ಮೊದಲ ಹಂತದ ಮತದಾನ ಮುಕ್ತಾಯ : ದ. ಕನ್ನಡದಲ್ಲಿ ಅತಿ ಹೆಚ್ಚು, ಬೆಂ. ಕೇಂದ್ರ ಕ್ಷೇತ್ರದಲ್ಲಿ ಅತಿ ಕಡಿಮೆ ವೋಟಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.18- ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವೆಂದೇ ಬಿಂಬಿತವಾಗಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿ ಒಟ್ಟಾರೆ ಶೇಕಡಾ 65 ರಿಂದ 69 ಮತದಾನವಾಗಿದೆ.  ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಕೇಂದ್ರದಲ್ಲಿ ಅತೀ ಕಡಿಮೆ ಪ್ರಮಾಣದ ಮತದಾನವಾಗಿದೆ.

ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಮತದಾರರಿಗೆ ಆಮೀಷ, ನಕಲಿ ಮತದಾನ, ಹೆಸರು ಬಿಟ್ಟು ಹೋಗಿರುವುದು ಸೇರಿದಂತೆ ಹಲವು ಗೊಂದಲಗಳ ನಡುವೆ ಮೊದಲ ಹಂತದ ಚುನಾವಣಾ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಕೆಲವು ಕಡೆ ಮತ ಯಂತ್ರಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿರುವ ಘಟನೆಗಳು ಹಲವೆಡೆ ನಡೆದಿದೆ. ಇದರಿಂದ ಕೆಲವರು ಆಕ್ರೋಶ ವ್ಯಕಪಡಿಸಿ ಚುನಾವಣಾಧಿಕಾರಿಗಳ ಜೊತೆ ಮಾತಿನ ಚಕಮಕಿ ಘನೇ ನಡೆದಿದೆ.

ಮಂಡ್ಯ, ಕೆ ಆರ್ ಪುರಂ, ಚಿತ್ರದುರ್ಗ ಸೇರಿದಂತೆ ವಿವಿದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತದ ನಡುವೆ ಗಲಾಟೆ ನಡೆದು ಹಲವಾರು ಗಾಯಗೊಂಡಿದ್ದಾರೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಪ್ರಾರಂಭದಲ್ಲೇ ನಿರೀಕ್ಷೆಗೂ ಮೀರಿದ ಉತ್ಸಾಹ ಕಂಡುಬಂದಿತು. ಹಿರಿಯರು, ಕಿರಿಯರು, ಯುವ ಮತದಾರರು, ವಯೋವೃದ್ಧರು ಬೆಳಗ್ಗೆಯಿಂದಲೇ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.

ಪ್ರಜಾಪ್ರಭುತ್ವದ ಹಬ್ಬವೆಂದೇ ಪರಿಗಣಿತವಾದ ಈ ಚುನಾವಣೆಯಲ್ಲಿ ಬೆಂಗಳೂರಿನ ಗೌರಮ್ಮ ಎಂಬ 105 ವರ್ಷದ ವಯೋವೃದ್ಧೆ ಒಂದು ಕಿಲೋ ಮೀಟರ್ ನಡೆದುಕೊಂಡೇ ಬಂದು ಮತದಾನ ಮಾಡಿದ್ದು ಮತದಾನಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಸಾರಿ ಹೇಳುವಂತಿತ್ತು.

ನಿನ್ನೆ ರಾತ್ರಿ ಕೆಲವು ಕಡೆ ಮಳೆ ಸುರಿದ ಪರಿಣಾಮ ಇಂದು ಅಷ್ಟು ಬಿಸಿಲಿನ ತಾಪ ಇರಲಿಲ್ಲ. ಪರಿಣಾಮ ಬೆಳಗಿನಿಂದಲೇ ಮತದಾರರು ಉತ್ಸಾಹದಿಂದಲೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತಗಟ್ಟೆ ಅಧಿಕಾರಿ ಸಾವು: ಚಾಮರಾಜನಗರ ಜಿಲ್ಲೆ ಯಳಂದೂರು ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ (48) ಎಂಬುವವರು ಬೆಳಗ್ಗೆ ಹೃದಯಾಘಾತವಾಗಿ ಮತಗಟ್ಟೆಯಲ್ಲಿ ಸಾವನ್ನಪ್ಪಿದ್ದಾರೆ.

ಇವರು ಹನೂರಿನ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನ ಗಾಳಿ ಆಂಜನೇಯ ಕ್ಷೇತ್ರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬಂದಿದ್ದ ರಾಮಚಂದ್ರ ಎಂಬುವವರಿಗೆ ಸರದಿಯಲ್ಲಿ ನಿಂತ ವೇಳೆ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

# ಮತದಾನ ಬಹಿಷ್ಕಾರ:
ಇನ್ನು ಮತದಾನದ ವೇಳೆ ಕೆಲವು ಕಡೆ ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಅಲ್ಲಲ್ಲಿ ಮತದಾನ ಬಹಿಷ್ಕರಿಸಿರುವ ಘಟನೆಗಳೂ ಜರುಗಿವೆ.  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗ್ರಾಮವಾದ ನಗರಘಟ್ಟದಲ್ಲಿ ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯ ನೀಡದೆ ಗ್ರಾಮಸ್ಥರು ಪರದಾಡುತ್ತಿದ್ದರೂ ಇತ್ತಕಡೆ ಯಾರೂ ಕೂಡ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮತದಾನ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಚಿತ್ರಹಳ್ಳಿ ಪೊಲೀಸರು ಗ್ರಾಮಸ್ಥರ ಮನವೊಲಿಸುವಲ್ಲಿ ನಿರತರಾಗಿದ್ದುದು ಕಂಡುಬಂದಿತು.  ಇದೇ ರೀತಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕ ಬೇಡಗೆರೆ ಗ್ರಾಮಕ್ಕೆ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಜಿಪಂ ಹಾಗೂ ಗ್ರಾಪಂ ಸದಸ್ಯರು ಚಿಕ್ಕ ಬೇಡಗೆರೆ ಗ್ರಾಮದ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಮತಗಟ್ಟೆ ಸಂಖ್ಯೆ 118ರ ಬಳಿ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ ಹಾಗೂ ಬಂಟೇನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ ಅವರ ಪತಿ ದಾಸಪ್ಪ ಸ್ಥಳಕ್ಕಾಗಮಿಸಿ ಮನವೊಲಿಸಲು ಯತ್ನಿಸಿದರಾದರೂ ಫಲಿಸಲಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಕಾಗನಪಲ್ಲಿಯಲ್ಲೂ ಮತದಾರರು ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದರು.ಇನ್ನೊಂದೆಡೆ ಇಲ್ಲಿನ ಮತಗಟ್ಟೆ ಸಂಖ್ಯೆ 165ರಲ್ಲಿ ಮಹಿಳೆಯೊಬ್ಬರು ಕಮಲದ ಚಿಹ್ನೆ ಇರುವ ಸೀರೆ ಧರಿಸಿ ಮತ ಚಲಾಯಿಸಲು ಬಂದಿದ್ದರು.

# ಕೈಕೊಟ್ಟ ಮತಯಂತ್ರಗಳು:
ಮತದಾನದ ವೇಳೆ ಕೆಲವು ಕಡೆ ವಿದ್ಯುನ್ಮಾನ ಯಂತ್ರಗಳು ಕೈಕೊಟ್ಟ ಪರಿಣಾಮ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಮತದಾರರು ಕೂಡ ಗೊಂದಲಕ್ಕೆ ಒಳಗಾಗಿದ್ದರು. ತಕ್ಷಣವೇ ಸಿಬ್ಬಂದಿ ಯಂತ್ರವನ್ನು ಸರಿಪಡಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

# ಮಾತಿನ ಚಕಮಕಿ:
ಮತ ಚಲಾಯಿಸುವ ವೇಳೆ ಅಲ್ಲಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ನಕಲಿ ಮತದಾರರ ಸೇರ್ಪಡೆ, ಮತಪಟ್ಟಿಯಿಂದಲೇ ಹೆಸರು ನಾಪತ್ತೆ, ಬೇರೊಬ್ಬರ ಹೆಸರಿನಲ್ಲಿ ಮತದಾನ, ಮತಗಟ್ಟೆ ಸಮೀಪ ಮತದಾರರಿಗೆ ಆಮಿಷ ಇಂತಹ ಕಾರಣಗಳಿಂದಲೇ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದು ಮಾತಿನ ಚಕಮಕಿಯೂ ನಡೆದಿದೆ.

ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರ ನಿವಾಸಿ ದೇವರಾಜ್ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿ ಮತ ಚಲಾಯಿಸಿದ್ದರಿಂದ ಕೆಲಕಾಲ ಮತಗಟ್ಟೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೇ ರೀತಿ ನಾಗರಬಾವಿಯಲ್ಲಿ 384 ಮತದಾರರ ಹೆಸರುಗಳು ಪಟ್ಟಿಯಿಂದಲೇ ನಾಪತ್ತೆಯಾದ ಘಟನೆಯೂ ನಡೆದಿದೆ. ಯಲಹಂಕದ ಕೆಲವು ಕಡೆ ಆಂಧ್ರದ ಮೂಲದವರು ನಕಲಿ ಮತ ಚಲಾಯಿಸಲು ಬಂದು ಸಿಕ್ಕಿಹಾಕಿಕೊಂಡಿದ್ದಾರೆಂದು ತಿಳಿದುಬಂದಿದೆ.ಮತ ಚಲಾಯಿಸಿದ ವಧು-ವರರು: ಮತದಾನದ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುಡ್ಪಲ್ತಡ್ಕದಲ್ಲಿ ನವ ದಂಪತಿ ಮತದಾನ ಮಾಡಿದ್ದು ವಿಶೇಷವಾಗಿತ್ತು.

# ಘಟಾನುಘಟಿಗಳ ಹಣೆಬರಹ ನಿರ್ಧಾರ:
ಇಂದು ನಡೆದ 14 ಲೋಕಸಭಾ ಕ್ಷೇತ್ರಗಳ ಮತದಾನದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ನ ಘಟಾನುಘಟಿ ಮುಖಂಡರ ರಾಜಕೀಯ ಭವಿಷ್ಯವನ್ನು ಮತದಾರ ಮತಗಟ್ಟೆ ಯಂತ್ರದಲ್ಲಿ ಬರೆದಿದ್ದಾನೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (ತುಮಕೂರು), ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ (ಬೆಂಗಳೂರು ಉತ್ತರ), ಸಚಿವ ಕೃಷ್ಣಭೈರೇಗೌಡ (ಬೆಂಗಳೂರು ಉತ್ತರ), ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (ಮಂಡ್ಯ), ಚಿತ್ರನಟಿ, ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ (ಮಂಡ್ಯ), ಪ್ರಜ್ವಲ್ ರೇವಣ್ಣ (ಹಾಸನ), ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ), ಬಿ.ಕೆ.ಹರಿಪ್ರಸಾದ್ (ಬೆಂಗಳೂರು ದಕ್ಷಿಣ), ವೀರಪ್ಪಮೊಯ್ಲಿ (ಚಿಕ್ಕಬಳ್ಳಾಪುರ), ಕೆ.ಎಚ್.ಮುನಿಯಪ್ಪ (ಕೋಲಾರ), ಶೋಭಾ ಕರಂದ್ಲಾಜೆ (ಉಡುಪಿ-ಚಿಕ್ಕಮಗಳೂರು) ಸೇರಿದಂತೆ ಅನೇಕರ ರಾಜಕೀಯ ಭವಿಷ್ಯ ತೀರ್ಮಾನವಾಗಿದೆ.ಒಟ್ಟು 2 ಕೋಟಿ 68 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಚುನಾವಣಾ ಆಯೋಗ, ಸಂಘ-ಸಂಸ್ಥೆಗಳು ಹಾಗೂ ರಾಯಭಾರಿಗಳ ಮೂಲಕ ನಡೆಸಿದ ಪ್ರಚಾರ ಈ ಚುನಾವಣೆಯಲ್ಲಿ ಫಲಪ್ರದವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ