4ನೇಹಂತದ ಚುನಾವಣೆ: 71 ಕ್ಷೇತ್ರಗಳಲ್ಲಿ ನಾಳೆ ಅಬ್ಬರದ ಪ್ರಚಾರಕ್ಕೆ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.26-ಹದಿನೇಳನೆ ಲೋಕಸಭೈಗೆ ಸಂಸದರನ್ನು ಚುನಾಯಿಸಲು ನಡೆಯುತ್ತಿರುವ ಮಹಾ ಚುನಾವಣೆಯ ನಾಲ್ಕನೆ ಹಂತದ ಮತದಾನ ಏ.29 ಸೋಮವಾರ ನಡೆಯಲಿದೆ. ನಾಳೆ ಸಂಜೆ ಪ್ರಚಾರ ಅಂತ್ಯಗೊಳ್ಳಲಿದೆ.  ನಾಲ್ಕನೇ ಹಂತದಲ್ಲಿ ಒಂಭತ್ತು ರಾಜ್ಯಗಳು 71 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಪ್ರಚಾರದ ಅಬ್ಬರ ತೀವ್ರವಾಗಿದೆ.

ಮಹಾರಾಷ್ಟ್ರದ 17, ಉತ್ತರ ಪ್ರದೇಶ ಮತ್ತು ರಾಜಸ್ತಾನದ ತಲಾ 13, ಪಶ್ಚಿಮ ಬಂಗಾಳದ ಎಂಟು, ಓಡಿಶಾ ಮತ್ತು ಮಧ್ಯಪ್ರದೇಶದ ತಲಾ ಆರು, ಬಿಹಾರದ ಐದು, ಜಾರ್ಖಂಡ್‍ನ ಮೂರು ಹಾಗೂ ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರಗಳಿಗೆ ಸೋಮವಾರ ಮತದಾನವಾಗಲಿದೆ.

ಈ ಒಂಭತ್ತು ರಾಜ್ಯಗಳ 71 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಿರುಸಿನ ಚುನಾವಣಾ ಪ್ರಚಾರ ರ‍್ಯಾಲಿಗಳನ್ನು ನಡೆಸಿ ಮತದಾರರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದರು.

ನಾಳೆ ಸಂಜೆ ಪ್ರಚಾರಕ್ಕೆ ಅಂತಿಮ ತೆರೆ ಬೀಳಲಿದ್ದು, ಬಿಜೆಪಿ, ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಇಂದು ಮತ್ತು ನಾಳೆ ವ್ಯಾಪಕ ಪ್ರಚಾರ ಕೈಗೊಂಡು ಮತ ಬೇಟೆ ನಡೆಸುತ್ತಿವೆ.

ಈಗಾಗಲೇ ಮೂರು ಹಂತಗಳ ಚುನಾವಣೆ ನಡೆದಿದ್ದು, ನಾಲ್ಕು ಹಂತಗಳು ಬಾಕಿ ಇವೆ. ಮೇ 6, ಮೇ 12 ಮತ್ತು ಮೇ 19ರಂದು ಅನುಕ್ರಮವಾಗಿ ಐದು, ಆರು ಮತ್ತು ಏಳನೇ ಹಂತದ ಚುನಾವಣೆಗಳು ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ