ದೇಶದಾದ್ಯಂತ ಸುದ್ದಿಯಾದ ತಂದೆ-ಮಗನ ಲಾಕಪ್‍ಡೆತ್ : ನಾಲ್ವರು ಪೊಲೀಸರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಜು.2-ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ತಮಿಳುನಾಡಿನ ತೂತುಕುಡಿಯ ತಂದೆ ಮತ್ತು ಮಗನ ಲಾಕಪ್ ಡೆತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ಸ್‍ಪೆಕ್ಟರ್ ಶ್ರೀಧರ್, ಸಬ್‍ಇನ್ಸ್‍ಪೆಕ್ಟರ್‍ಗಳದ ರಘು ಗಣೇಶ್ ಮತ್ತು ಬಾಲಕೃಷ್ಣ, ಹಾಗೂ ಪೇದೆ ಮುರುಗನ್ ಅವರನ್ನು ನಿನ್ನೆ ತಡರಾತ್ರಿ ಬಂಧಿಸಲಾಯಿತು. ಮತ್ತೊಬ್ಬ ಪೇದೆ ಮುತ್ತುರಾಜ್ ಸೇರಿದಂತೆ ಕೆಲವರ ವಿರುದ್ಧ ಎಫ್‍ಐಆರ್ ದಾಖಲಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಪೊಲೀಸರ ಪತ್ತೆಗೆ ಶೋಧ ಮುಂದುವರಿದಿದೆ.

ಇಂದು ಬೆಳಗ್ಗೆ ಆರೋಪಿಗಳನ್ನು ತೂತುಕುಡಿ (ಟ್ಯೂಟಿಕಾರ್ನ್) ಜಿಲ್ಲಾ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೇಮಾ ಅವರ ಮುಂದೆ ಹಾಜರುಪಡಿಸಲಯಿತು. ಆರೋಪಿಗಳನ್ನು 14 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳ ವಿವಿಧ ಕಲಂಗಳ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ನಾಲ್ವರು ಆರೋಪಿಗಳನ್ನು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ನಂತರ ಪೆರುರಾಣಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.  ತೂತುಕುಡಿಯಲ್ಲಿ ಲಾಕ್‍ಡೌನ್ ವೇಳೆ ಮೊಬೈಲ್ ಶಾಪ್ ತೆರೆದಿದ್ದ ಆರೋಪದ ಮೇಲೆ ಪಿ.ಜಯರಾಜ್(59) ಮತ್ತು ಅವರ ಪುತ್ರ ಬೆನ್ನಿಕ್ (31) ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಇಡೀ ರಾತ್ರಿ ಹಿಂಸೆ ನೀಡಿದ್ದರು. ನಂತರ ತಂದೆ ಮಗ ಪೊಲೀಸ್ ಕಸ್ಟಡಿಯಲ್ಲೇ ಸಾವಿಗೀಡಾಗಿದ್ದರು.

ಸೂಪರ್‍ಸ್ಟಾರ್ ರಜನೀಕಾಂತ್ ಸೇರಿದಂತೆ ಅನೇಕ ಗಣ್ಯರು ಈ ಕೃತ್ಯವನ್ನು ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದರು.  ಈ ಪ್ರಕರಣ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಇ.ಪಳನಿಸ್ವಾಮಿ ಸರ್ಕಾರ, ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದೆ.  ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಇನ್ನೂ ಕೆಲವರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.

Facebook Comments