ಲೋಕಸಭೆಯಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ, ಕಲಾಪ 1 ಗಂಟೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.14-ಕಿಲ್ಲರ್ ಕೋವಿಡ್-19 ವೈರಸ್ ಪಿಡುಗಿನಿಂದಾಗಿ ಭಾರತದ ಇತಿಹಾಸದಲ್ಲೇ ಇದೇ ಪ್ರಪ್ರಥಮ ಬಾರಿಗೆ ವಿಭಿನ್ನ ರೀತಿಯಲ್ಲಿ ಸಂಸತ್ತಿನ 18 ದಿನಗಳ ಅಧಿವೇಶನ ಇಂದಿನಿಂದ ಆರಂಭವಾಗಿದೆ.  ಲೋಕಸಭೆ ಕಲಾಪ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಅಗಲಿದ ಗಣ್ಯರಾದ ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣವ್ ಮುಖರ್ಜಿ, ಹಾಲಿ ಸಂಸದ ಮತ್ತು 13 ಮಾಜಿ ಸಂಸದರು ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸದನವನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು.

ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ.  ಇಂದು ಬೆಳಗ್ಗೆ 9 ಗಂಟೆ ಲೋಕಸಭೆ ಕಲಾಪ ಆರಂಭವಾಯಿತು. ಲೋಕಸಭಾಧ್ಯಕ್ಷ ಓಂ ಬಿರ್ಲಾ, ಅಗಲಿದ ಗಣ್ಯರು, ದೇಶ ರಕ್ಷಣೆಗಾಗಿ ಪ್ರಾರ್ಣಾಪಣೆ ಮಾಡಿದ ಭದ್ರತಾ ಪಡೆ ಸಿಬ್ಬಂದಿ ಮತ್ತು ಕೊರೊನಾ ವಿರುದ್ದದ ಹೋರಾಟದಲ್ಲಿ ಮಡಿದ ವೈದ್ಯರು, ನರ್ಸ್‍ಗಳು, ನೈರ್ಮಲ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಮತ್ತು ಸ್ವಯಂಸೇವಕರು ಸೇವೆಯನ್ನು ಸ್ಮರಿಸಿ ಗುಣಗಾನ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಸಚಿವರಾದ ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕ ಮುಖಂಡ ಟಿ.ಆರ್.ಬಾಲು, ನ್ಯಾಷನಲ್ ಕಾನ್ಫೆರೆನ್ಸ್ ಧುರೀಣ ಡಾ. ಫಾರೂಕ್ ಅಬ್ದುಲ್ಲಾ, ಎನ್‍ಸಿಪಿಯ ಸುಪ್ರಿಯಾ ಸುಳೆ ಮೊದಲಾದವರು ಸದನದಲ್ಲಿದ್ದರು.

ಸದನದಲ್ಲಿ ಎಲ್ಲರೂ ಮಾಸ್ಕ್‍ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಿ ಸದನವನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು. ದೇಶಾದ್ಯಂತ ವೈರಾಣು ಹಾವಳಿ ತೀವ್ರವಾಗಿರುವುದರಿಂದ ಸಂಸತ್ ಅಧಿವೇಶನದ ಲೋಕಸಭೆ ಮತ್ತು ರಾಜ್ಯಸಭೆ-ಈ ಉಭಯ ಸದನಗಳಲ್ಲಿ ಅತ್ಯಂತ ಜಾಗ್ರತೆಯಿಂದ ಕಲಾಪಗಳನ್ನು ನಡೆಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ಕಾರಣಕ್ಕಾಗಿ ಸಂಸತ್ ಸದಸ್ಯರ ಆಸನ ವ್ಯವಸ್ಥೆ, ಕಲಾಪದ ವಿಧಾನಗಳನ್ನು ಸಂಪೂರ್ಣ ಬದಲಾಯಿಸಲಾಗಿದೆ.

ಸ್ವಾತಂತ್ರ್ಯದ ನಂತರ ಸಂಸತ್ತಿನಲ್ಲಿ ಈ ರೀತಿಯ ಭಿನ್ನ-ವಿಭಿನ್ನ ಸ್ವರೂಪದ ಬದಲಾವಣೆ ಮಾಡಿರುವುದು ಇದೇ ಮೊದಲು.  ಪ್ರಪ್ರಥಮ ಬಾರಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪದ ವಿಧಾನವನ್ನೇ ಬದಲು ಮಾಡಲಾಗಿದೆ. ಉಭಯ ಸದನಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸದನವನ್ನಾಗಿ ಪರಿವರ್ತಿಸಲಾಗಿದ್ದು, ಒಮ್ಮೆ ಕಳಮನೆಯ (ಲೋಕಸಭೆ) ಕಲಾಪ ನಡೆದರೆ, ಇನ್ನೊಮ್ಮೆ ಮೇಲ್ಮನೆ (ರಾಜ್ಯಸಭೆ) ಅಧಿವೇಶನ ಜರುಗಲಿದೆ.

ಉಭಯ ಸದನಗಳ ಸಭಾಂಗಣಗಳನ್ನು ಎರಡೂ ಸದನಗಳ ಕಲಾಪ ನಡೆಯಲು ಸಾಧ್ಯವಾಗುವಂತೆ ಮಾರ್ಪಾಡು ಮಾಡಲಾಗಿದೆ. ಸಂಸದರ ಆಸನಗಳ ನಡುವೆ ಅಂತರ ಕಾಯ್ಸುಕೊಂಡು ಸೋಷಿಯಲ್ ಡಿಸ್ಟೆನ್ಸ್‍ಗೆ ಅದ್ಯತೆ ನೀಡಲಾಗಿದೆ. ಸಂಸದರ ಆಸನಗಳ ಮಧ್ಯೆ ಸುರಕ್ಷತೆಗಾಗಿ ಫೈಬರ್ ಶೀಟ್‍ಗಳನ್ನು ಅಳವಡಿಸಲಾಗಿದೆ.

ಕೊರೊನಾ ಪಿಡುಗಿನ ಮಧ್ಯೆ ನಡೆಯಲಿರುವ ಪಾರ್ಲಿಮೆಂಟ್ ಅಧಿವೇಶನದ ಮೊದಲ ದಿನವಾದ ಇಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಲೋಕಸಭೆ ಕಲಾಪ ಮತ್ತು ಮಧ್ಯಾಹ್ನ 3ರಿಂದ ರಾತ್ರಿ 7 ಗಂಟೆವೆರೆಗೆ ರಾಜ್ಯಸಭೆ ಅಧಿವೇಶನ ನಡೆಯಲಿದೆ. ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ರಾಜ್ಯಸಭೆ ಕಲಾಪ ನಡೆಯಲಿದ್ದು, ತದನಂತರ ಮಧ್ಯಾಹ್ನ 3ರಿಂದ ರಾತ್ರಿ 7ರವರೆಗೆ ಲೋಕಸಭೆ ಸಮಾವೇಶಗೊಳ್ಳಲಿದೆ.

ಕಲಾಪದ ಅವಧಿ ಮತ್ತು ವಿಧಾನಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಿರುವುದರಿಂದ ಪ್ರಶ್ನೋತ್ತರ ಅವಧಿಯಲ್ಲಿ ಕೇವಲ 30 ನಿಮಿಷಗಳಿಗೆ ಮಾಥ್ರ ಸೀಮಿತಗೊಳಿಸಲಾಗಿದೆ. ಒಂದಾಂದ ಮೇಲೆ ಒಂದರಂತೆ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ನಡೆಯಲಿರುವುದರಿಂದ ಎರಡೂ ಸದನಗಳಲ್ಲೂ ಇನ್ನೊಂದು ಸಭಾಂಗಣದ ಕಲಾಪ ವೀಕ್ಷಿಸಲು ಸಾಧ್ಯವಾಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬೃಹತ್ ಪರದೆಯನ್ನು ಅಳವಡಿಸಲಾಗಿದೆ.

ನಿಯಮ ಕಟ್ಟುನಿಟ್ಟು: ಕೋವಿಡ್ ಪಿಡುಗಿನ ನಡುವೆಯೇ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ನಿಯಮಗಳನ್ನು ಪಾಲಿಸುವುದನ್ನು ಸಂಸದರು ಮತ್ತು ಉಭಯ ಸದನಗಳ ಎಲ್ಲ ಸಿಬ್ಬಂದಿ ವರ್ಗಕ್ಕೂ ಕಡ್ಡಾಯಗೊಳಿಸಲಾಗಿದೆ.

ಸಭಾಂಗಣ ಪ್ರವೇಶಿಸುವುದಕ್ಕೆ ಮೊದಲು ಎಲ್ಲ ಸಂಸದರು ಮತ್ತು ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡೆಬೇಕು. ಸ್ಯಾನಿಟೈಸರ್‍ಗಳು ಬಳಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ವೈರಸ್ ಸೋಂಕು ಹರಡುವುದನ್ನು ತಡೆಯಲು ಹಾಜರಿ ಪುಸ್ತಕಗಳಿಗೆ ಸಹಿ ಹಾಕುವ ಬದಲು ಮೊಬೈಲ್ ಆಪ್‍ಗಳನ್ನು ಬಳಸಾಗುತ್ತದೆ. ಈ ಅಧಿವೇಶನದಲ್ಲಿ ಕಾಗದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಡಿಜಿಟಲ್ ಸ್ಪರ್ಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

Facebook Comments