ನಾಳೆ ಜಡ್ಜ್‌ಮೆಂಟ್ ಡೇ, ಮುಂದಿನ 5 ವರ್ಷ ದೇಶವನ್ನು ಮುನ್ನೆಡೆಸುವವರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 22- ಶತಕೋಟಿ ಭಾರತೀಯರು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಮುಂದಿನ 5 ವರ್ಷಕ್ಕೆ ದೇಶವನ್ನು ಮುನ್ನೆಡೆಸುವವರು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.

ನಾಳೆ ಬೆಳಗ್ಗೆ ದೇಶದ 542 ಲೋಕಸಭಾ ಕ್ಷೇತ್ರಗಳೊಂದಿಗೆ ಆಂಧ್ರಪ್ರದೇಶ, ಸಿಕ್ಕಿಂ ಹಾಗೂ ಒರಿಸ್ಸಾ ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲದಲ್ಲಿ ಮತಗಳ ಎಣಿಕೆ ಪ್ರಾರಂಭವಾಗಲಿದ್ದು, ಸಂಜೆಯೊಳಗೆ ಸ್ಪಷ್ಟ ಜನಾದೇಶ ಹೊರಬೀಳಲಿದೆ.

ಕರ್ನಾಟಕ 28 ಲೋಕಸಭೆ ಹಾಗೂ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಪ್ರಕಟವಾಗಲಿದೆ. ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಸತ್ಯಾಸತ್ಯತೆ ಬಗ್ಗೆ ಕೆಲವು ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 5 ಮತಗಟ್ಟೆಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‍ಗಳ ಮತಗಳನ್ನು ತಾಳೆ ಹಾಕಿ ಎಣಿಕೆ ಮಾಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದರಿಂದ ಈ ಬಾರಿ ಫಲಿತಾಂಶ ಪ್ರಕಟಗೊಳ್ಳಲು ವಿಳಂಬವಾಗಲಿದೆ.

ಮೊದಲು ಇವಿಎಂಗಳ ಮತ ಎಣಿಕೆ ಮುಗಿಯಲಿದ್ದು, ನಂತರ ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಲಾಗುವುದು. ಇದರಿಂದ 3ರಿಂದ 4 ಗಂಟೆ ಫಲಿತಾಂಶ ಪ್ರಕಟಗೊಳ್ಳಲು ವಿಳಂಬವಾಗಲಿದೆ ಎಂದು ಆಯೋಗ ತಿಳಿಸಿದೆ.

ಹಿಂದಿನ ಚುನಾವಣೆಗಳಲ್ಲಿ ಇವಿಎಂಗಳಲ್ಲೇ ಮತ ಎಣಿಕೆ ನಡೆಯುತ್ತಿದ್ದರಿಂದ ಸರಿಸುಮಾರು 12 ಗಂಟೆಯೊಳಗೆ ಬಹುತೇಕ ಫಲಿತಾಂಶ ಸಿಗುತ್ತಿತ್ತು.

ಯಾರಿಗೆ ಸೋಲು-ಯಾರಿಗೆ ಗೆಲುವು?:
ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ ಚುನಾವಣಾ ಫಲಿತಾಂಶವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆಯೇ ಇಲ್ಲವೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆಯೇ ಎಂಬುದನ್ನು ನಾಳಿನ ಫಲಿತಾಂಶದಲ್ಲಿ ಗೊತ್ತಾಗಲಿದೆ.

ಶತಾಯಗತಾಯ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದೆ. ಚುನಾವಣೆ ಘೋಷಣೆಯಾಗುವ ಮೊದಲೇ ನರೇಂದ್ರ ಮೋದಿ ಅವರು ದೇಶಾದ್ಯಂತ ಮಿಂಚಿನ ಸಂಚಾರ ನಡೆಸಿ ಪ್ರಚಾರ ನಡೆಸಿದ್ದರು.

ಚುನಾವಣೆ ಮುನ್ನ ಮಿತ್ರಪಕ್ಷಗಳು ಕೈ ಕೊಡಬಹುದೆಂಬ ಭೀತಿಯಿಂದಾಗಿ ಬಿಜೆಪಿ ತನ್ನ ಅಂಗಪಕ್ಷಗಳಾದ ಜೆಡಿಯು, ಶಿವಸೇನೆ ಸೇರಿದಂತೆ ಪ್ರಮುಖ ಪಕ್ಷಗಳು ಕೇಳಿದಷ್ಟು ಸ್ಥಾನಗಳನ್ನು ಬಿಟ್ಟುಕೊಟ್ಟಿತು.

ಇನ್ನು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ನಡೆಸಿದ ಸಂಘಟಿತ ಹೋರಾಟಕ್ಕೆ ಕೊನೆ ಕ್ಷಣದಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಉತ್ತರಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷವನ್ನು ದೂರ ಇಟ್ಟಿತು.

ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಒಂದೇ ಒಂದೂ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ಇದುದ್ದರಿಂದಲೇ ಬಿಹಾರ, ತಮಿಳುನಾಡು, ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿತು.

ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡರೂ ಕೊನೆ ಕ್ಷಣದವರೆಗೂ ಎರಡೂ ಪಕ್ಷಗಳ ನಡುವೆ ಹೇಳಿಕೊಳ್ಳುವಂತಹ ಹೊಂದಾಣಿಕೆ ಕಂಡುಬರಲಿಲ್ಲ.ಇದು ಫಲಿತಾಂಶದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

# ಸಮೀಕ್ಷೆಗಳಲ್ಲಿ ಬಿಜೆಪಿ ಮುಂದು:
ಭಾನುವಾರ ಮುಕ್ತಾಯಗೊಂಡ 7ನೇ ಹಾಗೂ ಅಂತಿಮ ಸುತ್ತಿನ ಮತದಾನ ಮುಗ್ಗಿಯುತ್ತಿದ್ದಂತೆ ದೇಶದ ವಿವಿಧ ಖಾಸಗಿ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೊಮ್ಮೆ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದೆ.

ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಬಿಜೆಪಿ ನೇತೃತ್ವದ ಎನ್‍ಡಿಎ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಯುಪಿಎ ಹಾಗೂ ಇತರರು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ನಡೆಸಿದ ಸರ್ಕಸ್‍ಗೆ ಮತದಾರಸೊಪ್ಪು ಹಾಕಿಲ್ಲ.

ಇನ್ನು ಈ ಬಾರಿಯ ಚುನಾವಣೆಯಲ್ಲಿ ನೋಟು ಅಮಾನೀಕರಣ, ಆರ್ಥಿಕ ಕುಸಿತ, ನಿರುದ್ಯೋಗ ಸೇರಿದಂತೆ ಪ್ರಚಲಿತ ಸಮಸ್ಯೆಗಳು ಚುನಾವಣಾ ಸಂದರ್ಭದಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ.

ಬಾಲ್‍ಕೋಟ್‍ನಲ್ಲಿ ಉಗ್ರರ ಶಿಬಿರಗಳ ಮೇಲೆ ನಡೆದ ವೈಮಾನಿಕ ದಾಳಿ, ಸರ್ಜಿಕಲ್ ಸ್ಟ್ರೈಕ್, ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ನಿಗ್ರಹ ಇಂತಹ ವಿಷಯಗಳೆ ಪ್ರಚಾರದಲ್ಲಿ ಹೆಚ್ಚು ಸುದ್ದಿಯಾಗಿದ್ದವು. ಏಳು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಶೇ.63.3ರಷ್ಟು ಮತದಾನವಾಗಿತ್ತು.

[ LOKSABHA ELECTIONS 2019 RESULT – Live Updates ]

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin