ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ಮರೆಯಾಗುತ್ತಿದೆ : ಲೋಕಸಭಾಧ್ಯಕ್ಷ ಓಂ ಬಿರ್ಲಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.25- ಇತ್ತೀಚಿನ ದಿನಗಳಲ್ಲಿ ಶಿಸ್ತು ಮತ್ತು ಸಭ್ಯತೆ ಶಾಸಕಾಂಗದಲ್ಲಿ ಮರೆಯಾಗುತ್ತಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಪರೋಕ್ಷವಾಗಿ ಜನಪ್ರತಿನಿಗಳ ನಡವಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾಧ್ಯಮಗಳು ಪ್ರಜಾಪ್ರಭುತ್ವದ ವಿಶ್ವಾಸ ಉಳಿಸಬೇಕಿದೆ.

ಶಾಸಕಾಂಗದಲ್ಲಿ ಶಿಸ್ತು ಮತ್ತು ಸಭ್ಯತೆ ಇಲ್ಲದಿರುವುದು ನಮ್ಮೆಲ್ಲರ ಚಿಂತೆಗೆ ಕಾರಣವಾಗಿದೆ. ಇದನ್ನು ಉಳಿಸುವ ಪ್ರಯತ್ನವನ್ನು ಎಲ್ಲರೂ ಮಾಡಬೇಕೆಂದು ಸಲಹೆ ಮಾಡಿದರು. ಮುಖ್ಯಮಂತ್ರಿ, ವಿರೋಧ ಪಕ್ಷದವರು ಸೇರಿದಂತೆ ಪ್ರಮುಖ ಸ್ಥಾನದಲ್ಲಿರುವವರು ಶಾಸಕಾಂಗದ ಜವಾಬ್ದಾರಿಗಳು ಏನು ಎಂಬುದನ್ನು ತಮ್ಮ ತಮ್ಮ ಸದಸ್ಯರಿಗೆ ತಿಳಿ ಹೇಳಬೇಕು. ಆಯಾಕಟ್ಟಿನಲ್ಲಿರುವವರು ಇದಕ್ಕಾಗಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ತರಬೇಕೆಂದು ಕಿವಿಮಾತು ಹೇಳಿದರು.

ಜನರಿಗೆ ಉತ್ತಮ ಸಂದೇಶ ರವಾನೆಯಾಗಬೇಕು ಎಂದರೆ ನಾವು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನೀಡಬೇಕು. ಉನ್ನತ ಸ್ಥಾನದಲ್ಲಿರುವವರು ಇದರ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಂಸತ್ ಮತ್ತು ವಿಧಾನಮಂಡಲಗಳಲ್ಲಿ ಕಲಾಪಗಳು ಸುಸೂತ್ರವಾಗಿ ನಡೆದಾಗಲೇ ಜನರ ಸಂಕಷ್ಟಗಳಿಗೆ ಜನಪ್ರತಿನಿಗಳು ಸ್ಪಂದಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಕಲಾಪದ ಹಾದಿ ತಪ್ಪಿದರೆ ಅದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಾಮೂಹಿಕ ಹೊಣೆಗಾರರು ಎಂದು ಎಚ್ಚರಿಸಿದರು. ಕಲಾಪದ ವೇಳೆ ಚರ್ಚೆಯ ಗುಣಮಟ್ಟವು ಕುಸಿಯುತ್ತಿದೆ. ಇದರ ಸುಧಾರಣೆಗೆ ನಾವೆಲ್ಲರೂ ಪಣತೊಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ವೈಯಕ್ತಿಕವಾಗಿ ತೆಗೆದುಕೊಂಡ ಕಲಾಪಗಳು ವ್ಯರ್ಥವಾಗಲು ಬಿಡಬಾರದು. ಸಭಾಧ್ಯಕ್ಷರ ಪೀಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಬಿರ್ಲಾ ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ಕಾರಣ ಸದನ ನಡೆಸುವುದೇ ಕಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿಯೂ ನಾವು ಸಂಸತ್ ಕಲಾಪವನ್ನು ಸಮಪರ್ಕವಾಗಿ ನಡೆಸಿದ್ದೇವೆ ಎಂದರು.

ಸದನದಲ್ಲಿ ಚರ್ಚೆ, ಜೋರು ದನಿ ಎಲ್ಲವೂ ಇರಬೇಕು. ಅದು ಇದ್ದಾಗ ಮಾತ್ರ ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸದಸ್ಯರು ಶಿಸ್ತನ್ನು ಮೀರಬಾರದೆಂದು ಕಿವಿಮಾತು ಹೇಳಿದರು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಜನಪ್ರತಿನಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಜನಪ್ರತಿನಿಗಳು ಜನರ ಪ್ರತಿನಿಗಳಂತೆ ಪಾರದರ್ಶಕವಾಗಿ ಅವರ ಆಸೆ, ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ಆ ಮೂಲಕ ಜನಸಾಮಾನ್ಯರ ಪರ ಕೆಲಸ ಮಾಡಬೇಕು ಎಂದು ಹೇಳಿದರು.

ಜನಪ್ರತಿನಿಗಳಿಗೆ ಮೊದಲು ಜನತೆಯ ಸಮಸ್ಯೆಗಳ ಬಗ್ಗೆ ಅರಿವಿದ್ದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಲಿದೆ. ಪಂಚಾಯಿತಿಯಿಂದ ಸಂಸತ್‍ವರೆಗೂ ಜನರ ದನಿ ಕೇಳಬೇಕು ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧ ಸರ್ಕಾರ ಕಾನೂನು ತರಲಿದೆ. ಚರ್ಚೆಗಳ ನಂತರವೇ ಇದು ಕಾನೂನು ಅನುಷ್ಠಾನವಾಗಲಿದೆ.

ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ವಿಧೇಯಕ ತರಲಾಗುತ್ತದೆ. ಕರ್ನಾಟಕದಲ್ಲಿ ಈ ನೀತಿಯ ಬಗ್ಗೆ ಕೆಲವರು ಆಕ್ಷೇಪಗಳನ್ನು ಎತ್ತಿರಬಹುದು. ವಿಧೇಯಕವನ್ನು ಜಾರಿ ಮಾಡುವ ವೇಳೆ ಇದು ಸರ್ವೇ ಸಾಮಾನ್ಯ. ಅಂತಿಮವಾಗಿ ಸರ್ಕಾರ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಿದೆ ಎಂದು ತಿಳಿಸಿದರು.

75 ವರ್ಷಗಳ ಸ್ವಾತಂತ್ರ ದಿನವನ್ನು ಪೂರೈಸಿದ್ದೇವೆ. ಈ ವರ್ಷ ಸಾರ್ವಜನಿಕ ಲೆಕ್ಕ ಸಮಿತಿಗೆ ನೂರು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 4 ಮತ್ತು 5ರಂದು ದೆಹಲಿಯಲ್ಲಿ ಶತಮಾನೋತ್ಸವ ಆಚರಿಸಲಾಗುವುದು. ಇದರ ಅಂಗವಾಗಿ ಯುವ ಪ್ರತಿಭೆಗಳಿಗೆ ತರಬೇತಿ, ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.

Facebook Comments