4ನೇ ಹಂತದ ಮತದಾನಕ್ಕೆ ಕೌಂಟ್‌ಡೌನ್, 961 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.28- ಹದಿನೇಳನೆ ಲೋಕಸಭೆಗೆ ಸಂಸದರನ್ನು ಚುನಾಯಿಸಲು ನಡೆಯುತ್ತಿರುವ ಮಹಾ ಚುನಾವಣೆಯ ನಾಲ್ಕನೆ ಹಂತದ ಮತದಾನ ನಾಳೆ ನಡೆಯಲಿದೆ. ನಾಲ್ಕನೆ ಹಂತದಲ್ಲಿ ಒಂಭತ್ತು ರಾಜ್ಯಗಳು 71 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 961 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ವ್ಯಾಪಕ ಬಂದೋಬಸ್ತ್ ನಡುವೆ ಮತದಾನ ನಡೆಯಲಿದೆ. 71 ಕ್ಷೇತ್ರಗಳಲ್ಲಿ ಒಟ್ಟು 1,40,000 ಮತಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 12 ಕೋಟಿ 79 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ನಾಳಿನ ಮತದಾನಕ್ಕಾಗಿ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ದೋಷಗಳನ್ನು ನಿವಾರಿಸಲು ಆದ್ಯತೆ ನೀಡಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ವ್ಯಾಪಕ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಹಾರಾಷ್ಟ್ರದ 17, ಉತ್ತರ ಪ್ರದೇಶ ಮತ್ತು ರಾಜಸ್ತಾನದ ತಲಾ 13, ಪಶ್ಚಿಮ ಬಂಗಾಳದ ಎಂಟು, ಒಡಿಶಾ ಮತ್ತು ಮಧ್ಯಪ್ರದೇಶದ ತಲಾ ಆರು, ಬಿಹಾರದ ಐದು, ಜಾರ್ಖಂಡ್‍ನ ಮೂರು ಹಾಗೂ ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರಗಳಿಗೆ ನಾಳೆ ಮತದಾನವಾಗಲಿದೆ.

ಈ ಒಂಭತ್ತು ರಾಜ್ಯಗಳ 71 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೊನೆಯ ದಿನವಾದ ನಿನ್ನೆ ಬಿರುಸಿನ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಿ ಮತದಾರರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದರು.

ಉತ್ತರ ಪ್ರದೇಶದಲ್ಲಿ ನಿನ್ನೆ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಹುಲ್‍ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಮೊದಲಾದವರು ಚುನಾವಣಾ ಪ್ರಚಾರದ ರ್ಯಾಲಿಗಳನ್ನು ನಡೆಸಿ ಮತಯಾಚಿಸಿದರು.

ನಿನ್ನೆ ಸಂಜೆ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದಿದೆ. ಬಿಜೆಪಿ, ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ನಿನ್ನೆ ವ್ಯಾಪಕ ಪ್ರಚಾರ ಕೈಗೊಂಡು ಮತಬೇಟೆ ನಡೆಸಿದವು.

ನಾಳೆ ನಡೆಯಲಿರುವ ನಾಲ್ಕನೆ ಹಂತದ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ರೀತಿಯ ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದೆ.
ಈಗಾಗಲೇ ಮೂರು ಹಂತಗಳ ಚುನಾವಣೆ ನಡೆದಿದ್ದು, ನಾಲ್ಕು ಹಂತಗಳು ಬಾಕಿ ಇವೆ. ಮೇ 6, ಮೇ 12 ಮತ್ತು ಮೇ 19ರಂದು ಅನುಕ್ರಮವಾಗಿ ಐದು, ಆರು ಮತ್ತು ಏಳನೆ ಹಂತದ ಚುನಾವಣೆಗಳು ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ