇತರ ರಾಷ್ಟ್ರಗಳಲ್ಲಿನ ಬೆಳವಣಿಗೆಗಳಿಂದ ಸಾದೃಶ್ಯವಾಗಿದೆ. ಕರ್ನಾಟಕದಲ್ಲಿ ಮೇ 3ರವರೆಗೂ ಇದೇ ಬಿಗಿ ನಿಯಮಗಳನ್ನು ಪಾಲಿಸಿದ್ದರೆ ಬಹುಶಃ ಪರಿಸ್ಥಿತಿ ತಹಬದಿಗೆ ಬರುತ್ತಿತ್ತೇನೋ. ಆದರೆ ಲಾಕ್ ಡೌನ್ ಸಡಿಲಿಕೆಯಿಂದ ಜನ ಸಂಚಾರ ಎಂದಿನಂತೆ ಆರಂಭವಾಗಿದೆ. ಸೋಂಕು ಹರಡಲು ಎಲ್ಲಾ ರೀತಿಯ ಅವಕಾಶಗಳನ್ನು ಸರ್ಕಾರವೇ ಮಾಡಿಕೊಟ್ಟಂತಾಗಿದೆ.

ಈವರೆಗೂ ರಾಜ್ಯದಲ್ಲಿ ತಪಾಸಣೆಗಳು ಪರಿಪೂರ್ಣವಾಗಿ ನಡೆದಿಲ್ಲ. ರೋಗ ಲಕ್ಷಣಗಳಿದ್ದವರ ಗಂಟಲು ದ್ರವ್ಯವನ್ನು ಮಾತ್ರ ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಅದರಲ್ಲೂ ಅರ್ಧಭಾಗದಷ್ಟು ಮಂದಿಯ ಮಾದರಿಗಳು ಇನ್ನೂ ತಪಾಸಣೆಯಾಗದೆ ಕಾಯುತ್ತಾ ಇವೆ. ಬಹಳಷ್ಟು ದೇಶಗಳಲ್ಲಿ ರೋಗ ಲಕ್ಷಣಗಳು ಇಲ್ಲದವರಲ್ಲಿಯೂ ಸೋಂಕು ಇರುವುದು ಕಂಡು ಬಂದಿದೆ.

ಅಷ್ಟೇ ಏಕೆ ಬೆಂಗಳೂರಿನಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಸೋಂಕು ಯಾವ ಮೂಲದಿಂದ ಬಂದಿದೆ ಎಂಬುದೇ ಗೋತ್ತಿಲ್ಲ. ಒಂದೆರಡು ದಿನ ಸೋಂಕಿತರು ಪತ್ತೆಯಾಗುವುದು ಕಡಿಮೆಯಾಯಿತು ಎಂಬ ಕಾರಣಕ್ಕೆ ಕೊರೊನಾ ಮಹಾಮಾರಿ ನಿಯಂತ್ರಣದಲ್ಲಿದೆ ಎಂಬ ನಿರ್ಧಾಕ್ಕೆ ಬಂದು ಲಾಕ್ ಡೌನ್ ಸಡಿಲಿಸಿರುವುದು ಟೀಕೆಗೆ ಗುರಿಯಾಗಿದೆ.

Facebook Comments

Sri Raghav

Admin