ರಕ್ಕಸ ಮಿಡತೆಗಳು ರಾಜ್ಯಕ್ಕೆ ಕಾಲಿಡದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರಕ್ಕೆ ಹೆಚ್ಡಿಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ27-ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳ ಬಗ್ಗೆ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಮಹಾರಾಷ್ಟ್ರ ಪ್ರವೇಶಿಸಿದ್ದು, ಕರ್ನಾಟಕಕ್ಕೂ ಪ್ರವೇಶಿಸುವ ಆತಂಕವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕ್ಷಣಾರ್ಧದಲ್ಲಿ ಬೆಳೆ ತಿಂದು ಹೋಗುವ ಈ ಮಿಡತೆಗಳು ಭವಿಷ್ಯದಲ್ಲಿ ಆಹಾರ ಕೊರತೆಗೆ ಕಾರಣವಾಗುವುದರಿಂದ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಚದರ ಕಿ.ಮೀ ಪ್ರದೇಶದಲ್ಲಿ 4ಕೋಟಿ ಮಿಡತೆಗಳು ಇರುತ್ತವೆ. ತಮ್ಮ ದೇಹ ಗಾತ್ರದಷ್ಟೇ ಆಹಾರವನ್ನು ಈ ಮಿಡತೆಗಳು ತಿನ್ನುತ್ತವೆ ಎಂದರೆ, ಇವು ಯಾವ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದನ್ನು ಲೆಕ್ಕಿಸಬಹುದು.

ಹೀಗಾಗಿ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಔಷಧ ಸಿಂಪಡಣೆ ದೊಡ್ಡ ಪ್ರಮಾಣದಿಂದ ನಡೆಯುತ್ತಿದೆ. ರಾಜ್ಯಕ್ಕೂ ಇವುಗಳ ಭೀತಿ ಇರುವುದರಿಂದ ಸರ್ಕಾರ ಕೂಡಲೇ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದ ಅಭಿಪ್ರಾಯ ಪಡೆದು ಕಾರ್ಯತಂತ್ರಗಳಿಗೆ ಸಿದ್ಧವಾಗಬೇಕು.

ಸಂಭಾವ್ಯ ಅಪಾಯವನ್ನು ಮೊದಲೇ ಹಿಮ್ಮೆಟ್ಟಿಸಬೇಕು. ಬೆಳೆ ತಿಂದು ರೈತರ ಬದುಕು ಅತಂತ್ರ ಮಾಡುವ ಈ ರಕ್ಕಸ ಮಿಡತೆಗಳು ರಾಜ್ಯಕ್ಕೆ ಬಾರದೇ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

# ಕೀಟ ಶಾಸ್ತ್ರಜ್ಞರೊಂದಿಗೆ ಸಭೆ :
ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರ ಜಮೀನುಗಳಿಗೆ ಬಾಧಿಸಿರುವ ಕೀಟಗಳ ಹಾವಳಿ ರಾಜ್ಯಕ್ಕೆ ಬಾರದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ‌.

ರಾಜ್ಯಕ್ಕೆ ಬರದಂತೆ ಮುನ್ನೆಚ್ಚರಿಕೆ ವಹಿಸಿರುವ ಕೃಷಿ ಸಚಿವ ಬಿ‌.ಸಿ.ಪಾಟೀಲ್ ನಾಳೆ ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ ಸಂಶೋಧಕರು ಹಾಗೂ ಕೀಟ ಶಾಸ್ತ್ರಜ್ಞರೊಂದಿಗೆ ಸಭೆ ನಡೆಸಲಿದ್ದಾರೆ.ಇತರೆ ರಾಜ್ಯಗಳಲ್ಲಿ ಕೀಟ ಹಾವಳಿ ಕಂಡು ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದಾಗಲೀ ಭಯಪಡುವುದಾಗಲೀ ಮಾಡಬಾರದೆಂದು ಕೃಷಿ ಸಚಿವರು ಮನವಿ ಮಾಡಿದ್ದಾರೆ.

Facebook Comments

Sri Raghav

Admin