ಲೋಕಸಭಾ ಚುನಾವಣೆ 2019 : 14 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ (Live)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.18 – ಪ್ರಸಕ್ತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ.

ಇಂದು ಘಟಾನುಘಟಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಕೆ.ಎಚ್. ಮುನಿಯಪ್ಪ ಸೇರಿದಂತೆ 241 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆ ಸೇರಲಿದೆ.

ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಅಗತ್ಯ ಭದ್ರತೆ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು (12), ಹಾಸನ (6), ದಕ್ಷಿಣ ಕನ್ನಡ (13), ಚಿತ್ರದುರ್ಗ (19), ತುಮಕೂರು (15), ಮಂಡ್ಯ (22), ಮೈಸೂರು (22), ಚಾಮರಾಜನಗರ (10), ಬೆಂಗಳೂರು ಗ್ರಾಮಾಂತರ (15), ಬೆಂಗಳೂರು ಉತ್ತರ (31), ಬೆಂಗಳೂರು ಕೇಂದ್ರ(22), ಬೆಂಗಳೂರು ದಕ್ಷಿಣ (25), ಚಿಕ್ಕಬಳ್ಳಾಪುರ (15)ಹಾಗೂ ಕೋಲಾರ (14) ಸೇರಿದಂತೆ 241 ಮತದಾರರು ಸ್ಪರ್ಧಾ ಕಣದಲ್ಲಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ 10, ಜೆಡಿಎಸ್‍ನಿಂದ 4, ಬಿಜೆಪಿಯಿಂದ 13 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ಕೆ.ಎಚ್.ಮುನಿಯಪ್ಪ, ಶೋಭಾ ಕರಂದ್ಲಾಜೆ, ವೀರಪ್ಪಮೊಯ್ಲಿ, ಪಿ.ಸಿ.ಮೋಹನ್, ನಳಿನ್‍ಕುಮಾರ್ ಕಟಿಲ್, ಪ್ರತಾಪ್ ಸಿಂಹ, ಚಂದ್ರಪ್ಪ, ಧೃವನಾರಾಯಣ್, ಡಿ.ಕೆ.ಸುರೇಶ್, ಬಿ.ಕೆ.ಹರಿಪ್ರಸಾದ್, ಸಚಿವ ಕೃಷ್ಣಭೈರೇಗೌಡ,

ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಎ.ನಾರಾಯಣಸ್ವಾಮಿ, ವಿ.ಶ್ರೀನಿವಾಸ ಪ್ರಸಾದ್, ಎ.ಮಂಜು, ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್, ಪಕ್ಷೇತರ ಅಭ್ಯರ್ಥಿಗಳಾದ ಸುಮಲತಾ, ಪ್ರಕಾಶ್ ರಾಜ್, ತೇಜಸ್ವಿ ಸೂರ್ಯ ಸೇರಿದಂತೆ ಬಿಎಸ್‍ಪಿ ಮತ್ತಿತರ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಮೊದಲ ಹಂತದಲ್ಲಿ 30,164 ಮತಗಟ್ಟೆಗಳಿವೆ. 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ಮತಗಟ್ಟೆಗಳಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗುತ್ತದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 5,10,59,103 ಮತದಾರರಿದ್ದು, ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದವರ ಸಂಖ್ಯೆ 10,09,167. ಮೊದಲ ಹಂತದ 14 ಕ್ಷೇತ್ರಗಳಲ್ಲಿ 2,67,51,893 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

ಈಗಾಗಲೇ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಿಗೆ ವೋಟರ್ ಸ್ಲಿಪ್‍ಗಳನ್ನು ನೀಡಲಾಗಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಿದ್ದು, ದಿವ್ಯಾಂಗರಿಗೆ ರ್ಯಾಂಪ್‍ಗಳು, ಭೂತಕನ್ನಡಿ, ಕುಡಿಯುವ ನೀರು, ಗಾಲಿ ಕುರ್ಚಿ, ಸಾರಿಗೆ ವ್ಯವಸ್ಥೆ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

# ಸೂಕ್ಷ್ಮ ಮತಗಟ್ಟೆಗಳು:
ಮೊದಲ ಹಂತದ ಮತದಾನದಲ್ಲಿ 6012 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿವೆ. ಅದರಲ್ಲಿ 990 ಸಿಎಪಿಎಫ್, 2038 ಮೈಕ್ರೋ ಅಬ್ಸರ್ವರ್‌ಗಳು, 1666 ವೆಬ್ ಕ್ಯಾಮೆರಾಗಳು, 2308 ಮತಗಟ್ಟೆಗಳನ್ನು ವಿಡಿಯೋ ಗ್ರಾಫರ್‌ಗಳು ನಿರ್ವಹಣೆ ಮಾಡಲಿದ್ದಾರೆ.

# ಭಾರಿ ಬಿಗಿ ಭದ್ರತೆ :
ಮತದಾನ ಕೇಂದ್ರದ ವ್ಯಾಪ್ತಿಯ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಮತದಾನ ಕೇಂದ್ರದ ಸುತ್ತಲೂ ಪೊಲೀಸ್, ಸಿಆರ್‌ಪಿಎಫ್ ಪಡೆ ಸೇರಿದಂತೆ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿದೆ. ಚುನಾವಣಾ ಕಾರ್ಯಕ್ಕೆ 1,54,262 ಸಿಬ್ಬಂದಿ ನಿಯೋಜಿಸಿದ್ದು, ಮತಗಟ್ಟೆಗಳ ಭದ್ರತೆಗೆ 38,597 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.

# 397 ಸಖಿ ಮತಗಟ್ಟೆಗಳು : 
ಮೊದಲ ಹಂತದ ಲೋಕಸಭಾ ಚುನಾವಣೆ 14 ಕ್ಷೇತ್ರಗಳ ವ್ಯಾಪ್ತಿಯಲ್ಲಿ 393 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 32 ಕಡೆಗಳಲ್ಲಿ ಪಾರಂಪರಿಕ ಮತಗಟ್ಟೆಗಳಿದ್ದು, 61 ಕಡೆಗಳಲ್ಲಿ ವಿಶೇಷಚೇತನರೇ ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

# ಎಡಗೈ ತೋರು ಬೆರಳಿಗೆ ಶಾಹಿ :
ಮತದಾನದ ಬಳಿಕ ಮತ ಚಲಾವಣೆಯ ಗುರುತನ್ನು ಪ್ರತಿ ಮತದಾರರ ಎಡಗೈನ ನಾಲ್ಕನೇ ಬೆರಳಿಗೆ ಶಾಹಿ ಗುರುತು ಹಾಕಲಾಗುತ್ತದೆ. ಕುಂದಗೋಳ ಹಾಗೂ ಚಿಂಚೊಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವರಿಗೆ ಎಡಗೈನ ಮಧ್ಯದ ಬೆರಳಿಗೆ ಶಾಹಿ ಗುರುತು ಹಾಕಲಾಗುತ್ತದೆ.

# ಮೊಬೈಲ್ ಬಳಸುವಂತಿಲ್ಲ :
ಭದ್ರತಾ ದೃಷ್ಟಿಯಿಂದ ಮತದಾರರು ತಮ್ಮ ಮತ ಚಲಾವಣೆ ಸಂದರ್ಭದಲ್ಲಿ ಮತಗಟ್ಟೆಗೆ ಯಾವುದೇ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್ ಫೋನ್ ತಂದರೆ, ಭದ್ರತಾ ಅಧಿಕಾರಿಗಳು ಅದನ್ನು ವಶಕ್ಕೆ ಪಡೆಯುತ್ತಾರೆ.

Facebook Comments

Sri Raghav

Admin