ಬೀಗ ಹಾಕಿರುವ ಮನೆಗಳ ರಕ್ಷಣೆಗೆ ತುಮಕೂರು ಪೊಲೀಸರ ಹೊಸ ಆ್ಯಪ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.3- ಹೆಚ್ಚಾಗುತ್ತಿರುವ ಕಳ್ಳಕಾಕರನ್ನು ಮಟ್ಟ ಹಾಕಲು ತುಮಕೂರು ಪೊಲೀಸರು ಹೊಸ ಆ್ಯಪ್‍ಗೆ ಮೊರೆ ಹೋಗಿದ್ದಾರೆ. ಹೊಸ ಆ್ಯಪ್ ಮೂಲಕ ಕಳ್ಳರನ್ನು ಪತ್ತೆ ಹಚ್ಚಲು ಮುಂದಾಗಿರುವ ತುಮಕೂರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಲೇಡಿ ಕಮಿಷನರ್ ಚಿತ್ರದಲ್ಲಿ ನಾಯಕಿ ಇಡೀ ಕುಟುಂಬವನ್ನೇ ಬರ್ಬರವಾಗಿ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಖದೀಮರನ್ನು ಬಂಧಿಸಲು ಹೊಸ ಮಾದರಿಯ ಆ್ಯಪ್‍ಗೆ ಮೊರೆ ಹೋದ ಮಾದರಿಯಲ್ಲೇ ತುಮಕೂರು ಪೊಲೀಸರು ಹೊಸ ಆ್ಯಪ್ ಮೂಲಕ ಕಳ್ಳಕಾಕರನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.

ಏನಿದು ಹೊಸ ಆ್ಯಪ್: ಒಂಟಿ ಮನೆಗಳನ್ನು ಹಾಗೂ ಬೀಗ ಹಾಕಿರುವ ಐಷಾರಾಮಿ ಮನೆಗಳ ದರೋಡೆ, ಕುಡಿಯುವ ನೀರು ಕೇಳುವ ನೆಪದಲ್ಲಿ ಇಲ್ಲವೆ ಕೇಬಲ್ ಆಪರೇಟರ್‍ಗಳಂತೆ ಮನೆಗಳಿಗೆ ಬಂದು ಮನೆಯವರ ಮಾಹಿತಿ ಪಡೆದು ದರೋಡೆ ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ.

ಹೆಚ್ಚಾಗುತ್ತಿರುವ ದರೋಡೆ , ಕಳ್ಳತನ ಪ್ರಕರಣಗಳಿಗೆ ಇತಿಶ್ರೀ ಹಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಳ್ಳರನ್ನು ಪತ್ತೆ ಹಚ್ಚುವ ಹೊಸ ಆ್ಯಪ್ ರೂಪಿಸಿದ್ದಾರೆ.

ಎಲ್‍ಎಚ್‍ಎಂಎಸ್ ತುಮಕೂರು ಆ್ಯಪ್ ಅನ್ನು ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ರಿಜಿಸ್ಟ್ರಾರ್ ಮಾಡಿಕೊಂಡಿರಬೇಕು. ಒಂದು ವೇಳೆ ಮನೆಯವರು ದೂರದ ಊರುಗಳಿಗೆ ಹೋಗಬೇಕಾದರೆ ಆ್ಯಪ್ ಮೂಲಕ ರಿಕ್ವೆಸ್ಟ್ ಪೊಲೀಸ್ ವಾಚ್ ಎಂಬ ಮಾಹಿತಿ ನೀಡಬೇಕು.

ಎಷ್ಟು ದಿನ ಮನೆಗೆ ಬೀಗ ಹಾಕಿರುತ್ತೇವೆ ಎಂಬ ಸಂಪೂರ್ಣ ಮಾಹಿತಿ ರವಾನಿಸಬೇಕು. ಆ ಮಾಹಿತಿ ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಿಗೆ ತಲುಪುತ್ತದೆ. ಅಲ್ಲಿನ ಅಧಿಕಾರಿಗಳು ಮನೆಗೆ ಬೀಗ ಹಾಕಿರುವ ಪ್ರದೇಶಗಳ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ರವಾನಿಸುತ್ತಾರೆ.

ಯಾವುದೇ ವ್ಯಕ್ತಿ ನೀಡುವ ಮಾಹಿತಿಯನ್ನಾಧರಿಸಿ ಬೀಗ ಹಾಕಿರುವ ಮನೆಗಳ ಸುತ್ತಮುತ್ತ ಪೊಲೀಸರು ಹದ್ದಿನ ಕಣ್ಣಿಡುತ್ತಾರೆ. ಮನೆಯ ಸುತ್ತಮುತ್ತಲ ನಿಗೂಢ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಮನೆಯವರು ವಾಪಸ್ ಬರುವವರೆಗೂ ಬೀಗ ಹಾಕಿರುವ ಮನೆಗಳ ರಕ್ಷಣೆಯನ್ನು ಪೊಲೀಸರು ನೋಡಿಕೊಳ್ಳುತ್ತಾರೆ.

ಒಂದು ವೇಳೆ ಅಪರಿಚಿತ ವ್ಯಕ್ತಿಗಳು ಮನೆಯ ಹತ್ತಿರ ಹೋದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗುತ್ತದೆ. ತಕ್ಷಣ ಸ್ಥಳಕ್ಕೆ ಆಗಮಿಸುವ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೋನ ವಂಶಿ ಕೃಷ್ಣ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಆ್ಯಪ್ ರೂಪಿಸಿದ ರೂವಾರಿ ಎನಿಸಿಕೊಂಡಿದ್ದಾರೆ.

ಹೊಸ ಆ್ಯಪ್ ಬಳಕೆಯಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ , ದರೋಡೆ ಪ್ರಕರಣಗಳಿಗೆ ಇತಿಶ್ರೀ ಹಾಡಬಹುದು ಎಂಬ ವಿಶ್ವಾಸ ಸಾರ್ವಜನಿಕರದ್ದಾಗಿದೆ. ಕೋನ ವಂಶಿಕೃಷ್ಣ ಅವರು ರೂಪಿಸಿರುವ ಆ್ಯಪ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ಡಿಸಿ ರಾಕೇಶ್‍ಕುಮಾರ್ ಚಾಲನೆ ನೀಡಿದರು.

ಇಂದಿನಿಂದ ಕಾರ್ಯಾರಂಭ ಮಾಡಲಿರುವ ಹೊಸ ಆ್ಯಪ್ ಮಾನಿಟರಿಂಗ್ ಹೊಣೆಯನ್ನು ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ಆಯಾಯ ವೃತ್ತ ಇನ್ಸ್‍ಪೆಕ್ಟರ್ ಮತ್ತು ಸಬ್ ಇನ್‍ಸ್ಪೆಕ್ಟರ್‍ಗಳಿಗೆ ವಹಿಸಲಾಗಿದೆ. ಎಸ್ಪಿ ಕೋನ ವಂಶಿಕೃಷ್ಣ ಅವರ ಕಾರ್ಯಕ್ಕೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಆ್ಯಪ್ ಅನ್ನು ಹಂತ ಹಂತವಾಗಿ ಇತರ ಜಿಲ್ಲೆಗಳಿಗೆ ಪರಿಚಯಿಸಲಾಗುವುದು. ಈಗಾಗಲೇ ಆ್ಯಪ್ ಬಗ್ಗೆ ಹೊರ ರಾಜ್ಯದ ಪೊಲೀಸರು ಮಾಹಿತಿ ಕೇಳಿದ್ದಾರೆ ಎಂದು ಸೂದ್ ತಿಳಿಸಿದರು.

ನಮ್ಮ ಇಲಾಖೆ ರೂಪಿಸಿರುವ ಆ್ಯಪ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರ ಸಿಕ್ಕಿದೆ. ಮಾತ್ರವಲ್ಲ ನಮ್ಮ ಈ ಯೋಜನೆಯನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಲು ತೀರ್ಮಾನಿಸಿರುವ ವಿಚಾರ ಹರ್ಷ ತಂದಿದೆ ಎಂದು ಎಸ್ಪಿ ಕೋನ ವಂಶಿಕೃಷ್ಣ ಈ ಸಂಜೆಗೆ ತಿಳಿಸಿದ್ದಾರೆ.

Facebook Comments