ಲಾಕ್‍ಡೌನ್ 5.O : ಎಲ್ಲ ರಾಜ್ಯಗಳ ಜೊತೆ ಕೇಂದ್ರ ಸಂಪುಟ ಕಾರ್ಯದರ್ಶಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 28- ಕೊರೊನಾ ವೈರಸ್ ಹಾವಳಿ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ 4ನೆ ಹಂತದ ಲಾಕ್‍ಡೌನ್ ಮೇ 31ರಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಸ್ತರಿಸಬೇಕೆ ಅಥವಾ ಬೇಡವೆ ಎಂಬ ಕುರಿತು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಇಂದು ಮಹತ್ವದ ಸಮಾಲೋಚನೆ ನಡೆಸಿತು.

ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಇಂದು ಬೆಳಗ್ಗೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಯವರೊಂದಿಗೆ ಲಾಕ್‍ಡೌನ್ ಕುರಿತು ಚರ್ಚಿಸಿದರು.

ಅಲ್ಲದೆ, ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ಕೋವಿಡ್-19 ಹಾವಳಿ ಹೆಚ್ಚಾಗಿರುವ ದೇಶದ 13 ರಾಜ್ಯಗಳ ಮಹಾನಗರ ಪಾಲಿಕೆ/ನಗರಸಭೆ ಆಯುಕ್ತರು ಮತ್ತು ಜಿಲ್ಲಾ ದಂಡಾಧಿಕಾರಿಯವರೊಂದಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಈ ಭಾನುವಾರ ರಾತ್ರಿ 12 ಗಂಟೆಗೆ ಲಾಕ್‍ಡೌನ್-4 ಅಂತ್ಯಗೊಳ್ಳಲಿದ್ದು, ಇದನ್ನು 5ನೆ ಹಂತದಲ್ಲೂ ವಿಸ್ತರಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಆಯಾ ರಾಜ್ಯಗಳು ಮತ್ತು ನಗರಗಳಿಂದ ರಾಜೀವ್ ಗೌಬಾ ಮಾಹಿತಿ ಪಡೆದರು.  ಜೂ.1ರಿಂದ ಲಾಕ್‍ಡೌನ್ ವಿಸ್ತರಣೆಯಾದರೂ ಅದು ಮತ್ತಷ್ಟು ಸಡಿಲಿಕೆ ಮತ್ತು ವಿನಾಯಿತಿಗಳೊಂದಿಗೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.

ದೇಶದ ಆರ್ಥಿಕತೆ ಪುನಃಶ್ಚೇತನಕ್ಕೆ ವೇಗ ನೀಡುವುದರ ಜತೆಗೆ ದೇಶದ ಜನರ ಆರೋಗ್ಯ ರಕ್ಷಣೆಗೂ ಆದ್ಯ ಗಮನ ನೀಡಿ ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆ ಇದೆ.

Facebook Comments