ಮತ ಎಣಿಕೆ ಕೇಂದ್ರದ ಬಳಿ ಈಗಿನಿಂದಲೇ ಚಾಪೆ ಹಾಕಿ ಕುಳಿತ ಅಭ್ಯರ್ಥಿಗಳು, ಕಾರ್ಯಕರ್ತರರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 22- ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಬಹುದೆಂಬ ಭೀತಿ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ವಿರೋಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ನಿನ್ನೆ ರಾತ್ರಿಯಿಂದಲೇ ಮತಎಣಿಕೆ ಕೇಂದ್ರದ ಬಳಿ ಚಾಪೆ ಹಾಕಿಕೊಂಡು ಕುಳಿತಿದ್ದಾರೆ.

ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‍ಘಡ, ರಾಜಸ್ಥಾನ, ದೆಹಲಿ ಸೇರಿದಂತೆ ಮತ್ತಿತರ ಕಡೆ ಬಿಜೆಪಿಯೇತರ ಅಭ್ಯರ್ಥಿಗಳು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿ ಮತ ಎಣಿಕೆ ಕೇಂದ್ರದ ಬಳಿ ತಮ್ಮ ಬೆಂಬಲಿಗರೊಂದಿಗೆ ರಾತ್ರಿ ಜಾಗರಣೆ ಮಾಡಿದ್ದಾರೆ.

ಮಧ್ಯಪ್ರದೇಶದ ರಾಜಧಾನಿ ಭೂಪಾಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ತಮ್ಮ ಪತ್ನಿಯೊಂದಿಗೆ ಮತ ಎಣಿಕೆ ಕೇಂದ್ರದ ಬಳಿ ಮಧ್ಯರಾತ್ರಿ ತೆರಳಿ ಪರಿಶೀಲಿಸಿದ್ದಾರೆ.

ಉತ್ತರ ಪ್ರದೇಶದ ಮೀರತ್‍ನಲ್ಲಿ ಎಸ್‍ಪಿ-ಬಿಎಸ್‍ಪಿ ಅಭ್ಯರ್ಥಿ ಯಾಸೀನ್ ಖುರೇಷಿ ತಮ್ಮ ಬೆಂಬಲಿಗರೊಂದಿಗೆ ದುರ್ಬೀನ್ ಮೂಲಕ ಮತ ಸ್ಟ್ರಾಂಗ್ ರೂಮ್ ಮೇಲೆ ನಿಗಾ ಇಟ್ಟಿದ್ದರು. ಅಲ್ಲದೆ ಮತ ಕೇಂದ್ರದ 100 ಮೀಟರ್ ದೂರ ರಾತ್ರಿ ಇಡೀ ಚಾಪೆ ಹಾಸಿಕೊಂಡು ಕುಳಿತಿದ್ದರು.

ಹರಿಯಾಣದಲ್ಲೂ ಕೂಡ ಕಾಂಗ್ರೆಸ್ ಐಎನ್‍ಎಲ್‍ಡಿ ಅಭ್ಯರ್ಥಿಗಳು ವಿವಿಧ ಮತಗಟ್ಟೆಗಳಲ್ಲಿ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ರಾತ್ರಿ ಪೂರ್ತಿ ಹದ್ದಿನ ಕಣ್ಣಿಟ್ಟು ಕಾದಿರುವ ಬಗ್ಗೆ ವರದಿಯಾಗಿದೆ.

ಕೆಲವು ಕಡೆ ಇವಿಎಂಗಳನ್ನು ತಿರುಚಬಹುದೆಂಬ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಇವಿಎಂ ಮಂತ್ರಯಂತ್ರಗಳನ್ನು ಕಾಯುವುದರಲ್ಲಿ ನಿರತರಾಗಿದ್ದಾರೆ.

ಬಿಹಾರದಲ್ಲೂ ಅನೇಕ ಕಡೆ ಮತ ಎಣಿಕೆ ಕೇಂದ್ರಗಳ ಬಳಿ ಕಾರ್ಯಕರ್ತರು ಕಳೆದ ರಾತ್ರಿಯಿಂದ ಜಮಾಯಿಸಿದ್ದಾರೆ. ಮತ ಎಣಿಕೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಇಲ್ಲಿಂದ ಜಗ್ಗುವುದಿಲ್ಲ ಎಂದು ಅನೇಕರು ಹೇಳಿದ್ದಾರೆ.

ಮತ ಎಣಿಕೆ ಕೇಂದ್ರಗಳ ಬಳಿ ಅಭ್ಯರ್ಥಿಗಳು, ಕಾರ್ಯಕರ್ತರು ಜಮಾಯಿಸಿರುವುದರಿಂದ ಭದ್ರತಾ ಸಿಬ್ಬಂದಿಗೆ ತಲೆನೋವಾಗಿದ್ದು, ಅವರನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin