ಮಹಾರಾಷ್ಟ್ರದಲ್ಲಿರುವ ಗುಲಾಬಿ ಬಣ್ಣದ ‘ಲೋನಾರ್ ಲೇಕ್’ ರಹಸ್ಯವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನಾಗ್ಪುರ, ಜೂ.13-ಭಾರೀ ಆತಂಕ ಮತ್ತು ಕುತೂಹಲದ ಕೇಂದ್ರ ಬಿಂದುವಾಗಿರುವ ಮಹಾರಾಷ್ಟ್ರದ ಬಲ್ಡಾನಾ ಜಿಲ್ಲೆಯ ಲೋನಾರ್ ಲೇಕ್ ಸರೋವರವು ಗುಲಾಬಿ ಬಣ್ಣ ಪರಿವರ್ತನೆಯ ವಿದ್ಯಮಾನ ಈಗ ದೇಶದೆಲ್ಲೆಡೆ ಬಹು ಚರ್ಚಿತ ವಿಷಯವಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿಯ ತೀವ್ರವಾಗಿ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಳವಾಗಿರುವುದಕ್ಕೂ ಮತ್ತು ಲೋನಾರ್ ಲೇಕ್ ಸರೋವರ ಕೆಂಪು ಬಣ್ಣಕ್ಕೆ ತಿರುಗಿರುವುದಕ್ಕೂ ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಹಲವಾರು ಊಹಾಪೋಹಾದ ಸುದ್ದಿಸಂಗತಿಗಳು ಕೇಳಿಬರುತ್ತಿವೆ.

ಸರೋವರದ ನೀರು ಗುಲಾಬಿ ಬಣ್ಣಕ್ಕೆ ಪರಿವರ್ತಿನೆಯಾಗಲು ಕಾರಣವೇನು ಎಂಬ ರಹಸ್ಯ ಪತ್ತೆ ಮಾಡಲು ನಾಗ್ಪುರದ ರಾಷ್ಟ್ರೀಐ ಪರಿಸರ ಎಂಜಿನಿಯರಿಂಗ್ ಶಂಶೋಧನಾ ಸಂಸ್ಥೆ (ಎನ್‍ಇಇಆರ್‍ಐ)ಯ ವಿಶೇಷ ತಂಡ ಮುಂದಿನ ವಾರ ಅಲ್ಲಿಗೆ ಭೇಟಿ ನೀಡಿ ಕೂಲಂಕಷ ಅಧ್ಯಯನ ನಡೆಸಲಿದೆ.

ಮೊಟ್ಟೆಯಾಕಾರದ ಲೋನಾರ್ ಲೇಕ್ ಸೃಷ್ಟಿಯಾಗಿದ್ದು ಸಹ ಪ್ರಕೃತಿಯ ವೈಪರೀತ್ಯದಿಂದ ಸುಮಾರು 50,000 ವರ್ಷಗಳ ಹಿಂದೆ ಅಂತರಿಕ್ಷದಿಂದ ಉಲ್ಕೆ (ಆಕಾಶಕಾಯ) ಅತಿ ವೇಗದಲ್ಲಿ ಈ ಪ್ರದೇಶದ ಮೇಲೆ ಅಪ್ಪಳಿಸಿ ನಿಸರ್ಗ ಸೊಬಗಿನ ಸರೋವರ ನಿರ್ಮಾಣವಾಗಿತ್ತು.

ಇದಕ್ಕೆ ಲೋನಾರ್ ಲೇಕ್ ಎಂದು ನಾಮಕರಣ ಮಾಡಲಾಗಿತ್ತು. ನಂತರ ಇದು ಪ್ರಸಿದ್ಧ ಪ್ರವಾಸಿ ತಾಣ ಮತ್ತು ವಿಶ್ವದ ಅನೇಕಾನೇಕ ವಿಜ್ಞಾನಿಗಳು ಮತ್ತು ಸಂಶೋಧರಿಗೆ ಅನ್ವೇಷಣೆ ಆಸಕ್ತಿಕರ ಸ್ಥಳವೂ ಆಯಿತು. ಈ ಸುಂದರ ಸರೋವರ 1.2 ಕಿ.ಮೀ.ಸುತ್ತಳತೆ ಹೊಂದಿದೆ. ಇತ್ತೀಚಿಗೆ ಈ ಸರೋವರ ಗುಲಾಬಿ ಬಣ್ಣಕ್ಕೆ ತಿರುಗಿದೆ.

ಕೆಲವೆಡೆ ರಕ್ತವರ್ಣದಂತೆ ಕೆಂಪಾಗಿದೆ. ಹೆಮ್ಮಾರಿ ಕೊರೊನಾದಿಂದ ಮಹಾರಾಷ್ಟ್ರದಲ್ಲಿ ಆಘಾತಕಾರಿ ಮಟ್ಟದಲ್ಲಿ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲೇ ಲೋನಾರ್ ಲೇಕ್ ಗುಲಾಬಿ ಬಣ್ಣಕ್ಕೆ ಪರಿವರ್ತಿನೆಯಾಗಿರುವುದು ಹಲವಾರು ವದಂತಿ ಮತ್ತು ಗಾಳಿ ಸುದ್ದಿಗಳಿಗೆ ಎಡೆ ಮಾಡಿಕೊಟ್ಟಿದೆ.

ಇದು ಸ್ಥಳೀಯರಿಗಷ್ಟೇ ಅಲ್ಲದೇ ಪರಿಸರವಾದಿಗಳು, ವಿಜ್ಞಾನಿಗಳು ಮತ್ತು ಸಂಶೋಧಕರಲ್ಲಿಯೂ ಅಪಾರ ಕುತೂಹಲ ಕೆರಳಿಸಿದೆ.  ನೀರಿನಲ್ಲಿರುವ ಕೆಲವು ಸೂಕ್ಷ್ಮ ಜೀವಿಗಳು ಮತ್ತು ಪಾಚಿಯಂತ ಸಸ್ಯ ಸಂಕುಲಗಳಿಂದ ಕೆರೆ ನೀರು ಕೆಲವೊಮ್ಮೆ ಬಣ್ಣ ಬದಲಿಸುತ್ತವೆ. ಆದರೆ ಈ ಸರೋವರ ಗಾಢ ಗುಲಾಬಿ ಬಣ್ಣಕ್ಕೆ ತಿರುಗಿರುವುದು ಅಚ್ಚರಿಯ ವಿದ್ಯಮಾನವಾಗಿದೆ ಎಂದು ಕೆಲವು ವಿಜ್ಞಾನಿಗಳು ತಿಳಿಸಿದ್ದಾರೆ.

ಸುಮಾರು 50,000 ವರ್ಷಗಳ ಹಿಂದೆ ಗಂಟೆಗೆ 90,000 ಕಿ.ಮೀ. ವೇಗದಲ್ಲಿ ಉಲ್ಕಾ ಶಿಲೆಯೊಂದು ಈ ಪ್ರದೇಶದ ಮೇಲೆ ಅಪ್ಪಳಿಸಿ ಭಾರೀ ಅಲ್ಲೋಲ-ಕಲ್ಲೋಲ ಸೃಷ್ಟಿಸಿತು. ನಂತರ ಭೂಗರ್ಭದಲ್ಲಿನ ಪರಿವರ್ತಿನೆಗಳಿಂದಾಗಿ ಸುಂದರ ಜಲಾಶಯ ನಿರ್ಮಾಣವಾಯಿತು.

1832ರಲ್ಲಿ ಬ್ರಿಟಿಷ್ ಉನ್ನತಾಧಿಕಾರಿ ಸಿಜೆಇ ಅಲೆಗ್ಸಾಂಡರ್ ಎಂಬುವರು ಆಕಸ್ಮಿಕವಾಗಿ ನಿರ್ಜನ ಪ್ರದೇಶದಲ್ಲಿ ಈ ಸರೋವರನ್ನು ಪತ್ತೆ ಮಾಡಿದ್ದರು. ಆಗಿನಿಂದಲೂ ಇದು ಪ್ರವಾಸಿ ಮತ್ತು ಸಂಶೋಧನೆಯ ತಾಣವಾಗಿದ್ದು, ಈಗ ನೀರು ಗುಲಾಬಿ ಬಣ್ಣಕ್ಕೆ ಪರಿವರ್ತಣೆಯಾಗಿರುವುದು ಭಾರೀ ಕೌತುಕ ಕೆರಳಿಸಿದೆ.

Facebook Comments