116 ಕ್ಷೇತ್ರಗಳಲ್ಲಿ ಮತದಾನ ಘಟಾನುಘಟಿಗಳ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.23-ಹದಿನೇಳನೇ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಹೈವೋಲ್ಟೇಜ್ ಮಹಾ ಚುನಾವಣೆಯ ಮೂರನೇ ಹಂತದಲ್ಲೂ ಇಂದು ಬಿರುಸಿನ ಮತದಾನವಾಗಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 116 ಲೋಕಸಭಾ ಕ್ಷೇತ್ರಗಳಿಗೆ ವ್ಯಾಪಕ ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ. 1,630ಕ್ಕೂ ಹೆಚ್ದು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 18,55 ಕೋಟಿ ಮತದಾರರು ನಿರ್ಧರಿಸಲಿದ್ದಾರೆ .

ನಕ್ಸಲರು ಮತ್ತು ಉಗ್ರಗಾಮಿಗಳ ದಾಳಿ ಸಾಧ್ಯತೆ ಆತಂಕ, ಅಲ್ಲಲ್ಲಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂಗಳ) ದೋಷ, ಕೆಲವು ಮತಗಟ್ಟೆಗಳಲ್ಲಿ ಕಾರ್ಯಕರ್ತರ ನಡುವೆ ಲಘು ಘರ್ಷಣೆ ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಮತದಾರರ ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಸರಣಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.
ತೃತೀಯ ಹಂತದಲ್ಲಿ ಗುಜರಾತ್‍ನ 26 (371 ಅಭ್ಯರ್ಥಿಗಳು, 4.50 ಕೋಟಿ ಮತದಾರರು), ಕೇರಳದ 20 (227 ಉಮೇದುವಾರರು, 2.51 ಕೋಟಿ ಮತದಾರರು), ಕರ್ನಾಟಕ 14(237 ಸ್ಪರ್ಧಿಗಳು,, 2.43 ಕೋಟಿ ಮತದಾರರು), ಮಹಾರಾಷ್ಟ್ರದ 14 (249 ಹುರಿಯಾಳುಗಳು, 2.57 ಕೋಟಿ ಮತದಾರರು),

ಉತ್ತರ ಪ್ರದೇಶದ 10 (120 ಅಭ್ಯರ್ಥಿಗಳು, 1.76 ಕೋಟಿ ಮತದಾರರು), ಛತ್ತೀಸ್‍ಗಢದ ಏಳು (123 ಉಮೇದುವಾರರು, 1.76 ಕೋಟಿ ಮತದಾರರು), ಓಡಿಶಾದ ಆರು (61 ಸ್ಫರ್ಧಿಗಳು, 92 ಲಕ್ಷ ಮತದಾರರು), ಬಿಹಾರ 5 (62 ಹುರಿಯಾಳುಗಳು, 90 ಲಕ್ಷ ಮತದಾರರು), ಪಶ್ಚಿಮ ಬಂಗಾಳದ ಐದು (61 ಅಭ್ಯರ್ಥಿಗಳು,

8.23 ಲಕ್ಷ ಮತದಾರರು), ಅಸ್ಸಾಂನ ನಾಲ್ಕು (54 ಸ್ಫರ್ಧಿಗಳು, 77 ಲಕ್ಷ ಮತದಾರರು), ಗೋವಾದ ಎರಡು (12 ಉಮೇದುವಾರರು, 71 ಲಕ್ಷ ಮತದಾರರು), ಜಮ್ಮು ಮತ್ತು ಕಾಶ್ಮೀರ ಒಂದು (18 ಹುರಿಯಾಳುಗಳು, 52 ಲಕ್ಷ ಮತದಾರರು), ದಾದ್ರಾ ಮತ್ತು ನಗರ್ ಹವೇಲಿ ಒಂದು (11 ಅಭ್ಯರ್ಥಿಗಳು, 1.15 ಲಕ್ಷ ಮತದಾರರು), ಡಮನ್ ಮತ್ತು ಡಿಯು ಒಂದು (ನಾಲ್ವರು ಸ್ಪರ್ಧಿಗಳು, 10 ಲಕ್ಷ ಮತದಾರರು) ಹಾಗೂ ತ್ರಿಪುರಾದ ಒಂದು ಕ್ಷೇತ್ರಗಳಲ್ಲಿ ಚುರುಕಿನ ಮತದಾನವಾಗಿದೆ.

ಒಡಿಶಾದ 42 ವಿಧಾನಸಭಾ ಕ್ಷೇತ್ರಗಳು ಹಾಗೂ ಗೋವಾದ ಮೂರು ಮತ್ತು ಗುಜರಾತಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆಗಾಗಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ(ವಯನಾಡ್, ಕೇರಳ), ಬಿಜೆಪಿ ಅಧ್ಯಕ್ಷ ಅಮಿತ್ ಶಾ(ಗಾಂಧಿನಗರ, ಗುಜರಾತ್) ಸ್ಫರ್ಧಾ ಕಣದಲ್ಲಿರುವ ಪ್ರಮುಖರು. ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್, ಎನ್‍ಸಿಪಿ ವರಿಷ್ಠ ಶರದ್ ಪವಾರ್ ಪುತ್ರಿ ಸುಪ್ರಿಯ ಸುಳೆ ಮೊದಲಾದವರೂ ಸಹ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಇಂದು ಮತ ಚಲಾಯಿಸಿದ ಅಗ್ರಗಣ್ಯರಾಗಿದ್ದಾರೆ.
ಚುನಾವಣಾ ಆಯೋಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟು ಕೆಲ ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.

ಏಪ್ರಿಲ್ 11ರಿಂದ ಆರಂಭವಾಗಿರುವ ಲೋಕಸಭಾ ಚುನಾವಣೆ ಮೇ 19ರವರೆಗೆ ಏಳು ಹಂತಗಳಲ್ಲಿ ಮುಂದುವರಿಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ವ್ಯಾಪಕ ಭದ್ರತೆ : 
ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹಿಂಸಾಚಾರ ಮರುಕಳಿಸದಂತೆ ತಡೆಯಲು ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು
ನಕ್ಸಲೀಯರ ಹಾವಳಿ ಇರುವ ಛತ್ತೀಸ್‍ಗಢ, ಬಿಹಾರ ಮತ್ತು ಓಡಿಶಾ ಹಾಗೂ ಉಗ್ರರ ಉಪಟಳವಿರುವ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ನಾಳೆ ಮೂರನೇ ಹಂತಕ್ಕೆ ಚುನಾವಣೆ ನಡೆಯಲಿದೆ. ಮತದಾನ ಪ್ರಕ್ರಿಯೆ ಮೇಲೆ ಮಾವೋವಾದಿಗಳು ಮತ್ತು ಭಯೋತ್ಪಾದಕರ ಕರಾಳ ಛಾಯೆ ಆವರಿಸಿದ್ದರಿಂದ ಹದ್ದಿನ ಕಣ್ಣಿನ ನಿಗಾ ವಹಿಸಲಾಗಿತ್ತು.

ಏಪ್ರಿಲ್ 11ರಂದು ನಡೆದ ಮೊದಲ ಹಂತದ ಮತದಾನದ ವೇಳ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ವಿವಿಧೆಡೆ ನಡೆದ ಚುನಾವಣಾ ಹಿಂಸಾಚಾರದಲ್ಲಿ ಮೂವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಛತ್ತೀಸ್‍ಗಢ ಮತ್ತು ಮಹಾರಾಷ್ಟ್ರದ ಕೆಲವೆಡೆ ನಕ್ಸಲರು ಬಾಂಬ್ ಸ್ಫೋಟಿಸಿ ಆತಂಕದ ವಾತಾವಾರಣ ಸೃಷ್ಟಿಸಿದ್ದರು.

ಏಪ್ರಿಲ್ 18ರ ಎರಡನೇ ಹಂತದ ಮತದಾನಕ್ಕೂ ಮುನ್ನ ದಿನ ಓಡಿಶಾದಲ್ಲಿ ಮಾವೋವಾದಿಗಳು ಚುನಾವಣಾ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ್ದರು. ಪಶ್ಚಿಮ ಬಂಗಾಳದ ಕೆಲವೆಡೆ ಹಿಂಸಾಚಾರ ಭುಗಿಲೆದ್ದಿತ್ತು.

ಮೂರನೇ ಹಂತದ ಚುನಾವಣೆ ವೇಳೆ ಇಂಥ ಅಹಿತಕರ ಘಟನೆಗಳು ಮರುಕಳಿಸದಂತೆ ತಡೆಯಲು ವ್ಯಾಪಕ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು
ನಕ್ಸಲ್ ಪೀಡಿತ ಪ್ರದೇಶಗಳು ಹಾಗೂ ಉಗ್ರಗಾಮಿಗಳ ಹಾವಳಿ ಇರುವ ಸೂಕ್ಷ್ಮ ಸ್ಥಳಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ