ರಿಸಲ್ಟ್ ‘ಕೌಂಟ್’ ಡೌನ್ : ಮತ ಎಣಿಕೆಗೆ ಚುನಾವಣಾಧಿಕಾರಿಗಳಿಂದ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 16-ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಚುನಾವಣಾ ಅಧಿಕಾರಿಗಳು ಮತ ಎಣಿಕೆಗೆ ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಮತ ಎಣಿಕೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ಆಯಾಯ ಲೋಕಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ.

ಅಂದು ಬೆಳಿಗ್ಗೆ 8ರಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾದರೂ ಫಲಿತಾಂಶ ಪ್ರಕಟಗೊಳ್ಳಲು ಸಂಜೆಯಾಗುವ ಸಾಧ್ಯತೆಯಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್ ಮತ್ತು ಮತಯಂತ್ರದ ಮತಗಳನ್ನು ತಾಳೆ ಮಾಡಬೇಕಿರುವುದರಿಂದ ಫಲಿತಾಂಶ ವಿಳಂಬವಾಗಲಿದೆ.

ಅಲ್ಲದೆ ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಒಟ್ಟಾರೆ ಶೇ. 68.62ರಷ್ಟು ಮತದಾನವಾಗಿರುವುದರಿಂದ ಎಣಿಕೆ ಪ್ರಕ್ರಿಯೆಯು ವಿಳಂಬವಾಗುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರೆ, ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದಿತ್ತು.

ಬಹುತೇಕ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು, ಮುಖಂಡರುಗಳ ನಡುವೆ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಮಾಡತೊಡಗಿದ್ದಾರೆ. ಮತ ಎಣಿಕೆಗೆ ದಿನಗಣನೆ ಆರಂಭವಾಗಿರುವ ಬೆನ್ನಲೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದೆ.

ಹಾಗೆಯೇ ಅಭ್ಯರ್ಥಿಗಳ ಬೆಂಬಲಿಗರು ಸೇರಿದಂತೆ ರಾಜಕೀಯವಾಗಿ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಮೇ 23ರಂದು ಹೊರಬೀಳುವ ಫಲಿತಾಂಶ ಎಲ್ಲದಕ್ಕೂ ತೆರೆ ಎಳೆಯಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin