ಲೋಕ ಸಮರದಲ್ಲಿ ಜಂಪಿಂಗ್ ಸ್ಟಾರ್ಸ್, ಮತದಾರರ ಕೈಯಲ್ಲಿ ಮೂಗುದಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಜಕೀಯ ಧುರೀಣರು ಪಕ್ಷದಿಂದ ಪಕ್ಷಕ್ಕೆ ಹಾರಿ ಹೋಗುವುದು ಸರ್ವೇಸಾಮಾನ್ಯ. ತಮಗೆ ಟಿಕೆಟ್ ಸಿಕ್ಕಿಲ್ಲವೆಂದೋ, ತಮ್ಮ ಕುಟುಂಬದವರಿಗೆ ಮಾನ್ಯತೆ ದೊರೆಯಲಿಲ್ಲವೆಂದೋ, ಸೋಲುವ ಭೀತಿಯಿಂದಲೋ ಪಕ್ಷಾಂತರ ಪಕ್ಷಿಗಳಾಗುತ್ತಾರೆ.

ಇದು ಕೇವಲ ನಮ್ಮ ಕರ್ನಾಟಕ ರಾಜ್ಯಕ್ಕೆ ಸೀಮಿತವಲ್ಲ, ದೇಶದ ಹಲವು ರಾಜ್ಯಗಳಲ್ಲೂ ಪ್ರಮುಖ ರಾಜಕೀಯ ಧುರೀಣರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿದಿದ್ದಾರೆ, ಇದರಲ್ಲಿ ಕೆಲವರಿಗೆ ಟಿಕೆಟ್ ದೊರೆತಿದ್ದರೆ, ಇನ್ನೂ ಕೆಲವರು ಮೂಗಿಗೆ ತುಪ್ಪ ಸವರಿಸಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಪಕ್ಷಾಂತರಗೊಂಡವವರ ಪೈಕಿ ಸಿನಿಮಾ ತಾರೆಯರು ಹಾಗೂ ಕ್ರಿಕೆಟ್ ಮಂದಿಯೂ ಸೇರಿದ್ದಾರೆ.

ಬೈಜಯಂತ್ `ಜೈ’ ಪಾಂಡಾ: ಒಡಿಸ್ಸಾದಲ್ಲಿ ಬಿಜು ಜನತಾದಳದ ಪ್ರಭಾವಿ ನಾಯಕನಾಗಿದ್ದ ಬೈಜಯಂತ್ ಪಕ್ಷದ ಧೋರಣೆಗೆ ವಿರುದ್ಧವಾಗಿದ್ದರಿಂದ ಅವರನ್ನು 2018ರ ಜನವರಿ 24 ರಂದು ಬಿಜೆಡಿಯಿಂದ ಉಚ್ಛಾಟಿಸಲಾಗಿದೆ. ಅವರು ಈಗ ಬಿಜೆಪಿ ಪಕ್ಷದಿಂದ ಕೇಂದ್ರಪಾರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಬೈಜಯಂತ್ 2009 ಹಾಗೂ 2014ರಲ್ಲಿ ಬಿಜೆಡಿಯಿಂದ ಸ್ಪರ್ಧಿಸಿ ಸಂಸದರಾಗಿದ್ದರು, ಈಗ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದು ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಟಾಮ್ ವಡಾಕ್ಕಣ್: ಕೇರಳದ ಕಾಂಗ್ರೆಸ್ ಹಿರಿಯ ವಕ್ತಾರ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಪರಮಾಪ್ತರಾಗಿರುವ ಟಾಮ್ ವಡಾಕ್ಕಣ್ ಅವರು ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯ ನಂತರ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಿ ಬಿಜೆಪಿಗೆ ಸೇರಿದ್ದು ಈಗ ಕೇಸರಿ ಪಕ್ಷದಿಂದ ಕೇರಳದ ಲೋಕಸಭೆ ಕ್ಷೇತ್ರದಿಂದ ಚುನಾವಣೆ ಎದುರಿಸಲು ಹೊರಟಿದ್ದಾರೆ.

ಅರ್ಜುನ್‍ಸಿಂಗ್: ತೃಣಮೂಲ ಕಾಂಗ್ರೆಸ್ ಹಿರಿಯ ಮುಖಂಡರಾದ ಅರ್ಜುನ್‍ಸಿಂಗ್ ಅವರು ಕೂಡ ಈ ಬಾರಿ ಟಿಎಂಸಿ ತೊರೆದು ನರೇಂದ್ರಮೋದಿಯ ಸಿದ್ಧಾಂತಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದು ಬರಾಕ್‍ಪೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 2001ರಿಂದ ಪಶ್ಚಿಮಬಂಗಾಳದ ಭಟ್ಟಾರ ವಿಧಾನಸಭಾ ಕ್ಷೇತ್ರದಿಂದ ಗೆಲ್ಲುವ ಮೂಲಕ ಶಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಜಯಪ್ರದಾ: ಪಂಚಭಾಷಾ ತಾರೆ ನಟಿ ಜಯಪ್ರದಾ ಅವರು ಕೂಡ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಸಮಾಜವಾದಿ ಪಾರ್ಟಿ ತೊರೆದು ಮಾರ್ಚ್ 26 ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಈಗ ಲೋಕಸಭಾ ಚುನಾವಣೆಯನ್ನು ಎದುರಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಜಯಪ್ರದಾ 2014ರಲ್ಲಿ ಉತ್ತರ ಪ್ರದೇಶದ ಬಿಜ್‍ನೋರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದು,

ಈಗಲೂ ಅದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ. ಜಯಪ್ರದಾ ತಮ್ಮ ರಾಜಕೀಯ ಜೀವನದಲ್ಲಿ ತೆಲುಗು ದೇಶಂ ಪಾರ್ಟಿ, ಸಮಾಜವಾದಿಪಾರ್ಟಿ, ರಾಷ್ಟ್ರೀಯ ಲೋಕದಳ ಪಕ್ಷಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು.

ಚಂದ್ರಪ್ರಕಾಶ್ ಮಿಶ್ರಾ: ಕಳೆದ ಐದು ವರ್ಷಗಳಿಂದ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿರುವ ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ)ಯ ಮುಖಂಡ ಚಂದ್ರಪ್ರಕಾಶ್ ಮಿಶ್ರಾ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಕಾಪ್ಟಾನ್‍ಘನಿ ಲೋಕಸಭಾ ಕ್ಷೇತ್ರದ ಕಣದಲ್ಲಿದ್ದಾರೆ. 2004ರಲ್ಲಿ ಚಂದ್ರಪ್ರಕಾಶ್ ಮಿಶ್ರಾ ಅವರು ಈಗಿನ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ವಿರುದ್ಧ ಸ್ಪರ್ಧೆಗಿಳಿದಿದ್ದರು.

ಕೀರ್ತಿ ಅಜಾದ್: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಕೀರ್ತಿ ಅಜಾದ್ ಕೇಸರಿ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ದೊರೆಯಲಿಲ್ಲ ಎಂದು ಬೇಸತ್ತು ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್‍ನಡಿ ಸ್ಪರ್ಧೆಗಿಳಿದಿದ್ದಾರೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ದರ್‍ಭಾಂಗ ಕ್ಷೇತ್ರದಿಂದಲೇ ಅಜಾದ್ ಸ್ಪರ್ಧಿಸುತ್ತಿದ್ದು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಾವಿತ್ರಿ ಬಾಯ್ ಪುಲೆ: ಉತರಪ್ರದೇಶದ ಬಾಹಾರಿಚ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಸಾವಿತ್ರಿ ಬಾಯ್ ಪುಲೆ ಅವರು ಈ ಬಾರಿ ಬಿಜೆಪಿ ಪಕ್ಷದಿಂದ ಹೊರಬಂದು ಕಾಂಗ್ರೆಸ್‍ನಿಂದ ಬಾಹಾರಿಚ್ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿದ್ದಾರೆ.

ರಾಕೇಶ್ ಸಜ್ಜನ್: ಸಮಾಜವಾದಿ ಪಾರ್ಟಿಯಲ್ಲಿನ ಇತ್ತೀಚಿನ ವಿದ್ಯಮಾನಗಳಿಂದ ಬೇಸತ್ತಿರುವ ಹಿರಿಯ ಮುಖಂಡ ರಾಕೇಶ್ ಸಜ್ಜನ್ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆಗಿಳಿದಿದ್ದಾರೆ.  ಸಜ್ಜನ್ ಉತ್ತರಪ್ರದೇಶದ ವಿಧಾನಸಭಾ ಕ್ಷೇತ್ರದಿಂದ 1993, 2002ರ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸುವ ಮೂಲಕ ಶಾಸಕರಾದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಫಾತೇಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರೂ,ಈ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಾ ಕಣಕ್ಕೆ ಧುಮುಕಿದ್ದಾರೆ.

ಸುಖ್‍ರಾಮ್: ಕೇಂದ್ರದ ಮಾಜಿ ದೂರಸಂಪರ್ಕ ಮಂತ್ರಿ ಸುಖ್‍ರಾಮ್ ಅವರು ತಮ್ಮ ಮೊಮ್ಮಗ ಆಶ್ರಯ್ ಶರ್ಮಾರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೇಯಾಗಿದ್ದು ಮಾನ್‍ದಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಸುಖ್‍ರಾಮ್ 5 ಬಾರಿ ಶಾಸಕರಾಗಿ,3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲೂ ಮಾನ್‍ದಿ ಕ್ಷೇತ್ರದ ಜನರು ತಮ್ಮನ್ನು ಗೆಲ್ಲಿಸಲಿದ್ದಾರೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.

ಶತ್ರುಘ್ನಸಿನ್ಹಾ: ಕಳೆದ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ನಟ ಕಂ ರಾಜಕಾರಣಿ ಶತ್ರುಘ್ನಸಿನ್ಹಾ ಅವರು ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಶತ್ರುಘ್ನಸಿನ್ಹಾ ಅವರು ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಶತ್ರುಘ್ನಸಿನ್ಹಾ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಮ್ಮ ಅನುಕೂಲಕ್ಕಾಗಿ ತಮಗೆ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡುವ ಇವರಿಗೆ ಮತದಾರರು ತಕ್ಕ ಬುದ್ಧಿ ಕಲಿಸಿದ್ದಾರೆ. ಪಕ್ಷಾಂತರ ಮಾಡಿರುವ ಸಂದರ್ಭದಲ್ಲಿ ಕೆಲವರಿಗೆ ಅನುಕೂಲವೂ ಆಗಿದೆ. ಸೂಕ್ತ ಸ್ಥಾನಮಾನಗಳು ದೊರೆತಿವೆ.

ಕೆಲವರ ಅದೃಷ್ಟ ಕುಲಾಯಿಸಿದರೆ, ಮತ್ತೆ ಕೆಲವರಿಗೆ ಅದೃಷ್ಟ ಕೈಕೊಟ್ಟ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವವರು ಕೂಡ ಅವರಿಂದಾಗುವ ಲಾಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿಕೊಳ್ಳುತ್ತಾರೆ.

ಮತ ಬ್ಯಾಂಕ್‍ಗಳನ್ನು ಕೇಂದ್ರೀಕರಿಸಿ ಪಕ್ಷ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡುತ್ತಾರೆ . ಈ ಎಲ್ಲ ಇದ್ದರೂ ಕೂಡ ಮತದಾರರು ಕೈ ಹಿಡಿಯದಿದ್ದರೆ ಸೋಲು ಕಾಣುವುದು ಖಚಿತ. ಪಕ್ಷಾಂತರಗಳಿಗೆ ಮಣೆ ಹಾಕಿರುವುದು ವಿರಳ ಆದರೂ ಪ್ರತಿ ಚುನಾವಣೆಯಲ್ಲ ಪಕ್ಷಾಂತರ ಪರ್ವ ನಡೆದೇ ಇರುತ್ತದೆ. ಇದೇನೂ ಹೊಸದಲ್ಲ.

-ಜಯಪ್ರಕಾಶ್

Facebook Comments