ಮಾರುಕಟ್ಟೆಗೆ ಬರಲು ರೆಡಿಯಾಗ್ತಿವೆ ಬಗೆಬಗೆಯ ಗಣಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.1- ವರನಟ ಡಾ.ರಾಜ್‍ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಗಣೇಶನ ಜತೆ ಅಣ್ಣಾವ್ರು ಇರುವ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧಗೊಂಡಿದ್ದವು. ಇದೀಗ ಕೊರೊನಾ ಸಂದರ್ಭದಲ್ಲಿ ಕಲಾವಿದರ ಕೈಯಲ್ಲಿ ಕೊರೊನಾ ನಿವಾರಕ ಗಣೇಶ ಮೂರ್ತಿಗಳು ಜೀವ ತಳೆದಿವೆ.

ನಗರದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವುದರಿಂದ ಈ ಬಾರಿಯ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಬಿಬಿಎಂಪಿ ಬ್ಯಾನ್ ಮಾಡಿದೆ.

ಹೀಗಾಗಿ ಪ್ರತಿವರ್ಷ ಗಣೇಶ ಮೂರ್ತಿ ಮಾರಾಟದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಲಾವಿದರ ಕೈಗೆ ಕೆಲಸವಿಲ್ಲದಂತಾಗಿದೆ.ಆದರೆ, ಮನೆಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಿರುವುದನ್ನೇ ಸದುಪಯೋಗಪಡಿಸಿಕೊಂಡಿರುವ ಕಲಾವಿದರು ಇದೀಗ ಕೊರೊನಾ ನಿವಾರಕ ಗಣೇಶ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆಯುತ್ತಿದ್ದಾರೆ.

ಕೊರೊನಾ ಕಾಣಿಸಿಕೊಳ್ಳದಿದ್ದರೆ ಈ ವೇಳೆಗಾಗಲೇ ಬೀದಿಬದಿಗಳಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಕಂಡುಬರುತ್ತಿತ್ತು. ಆದರೆ, ಇದೀಗ ಗಣೇಶ ಮೂರ್ತಿಗಳ ವ್ಯಾಪಾರ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲಾವಿದರು ತರಾವರಿ ಕೊರೊನಾ ನಿವಾರಕ ಗಣೇಶ ಮೂರ್ತಿಗಳನ್ನು ಕಲಾವಿದರು ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಜೆಸಿ ರಸ್ತೆಯ ಮಾವಳ್ಳಿ ಎಂದರೆ ಪಾರಂಪರಿಕ ಗಣೇಶ ಮೂರ್ತಿಗಳ ತಯಾರಿಕೆಗೆ ಹೆಸರುವಾಸಿ. ಈ ಪ್ರದೇಶದಲ್ಲಿ ಹಲವಾರು ದಶಕಗಳಿಂದಲೂ ಗಣೇಶಮೂರ್ತಿ ಮಾರಾಟದಿಂದಲೇ ಜೀವನ ನಡೆಸುವ ಹಲವಾರು ಕುಟುಂಬಗಳಿವೆ.

ಇದೀಗ ಉಪ್ಪಾರಹಳ್ಳಿಯ ಶ್ರೀಧರ್ ಎಂಬ ಕಲಾವಿದರು ಕೊರೊನಾ ಮಹಾಮಾರಿಯನ್ನೇ ನೆಪವಾಗಿಟ್ಟುಕೊಂಡು ಕೊರೊನಾ ನಿವಾರಕ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಕೊರೊನಾ ನಿವಾರಕ ಗಣೇಶ ಮೂರ್ತಿಗಳು ಅಂತಿಮ ರೂಪ ಪಡೆಯುತ್ತಿದ್ದು, ವ್ಯಾಪಾರಕ್ಕೆ ಸಿದ್ಧಗೊಳ್ಳಲಿರುವ ಈ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

Facebook Comments

Sri Raghav

Admin