ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಶೇ. 68 ರಷ್ಟು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ 24- ರಾಜ್ಯದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಮತ ದಾನ ನಿನ್ನೆ ಮುಗಿದಿದ್ದು, ಶೇ.68.43ರಷ್ಟು ಮತ ದಾನವಾಗಿದೆ.
ರಾಜ್ಯದಲ್ಲಿ ಎರಡೂ ಹಂತದ ಮತದಾನ ಮುಕ್ತಾಯವಾಗಿದ್ದು, ಒಟ್ಟಾರೆ ಶೇ.68.61ರಷ್ಟು ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಈ ಸಂಜೆಗೆ ತಿಳಿಸಿದರು.

ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.81ರಷ್ಟು ಮತ ದಾನವಾಗಿತ್ತು. ಎರಡನೇ ಹಂತದಲ್ಲೂ ಶೇ.68.43ರಷ್ಟು ಮತದಾನವಾಗಿದೆ. ಒಟ್ಟಾರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತದಾನ ಶಾಂತಿಯುತವಾಗಿ ನಡೆದಿದ್ದು, ಕಳೆದ ಬಾರಿಗಿಂತ ಹೆಚ್ಚು ಮತದಾನವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.67.28ರಷ್ಟು ಮತದಾನವಾಗಿತ್ತು.

ಪ್ರಸಕ್ತ ಸಾಲಿನಲ್ಲಿ 5,10,59,103 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಮೊದಲ ಹಂತದ ಮತದಾನ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನವಾಗಿತ್ತು.

ಎರಡನೇ ಹಂತದ ಮತದಾನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.76.43 ರಷ್ಟು ಮತದಾನವಾಗಿದೆ. ಅತಿ ಕಡಿಮೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.57.91ರಷ್ಟು ಮತದಾನವಾಗಿದೆ. ಮತದಾನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿದ ಪರಿಣಾಮ ಮತದಾನದ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ಪ್ರಕಾರ ಎರಡನೇ ಹಂತದ ಮತದಾನದ ವಿವರ : ಚಿಕ್ಕೋಡಿ-ಶೇ.75.52, ಬೆಳಗಾವಿ -ಶೇ.67.31, ಬಾಗಲಕೋಟೆ-ಶೇ.70.59, ವಿಜಯಪುರ-ಶೇ.61.70, ಕಲಬುರಗಿ-ಶೇ.60.88, ರಾಯಚೂರು-ಶೇ.57.91, ಬೀದರ್-ಶೇ.62.69, ಕೊಪ್ಪಳ- ಶೇ.68.41, ಬಳ್ಳಾರಿ-ಶೇ.69.59, ಹಾವೇರಿ-ಶೇ.73.99, ಧಾರವಾಡ-ಶೇ.70.13, ಉತ್ತರಕನ್ನಡ -ಶೇ.74.10, ದಾವಣಗೆರೆ-ಶೇ.73.03, ಶಿವಮೊಗ್ಗ-ಶೇ.76.43ರಷ್ಟು ಮತದಾನವಾಗಿರುವ ವರದಿಯಾಗಿದೆ.

Facebook Comments