ಬಿಗ್ ನ್ಯೂಸ್ : ಚುನಾವಣೋತ್ತರ ಸಮೀಕ್ಷೆ ಬಹಿರಂಗ, ಎನ್‍ಡಿಎಗೆ ಮತ್ತೆ ಅಧಿಕಾರ ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ- ಭಾರೀ ಹಣಾಹಣಿಯಿಂದ ಕೂಡಿದ್ದ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಭಾನುವಾರ ಏಳನೇ ಹಾಗೂ ಅಂತಿಮ ಸುತ್ತಿನ ಮತದಾನ ಮುಗಿದ ಬೆನ್ನಲ್ಲೇ ದೇಶದ ವಿವಿಧ ಖಾಸಗಿ ಸುದ್ದಿವಾಹಿನಿಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವ ಎನ್‍ಡಿಎ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ರಾಷ್ಟ್ರದ ಚುನಾವಣಾ ಸಮೀಕ್ಷೆ ಸಂಸ್ಥೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 287 ರಿಂದ 306 ಸ್ಥಾನಗಳನ್ನು ಗಳಿಸಿ ಮುನ್ನಡೆ ಕಾಯ್ದುಕೊಂಡಿದೆ.  ಎಲ್ಲ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಸುಮಾರು 21 ರಿಂದ 22 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.

ಕಾಂಗ್ರೆಸ್-ಜೆಡಿಎಸ್ ನಾಯಕರ ಕಿತ್ತಾಟ ನೇರವಾಗಿ ಬಿಜೆಪಿ ಲಾಭ ಪಡೆದುಕೊಂಡಿದೆ.  2014ರ ಚುನಾವಣೆಯಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಕೊಂಡಿತ್ತು. ಇದೀಗ 2019ರ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಏರಿಸಿಕೊಂಡಂತೆ ಕಾಣುತ್ತಿದೆ.

ನಿರೀಕ್ಷೆಯಂತೆ ಎರಡನೇ ಬಾರಿಯೂ ಬಿಜೆಪಿ ನೇತೃತ್ವದ ಎನ್​ಡಿಎ ಮತ್ತೊಮ್ಮೆ ಕೇಂದ್ರದ ಗದ್ದುಗೆಯನ್ನು ಏರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಲೆ ಇನ್ನು ಜೀವಂತವಾಗಿರುವುದು ಸಮೀಕ್ಷೆಯಲ್ಲಿ ಸಾಬೀತಾಗಿದೆ.

ಎನ್​ಡಿಎಗೆ ಭಾರಿ ಪೈಪೋಟಿ ನೀಡಿರುವ ಕಾಂಗ್ರೆಸ್​​ ನೇತೃತ್ವದ ಯುಪಿಎ ಈ ಬಾರಿ ಪ್ರತಿಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ದೂರವಿಡಬೇಕೆಂದು ಹಲವು ಪಕ್ಷಗಳು ಸೇರಿ ಬಿಜೆಪಿ ವಿರುದ್ಧ ನಡೆಸಿದ ಹೋರಾಟ ಗುರಿ ತಲುಪದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ರಾಷ್ಟ್ರೀಯ ವಾಹಿನಿ ಟೈಮ್ಸ್ ನೌ ಎನ್‍ಡಿಎ 306 ಕ್ಷೇತ್ರಗಳು, ಯುಪಿಎ 132 ಹಾಗೂ ಇತರೇ 104 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದೆ. ಕರ್ನಾಟಕದಲ್ಲೂ ಕಮಲ ಪ್ರಭಾವ ಹೆಚ್ಚಾಗಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 21, ಕಾಂಗ್ರೆಸ್-ಜೆಡಿಎಸ್‍ಗೆ 07 ಹಾಗೂ ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಿ ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ ನೇತೃತ್ವದ ಎನ್‍ಡಿಎ 287, ಕಾಂಗ್ರೆಸ್ ನೇತೃತ್ವದ ಯುಪಿಎ 128, ಇತರರು 127 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ. ಕರ್ನಾಟಕದಲ್ಲಿ ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

ಕರ್ನಾಟಕದಲ್ಲೂ ಗರಿಗೆದರಿರುವ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ಮತದಾನೋತ್ತರ ಸಮೀಕ್ಷೆ ಅಂದಾಜಿನ ಉತ್ತರ ನೀಡಿದ್ದು, ಬಿಜೆಪಿಯನ್ನು ದೂರವಿಡಲು ಇದೇ ಮೊದಲು ಬಾರಿಗೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಕೂಡ ಮೋದಿ ಅಲೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ.

ವಿಶೇಷವಾಗಿ ರಾಜ್ಯದ ಜನರ ಗಮನವನ್ನು ಹೆಚ್ಚಾಗಿ ಸೆಳೆದಿದ್ದ ಸಕ್ಕರೆ ನಾಡು ಮಂಡ್ಯ ಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಜಯಭೇರಿ ಬಾರಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತಿದ್ದು, ನಿಖಿಲ್​ ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ನೋಟಿ ಅಮಾನೀಕರಣ, ಜಿಎಸ್‍ಟಿ, ನಿರುದ್ಯೋಗ, ಆರ್ಥಿಕ ಕುಸಿತ ಸೇರಿದಂತೆ ದೇಶದ ಪ್ರಚಲಿತ ಸಮಸ್ಯೆಗಳು ಚುನಾವಣಾ ಸಂದರ್ಭದಲ್ಲಿ ಅಷ್ಟೊಂದು ಪರಿಣಾಮ ಬೀರಿಲ್ಲ. ಬದಲಿಗೆ ಬಿಜೆಪಿ ಮತದಾರರ ಮೇಲೆ ಬಳಸಿದ ಭಾವನಾತ್ಮಕ ಅಂಶಗಳು ಸಹಕಾರಿಯಾಗಿದೆ ಎಂಬುದು ಸಮೀಕ್ಷೆಗಳಿಂದ ಸಾಬೀತಾಗಿದೆ.

ಅಂದರೆ, ಪಾಕ್ ಆಕ್ರಮಿತ ಕಾಶ್ಮೀರದ ಬಾಲ್‍ಕೋಟ್‍ನಲ್ಲಿ ನಡೆದ ವಾಯುದಾಳಿ, ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ನಿಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮಗಳು, ಮೋದಿ ಅವರ ವೈಯಕ್ತಿ ವರ್ಚಸ್ಸು, ವಿರೋಧ ಪಕ್ಷಗಳ ದೌರ್ಬಲ್ಯದಿಂದಲೇ ಎನ್‍ಡಿಎ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ಮಹಾಘಟ್‍ಬಂಧನ್ ವಿಫಲ:
ಚುನಾವಣೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ಮಹಾಘಟ್‍ಬಂಧನ್ ದೇಶದ ಅತಿದೊಡ್ಡ ರಾಜ್ಯವೆನಿಸಿದ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸುವಲ್ಲಿ ವಿಫಲವಾಗಿದೆ. ಬಿಎಸ್‍ಪಿ, ಎಸ್‍ಪಿ ಮೈತ್ರಿ ಮಾಡಿಕೊಂಡರೂ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ರಾಜ್ಯದ ಒಟ್ಟು 80 ಲೋಕಸಭೆಗಳ ಪೈಕಿ ಬಿಜೆಪಿ 45ರಿಂದ 50 ಸ್ಥಾನಗಳನ್ನು ಪಡೆಯಲಿದೆ. 2014ರಲ್ಲಿ ಬಿಜೆಪಿ 71 ಕ್ಷೇತ್ರಗಳನ್ನು ಗೆದ್ದಿತ್ತು.

ಮಾಯಾವತಿ -ಅಖಿಲೇಶ್ ಯಾಧವ್ ಎಷ್ಟೇ ಪರಿಣಾಮಕಾರಿಯಾಗಿ ಪ್ರಚಾರ ನಡೆಸಿದರೂ ನರೇಂದ್ರ ಮೋದಿ ಅಲೆಯ ಮುಂದೆ ಆನೆ ಮತ್ತು ಸೈಕಲ್ ಮಂಡಿಯೂರಿವೆ. ಇನ್ನು ಒಂದಿಲ್ಲೊಂದು ಕಾರಣಗಳಿಂದ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನಗಳಿಸುವ ಲಕ್ಷಣಗಳಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಟಿಎಂಸಿಯ ಭದ್ರಕೋಟೆಯನ್ನು ಛಿದ್ರ ಮಾಡಿರುವ ಬಿಜೆಪಿ, ರಾಜ್ಯದ ಒಟ್ಟು 42 ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 15ರಿಂದ 18 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದ್ದರೆ, ಟಿಎಂಸಿ 20 ಸ್ಥಾನಕ್ಕೆ ತೃಪ್ತಿಪಡಲಿದೆ. ಎಡಪಕ್ಷ ಒಂದಂಕ್ಕಿಗೆ ಇಳಿಯಲಿದೆ.

# ಬಲ ಹೆಚ್ಚಿಸಿದ ಮೈತ್ರಿ ಕೂಟ:
ಇನ್ನು ಬಿಜೆಪಿ ಮೈತ್ರಿ ಕೂಟವಿರುವ ಬಿಹಾರ, ಮಹಾರಾಷ್ಟ್ರದಲ್ಲಿ ಎನ್‍ಡಿಎಗೆ ಹೆಚ್ಚಿನ ಸ್ಥಾನಗಳು ಬರುವ ಸಾಧ್ಯತೆ ಇದೆ.
ಬಿಹಾರದಲ್ಲಿ 40 ಲೋಕಸಭೆ ಕ್ಷೇತ್ರಗಳ ಪೈಕಿ ಎನ್‍ಡಿಎ ಮೈತ್ರಿಕೂಟಕ್ಕೆ 28ರಿಂದ 32 ಸ್ಥಾನಗಳು ಲಭಿಸಲಿದೆ.

ದೇಶದ 2ನೇ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಎನ್‍ಡಿಎ ಈ ಬಾರಿ ಭರ್ಜರಿ ಫಸಲು ತೆಗೆಯುವ ನೀರಿಕ್ಷೆ ಇದೆ. 48 ಲೋಕಸಭೆ ಕ್ಷೇತ್ರಗಳ ಪೈಕಿ ಎನ್‍ಡಿಎಗೆ 31ರಿಂದ 35 ಕ್ಷೇತ್ರಗಳು ಲಭಿಸಲಿವೆ.

ಹಿಂದಿ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್‍ಗಢ, ರಾಜಸ್ತಾನ, ಜಾರ್ಖಂಡ್, ಹಿಮಾಚಲಪ್ರದೇಶ, ಉತ್ತರಖಂಡ್ ರಾಜ್ಯಗಳಲ್ಲಿ ಕಳೆದ ಬಾರಿಗಿಂತ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದುಕೊಳ್ಳಲಿದೆ.

ಪ್ರಧಾನಿ ಮೋದಿ ಅವರ ತವರೂರು ಗುಜರಾತ್‍ನಲ್ಲಿ 26 ಲೋಕಸಭೆ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳನ್ನು ಗೆಲ್ಲುವ ಸಂಭವವಿದೆ. ಒಡಿಶಾದಲ್ಲೂ ಈ ಬಾರಿ ಬಿಜೆಪಿ 8ರಿಂದ 10 ಸ್ಥಾನಗಳನ್ನು ಪಡೆಯಲಿದೆ ಎಂಬುದು ಸಮೀಕ್ಷೆಯಿಂದ ಕಂಡು ಬಂದಿದೆ.

#@ ದಕ್ಷಿಣ ಭಾರತದಲ್ಲಿ ಹಿನ್ನಡೆ:
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿ ಕೂಟ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತು ಪಡಿಸಿ ಉಳಿದ ಕಡೆ ನೆಲಕಚ್ಚಲಿದೆ.ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟವಿದ್ದರೂ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ  14ರಿಂದ 16 ಸ್ಥಾನ ಪಡೆದರೆ ದೋಸ್ತಿ ಪಕ್ಷಗಳಿಗೆ 10ರಿಂದ 12 ಸ್ಥಾನಗಳು ಬರುವ ಸಾಧ್ಯತೆ ಇದೆ. ಉಳಿದಂತೆ ತೆಲಂಗಾಣ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಎನ್‍ಡಿಎ ಕಳಪೆ ಪ್ರದರ್ಶನ ನೀಡಲಿದೆ.

# ಚಂದ್ರಬಾಬು ನಾಯ್ಡುಗೆ ಮುಖಭಂಗ:
ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿದ್ದ ಚಂದ್ರಬಾಬು ನಾಯ್ಡು ಅವರು ತವರು ರಾಜ್ಯ ಆಂಧ್ರದಲ್ಲೇ ಮುಖಭಂಗವಾಗುವ ನಿರೀಕ್ಷೆ ಇದೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಎರಡರೂ ಟಿಡಿಪಿ ಹೀನಾಯ ಸೋಲಾಗುವ ಸಾಧ್ಯತೆ ಇದ್ದು, ವೈಎಸ್‍ಆರ್ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯುವ ಸಂಭವವಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆಗೂ ಮುಖಭಂಗವಾಗುವ ಸಾಧ್ಯತೆ ಇದ್ದು, ಡಿಎಂಕೆ ಮೇಲುಗೈ ಸಾಧಿಸಲಿದೆ.  ಶಬರಿಮಲೆ ವಿವಾದದಿಂದ ದೇಶದ ಗಮನ ಸೆಳೆದಿದ್ದ ಕೇರಳದಲ್ಲೂ ಎಲ್‍ಡಿಎಫ್, ಯುಡಿಎಫ್ ಸಮಬಲ ಸಾಧಿಸಲಿದ್ದು, ಬಿಜೆಪಿ ಒಂದರಿಂದ ಎರಡು ಸ್ಥಾನಗಳಿಸಲಿದೆ ಎಂದು ಸಮೀಕ್ಷೆ ನುಡಿದಿದೆ.

ಒಟ್ಟಾರೆ ಎಲ್ಲಾ ಸಮೀಕ್ಷೆಗಳ ಪ್ರಕಾರ ಎನ್‍ಡಿಎ ಮೇಲುಗೈ ಸಾಧಿಸಲಿದ್ದು, ಮತದಾರರನ ನಿಜವಾದ ಮರ್ಮ ಏನೆಂಬುದನ್ನು 23ರಂದು ಬಹಿರಂಗಗೊಳ್ಳಲಿದೆ. ಕಳೆದ ಏಪ್ರಿಲ್​ 11 ರಂದು ಪ್ರಾರಂಭವಾಗಿ ಏಳು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದ 29 ರಾಜ್ಯಗಳಲ್ಲಿ ಏಳು ಹಂತದಲ್ಲಿ ಒಟ್ಟು 542 ಕ್ಷೇತ್ರಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನಕ್ಕೆ ಭಾನುವಾರ ತೆರೆಬಿದ್ದಿದೆ.

2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರರು 150 ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin