ಮಹಾಶಿವರಾತ್ರಿ ಕುರಿತು ನೀವು ತಿಳಿದುಕೊಂಡಿರಲೇಬೇಕಾದ ಕೆಲವು ಸಂಗತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಶಿವ ಶಬ್ದವು ಸುಂದರವೂ, ಮುಕ್ತಿಪ್ರದವೂ ಆಗಿದೆ. ಶಿವನಿಂದಲೇ ಮುಕ್ತಿ ಪ್ರಾಪ್ತಿ. ಶಿವ ಎಂಬುದಕ್ಕೆ ವಿಶೇಷ ಅರ್ಥವಿದೆ. ಶಿ ಎಂದರೆ ಪಾಪನಾಶಕ, ಮಂಗಳಕರ ಎಂದು. ವ ಎಂದರೆ ನೀಡುವನು ಎಂದರ್ಥ. ಶಿವನನ್ನು ಭಾರತೀಯರು ಲಿಂಗಾಕಾರದಲ್ಲಿ ಪೂಜಿಸುವುದು ಹಿಂದಿನಿಂದಲೂ ಬಂದಿರುವ ಪದ್ಧತಿ. ಈ ಲಿಂಗವು ಗಹನವಾದ ಅರ್ಥವನ್ನು ತಿಳಿಸುತ್ತದೆ.

ಶಿವಲಿಂಗಕ್ಕೆ ರೂಪವೂ ಇಲ್ಲ, ಅರೂಪವೂ ಇಲ್ಲ. ಸಾಕಾರವೂ ಇಲ್ಲ, ನಿರಾಕಾರವೂ ಇಲ್ಲ. ಅದು ಸಾಕಾರದಿಂದ ನಿರಾಕಾರಕ್ಕೆ ಅಂದರೆ ಸಗುಣೋಪಾಸನೆಯಿಂದ ನಿರ್ಗುಣೋಪಾಸನಿಗೆ ನಮ್ಮ ಮನಸ್ಸನ್ನು ತಿರುಗಿಸಲು ಸಾಧನವಾಗಿದೆ. ಲಿಂಗದಲ್ಲಿ ಸಚ್ಚಿದಾನಂದ ಸ್ವರೂಪನಾದ ಪರಮೇಶ್ವರನೇ ಇರುವನೆಂಬ ಅಚಲ ನಂಬಿಕೆಯಿಟ್ಟು ಪೂಜಿಸಬೇಕು.

ಈ ಲಿಂಗವು ಬ್ರಹ್ಮಾಂಡದ ಸಂಕೇತವಾಗಿದೆ ಹಾಗೂ ಬ್ರಹ್ಮಾಂಡವು ಜ್ಯೋತಿರ್ಲಿಂಗದ ರೂಪದಲ್ಲಿದೆ. ಜ್ಯೋತಿರ್ಲಿಂಗವು ಸಕಲ ದೇವತೆಗಳ ಆವಾಸ ಸ್ಥಾನವಾಗಿದೆ. ತ್ರಿಮೂರ್ತಿಗಳಲ್ಲಿ ಶಿವನ ಸ್ಥಾನ ಅತಿಮುಖ್ಯ: ಸೃಷ್ಟಿ, ಸ್ಥಿತಿ ಮತ್ತು ಲಯ ಪ್ರಕೃತಿಯ ನಿಯಮ. ಯಾವುದೇ ಒಂದು ವಸ್ತು ಹುಟ್ಟಿದರೂ ಅದು ಕೆಲವು ಕಾಲವಿದ್ದು, ನಂತರ ನಾಶವಾಗಲೇಬೇಕು. ಕ್ರಿಮಿ-ಕೀಟಗಳಿಂದ ಪ್ರಾರಂಭಿಸಿ ಪಶು-ಪಕ್ಷಿಗಳು, ಪ್ರಾಣಿ, ಮಾನವ, ದಾನವ, ದೇವತೆಗಳು ಎಲ್ಲರಿಗೂ ಜನ್ಮ, ಸ್ಥಿತಿ, ಮರಣಗಳು ಇದ್ದೇ ಇರುತ್ತವೆ. ಚರಾಚರವಾದ ಸ್ಥಾವರ ಜಂಗಮಾತ್ಮಕವಾದ ಇಡೀ ಪ್ರಪಂಚಕ್ಕೂ ಹುಟ್ಟು-ಸಾವುಗಳು ಇರುತ್ತವೆ.

ಈ ಮೂರರ ಕ್ರಿಯೆಗಳನ್ನು ಕ್ರಮವಾಗಿ ಬ್ರಹ್ಮನೂ, ವಿಷ್ಣುವೂ ಹಾಗೂ ಶಿವನೂ ಮಾಡುತ್ತಾರೆ. ಶಿವ ಪಂಚಾಕ್ಷರೀ ಮಂತ್ರದ ಮಹಿಮೆ ಅಪಾರ: ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬುದು ಶ್ರೀರಾಮನ ತ್ರಯೋದಶಾಕ್ಷರೀ ಮಂತ್ರವಾದರೆ ನಮಃ ಶಿವಾಯ ಎಂಬುದು ಶಿವ ಪಂಚಾಕ್ಷರೀ ಮಂತ್ರ ಇದಕ್ಕೆ ಓಂಕಾರ ಸೇರಿಸಿದರೆ ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವಾಗುತ್ತದೆ. ಇದರಲ್ಲಿ ಯಾವುದಾದರೂ ಒಂದನ್ನು ಜಪಿಸಿದರೆ ಫಲ ಒಂದೇ ಆಗಿದೆ.

ಶಿವ ಪಂಚಾಕ್ಷರಿ ಜಪದಿಂದ ಪಂಚಮಹಾಪಾಪಗಳು ಶಮನ ಆಗುವುದು. (ಬ್ರಹ್ಮಹತ್ಯೆ, ಸುರಪಾನ, ಸ್ವರ್ಣ ಸ್ತೀಯ, ಗುರುಪತ್ನಿ ಗಮನ ಪ್ರಾಣಿ ಹತ್ಯೆ ಈ ಐದು ಪಂಚಮಹಾ ಪಾಪಗಳು).
ಪಂಚಭೂತಗಳಿಗೂ ಸಂತೃಪ್ತಿ. ಆಕಾಶಾದಿ ಪಂಚಭೂತಗಳಿಂದ ಯಾವ ತೊಂದರೆ ಆಗುವುದಿಲ್ಲ. ಪಂಚ ಜ್ಞಾನೇಂದ್ರಿಯಗಳಿಗೂ ಮತ್ತು ಪಂಚಕರ್ಮೇಂದ್ರಿಯಗಳೂ ಶುದ್ಧವಾಗುತ್ತದೆ. ( ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಜ್ಞಾನೇಂದ್ರಿಯಗಳು. ವಾಕ್, ವಾಣಿ, ವಾದ, ವಾಯು ಉಪಸ್ವರಗಳೆಂಬ ಐದು ಕರ್ಮೇಂದ್ರಿಯಗಳು ಪವಿತ್ರವಾದುವುದು).

ಪಂಚ ಪ್ರಾಣಗಳೂ ಶುದ್ಧವಾಗುವುದು ( ಪ್ರಾಣ, ಅವಾಸ, ಧ್ಯಾನ, ಉಪದಾನ ಮತ್ತು ಸಮಾನಗಳು). ಪಂಚಕೋಶಗಳನ್ನು ಜಪದಿಂದ ದಾಟಿ ಹೋಗ ಬಹುದು. (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಈ ಐದು ಕೋಶಗಳು) ಅಭಿಷೇಕ ಪ್ರಿಯ ಶಿವ: ಒಬ್ಬೊಬ್ಬ ದೇವತೆಗೂ ಒಂದೊಂದು ರೀತಿಯ ಆರಾಧನೆಯಿಂದ ಸಂತೋಷ ಆಗುತ್ತದೆ.

ಅವರುಗಳು ಸಂತುಷ್ಟರಾಗಿ ಭಕ್ತರು ಬೇಡಿದ ವರ ವನ್ನು ಕೊಡು ತ್ತಾರೆ. ಕೆಲವು ದೇವರಿಗೆ ಮಡಿಯಿಂದ ಪೂಜೆ, ಕೆಲವರಿಗೆ ಸುವರ್ಣ ಪುಷ್ಪದಿಂದ ಅರ್ಚನೆ, ಕೆಲವರಿಗೆ ಉಪವಾಸದಿಂದ, ಮಹಾವಿಷ್ಣುವಿಗೆ ಅಲಂಕಾರದಿಂದ ಪರಮೇಶ್ವರನಿಗೆ ಕೇವಲ ಒಂದು ತಂಬಿಗೆ ನೀರಿನಿಂದ ಓಂ ನಮಃ ಶಿವಾಯ ಎಂದು ಜಪಿಸುತ್ತಾ ಅಭಿಷೇಕ ಮಾಡಿದರೆ ಸಾಕು. ಈತನ ಪೂಜೆಗೆ ಚಿನ್ನ, ಬೆಳ್ಳಿ, ಮಂಟಪ, ಹೂ, ತೋರಣ ಇದು ಯಾವುದೂ ಬೇಕಿಲ್ಲ. ಭಕ್ತಿಯಿಂದ ನೀರಿನಿಂದ ಅಭಿಷೇಕ ಮಾಡಿದರೆ ವರವನ್ನು ನೀಡುವನು. ಶಿವನಿಗೆ ಮುಖ್ಯವಾಗಿ ಬೇಕಾಗಿರುವುದು ಭಕ್ತಿ. ಅಲಂಕಾರ ಪ್ರಿಯೋ ವಿಷ್ಣು ಅಭಿಷೇಕ ಪ್ರಿಯ, ಶಿವಃ ನಮಸ್ಕಾರ ಪ್ರಿಯೊ ಬಾನುಃ (ವಿಷ್ಣು ಅಲಂಕಾರ ಪ್ರಿಯ, ಅವನು ಅಭಿಷೇಕ ಪ್ರಿಯ ಸೂರ್ಯನು ನಮಸ್ಕಾರ ಪ್ರಿಯ) ಶಿವನಿಗೆ ಹಾಲು ಅಭಿಷೇಕ ಮಾಡಿದರೆ ಭಕ್ತಿ ಹೆಚ್ಚಾಗುತ್ತದೆ. ಶಿವನಿಗೆ ಜೇನು ತುಪ್ಪದಿಂದ ಅಭಿಷೇಕ ಮಾಡಿದರೆ ಮಾತಿನ ಶಕ್ತಿ ಹೆಚ್ಚುತ್ತದೆ. ಶಿವನಿಗೆ ಸಕ್ಕರೆಯಿಂದ ಅಭಿಷೇಕ ಮಾಡಿದರೆ ಯಾವಾಗಲೂ ಸಂತೋಷದಿಂದ ಇರಬಹುದು. ಶಿವನಿಗೆ ತುಪ್ಪದಿಂದ ಅಭಿಷೇಕ ಮಾಡಿದರೆ ಹಿಂದಿನ ಜನ್ಮದ ಪಾಪಗಳು ಕಳೆಯುವುದು.

ಶಿವನ ಇನ್ನೊಂದು ಹೆಸರು ರುದ್ರ: ಶಿವನನ್ನು ವೇದೋತ್ತ ಮಂತ್ರಗಳಿಂದ ಪೂಜಿಸಬೇಕು. ಪರಶಿವನ ಇನ್ನೊಂದು ಹೆಸರು ರುದ್ರ ಎಂದು ರುದ್ರಂ ದುಃಖಂ ದ್ರಾವಯತಿ ನಾಶಯತಿ ಇತಿ ರುದ್ರಃ ಅಂದರೆ ಸಕಲ ಸಂಕಟಗಳನ್ನು ನಾಶ ಮಾಡುವುದರಿಂದ ಶಿವನಿಗೆ ರುದ್ರ ಎಂಬ ಹೆಸರು ಬಂದಿರುವುದು, ಶಿವನಿಗಾಗಿ ರುದ್ರ ಹೋಮ ರುದ್ರಜಯ, ರುದ್ರಾಭಿಷೇಕ, ರುದ್ರಪೂಜಾ, ರುದ್ರಕ್ರಮಾರ್ಚನೆ ಮುಂತಾದ ರುದ್ರಾರಾಧನೆಗಳೆಲ್ಲಾ ನಮಕ ಮತ್ತು ಚಮಕ ಮಂತ್ರಗಳಿಂದ ಶಿವನಿಗೆ ಅಭಿಷೇಕ ಮಾಡಬೇಕು. ರುದ್ರಗಳಲ್ಲಿ ಶತರುದ್ರ, ಮಹಾರುದ್ರ ಮತ್ತು ಅತಿರುದ್ರಗಳು ಇವೆ.

ಶಿವನು ಬಿಲ್ವ ವೃಕ್ಷಕ್ಕೆ ವರ ನೀಡಿದ್ದು: ಒಮ್ಮೆ ದೇವತೆಗಳೆಲ್ಲರೂ ಒಟ್ಟಾಗಿ ಸೇರಿ ಶಿವನನ್ನು ಪೂಜಿಸುತ್ತಿರುವಾಗ ಪಂಚಮುಖ ಬ್ರಹ್ಮನ ಮುಖದಲ್ಲಿ ಅಪಹಾಸ್ಯ ನಗುವೊಂದು ವ್ಯಕ್ತವಾಯಿತು. ಅದನ್ನು ಗಮನಿಸಿದ ಶಿವನು ಕೋಪಗೊಂಡು ಬ್ರಹ್ಮನ ಶಿರಸ್ಸನ್ನು ತನ್ನ ತ್ರಿಶೂಲದಿಂದ ಕತ್ತರಿಸಿದ. ಆಗ ಬ್ರಹ್ಮನು ಚತುರ್ಮುಖನಾದನು. ಶಿವನು ಕತ್ತರಿಸಿದ ಶಿರಸ್ಸು ಕಪಾಲವಾಗಿ ಶಿವನಲ್ಲಿಯೇ ಮತ್ತೆ ಸೇರಿತು.

ಆ ಕಪಾಲವನ್ನು ಹಿಡಿದು ಎಲ್ಲ ಲೋಕಗಳನ್ನು ಸುತ್ತುತ್ತಾ ನೀನು ಭಿಕ್ಷೆ ಬೇಡು ಎಂದು ಬ್ರಹ್ಮನು ಅವನಿಗೆ ಶಾಪವಿಟ್ಟನು. ಅದರ ಪರಿಣಾಮವಾಗಿ ಶಿವನು ಲೋಕಕ್ಕೆ ಬಂದು ಕಪಾಲವನ್ನು ಹಿಡಿದು ಭಿಕ್ಷೆಗಾಗಿ ಸಂಚರಿಸುತ್ತಾ ಹಸಿವು ನೀರಡಿಕೆಗಳಿಂದ ಬಳಲುತ್ತ ವಿಶ್ರಾಂತಿಗಾಗಿ ಒಂದು ಬಿಲ್ವ ವೃಕ್ಷದ ಬಳಿ ಬಂದು ನಿಂತನು. ಆಗ ಆ ಮರದ ಎಲೆಗಳು ಶಿವನ ಮೇಲೆ ಉದುರಿದ ಪರಿಣಾಮವಾಗಿ ಆತನ ಆಯಾಸ ಪರಿಹಾರವಾಯಿತು.

ಇದರಿಂದ ಸಂತುಷ್ಟನಾದ ಶಿವನು ಯಾರು ಶ್ರದ್ಧಾ-ಭಕ್ತಿಯಿಂದ ನನ್ನನ್ನು ಈ ಮೂರು ದಳಗಳಿರುವ ಬಿಲ್ವಪತ್ರೆಯಿಂದ ಸೋಮವಾರ, ಅಮಾವಾಸ್ಯೆ, ಪ್ರದೋಷ ಕಾಲದಲ್ಲಿ, ಮಾಸ ಶಿವರಾತ್ರಿಯಲ್ಲಿ ಮತ್ತು ಮಹಾ ಶಿವರಾತ್ರಿಯಲ್ಲಿ ಪೂಜಿಸುತ್ತಾರೋ ಅವರನ್ನು ನಾನು ಅನುಗ್ರಹಿಸುವೆ ಹಾಗೂ ಅವರ ಸರ್ವಪಾಪಗಳನ್ನು ಪರಿಹರಿಸುವೆ ಎಂದು ಆ ಬಿಲ್ವಮರಕ್ಕೆ ವರ ನೀಡಿದನು. ಆದ್ದರಿಂದ ಶಿವರಾತ್ರಿ ದಿನ ಸಾಮಾನ್ಯವಾಗಿ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿ ಧನ್ಯರಾಗುತ್ತಾರೆ.

ಶಿವನಿಗೆ ಪ್ರಿಯವಾದ ಮಾಸಗಳು: ಶಿವನಿಗೆ ಪ್ರಿಯವಾದ ಮಾಸಗಳೆಂದರೆ ಕಾರ್ತಿಕ ಮಾಸ ಮತ್ತು ಮಾಘಮಾಸ. ಕಾರ್ತಿಕ ಮಾಸದಲ್ಲಿ ಶಿವಾಲಯದಲ್ಲಿ ಪ್ರತಿದಿನ ವಿಶೇಷ ರುದ್ರಾಭಿಷೇಕ, ವಿಶೇಷ ಪೂಜಾದಿಗಳನ್ನು ಮಾಡುತ್ತಾರೆ. ಕಾರ್ತಿಕ ಸೋಮವಾರವಂತೂ ಶಿವನಿಗೆ ವಿಶೇಷ ಪೂಜೆ ನಡೆಯುವುದು. ಮಾಘಮಾಸವೂ ಸಹ ಶಿವನಿಗೆ ವಿಶೇಷವಾದ ಮಾಸವೇ. ಈ ಮಾಸದಲ್ಲಿ ನದಿ, ಸರೋವರ, ಸಮುದ್ರಗಳಲ್ಲಿ ಸ್ನಾನ ಮಾಡಿ ಸೂರ್ಯ ನಮಸ್ಕಾರ ಮಾಡಿ ಶಿವನನ್ನು ಆರಾಧಿಸಬೇಕು.

ಈ ಮಾಸದಲ್ಲಿ ದಾನ-ಧರ್ಮಗಳನ್ನು ಶಿವನ ಹೆಸರಿನಲ್ಲಿ ಹೆಚ್ಚಾಗಿ ಮಾಡಬೇಕು. ಇದೇ ಮಾಸದಲ್ಲಿ ಶಿವರಾತ್ರಿ ಅದರಲ್ಲೂ ಮಹಾ ಶಿವರಾತ್ರಿ ಬರುವುದು. ಅಂದು ಅನೇಕ ದೇವಾಲಯಗಳಲ್ಲಿ ರಥೋತ್ಸವಗಳು ನಡೆಯುತ್ತವೆ. ಶಿವನ ಭಕ್ತರಿಗೆ ಇದೊಂದು ಮಹಾ ಪರ್ವಕಾಲವಾಗಿದೆ. ಮಹಾಶಿವರಾತ್ರಿಯು ಭಕ್ತರಲ್ಲಿ ಧಾರ್ಮಿಕ ಭಾವನೆ ಮೂಡಿಸುತ್ತದೆ. ಅಂದು ಭಕ್ತರು ಬೆಳಗಿನಿಂದ ನಿರಾಹಾರಿಗಳಾಗಿರಬೇಕು. ಶಿವಧ್ಯಾನ ಮಾಡುತ್ತಾ ಅಭಿಷೇಕ, ಪೂಜೆ, ಭಜನೆ, ಹೋಮಾದಿಗಳನ್ನು ನೆರವೇರಿಸಿ ಶಿವ ದೇವಾಲಯಗಳಿಗೆ ಭೇಟಿ ನೀಡಬೇಕು. ಅಂದು ಪ್ರಸಿದ್ಧ ಶಿವ ಕ್ಷೇತ್ರಗಳಿಗೆ ಭೇಟಿ ನೀಡಬಹುದು.

ವೈರಾಗ್ಯ ಪ್ರತೀಕವಾದ ಶಿವಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಬೇಕು. ರಾತ್ರಿಪೂರ್ತಿ ಶಿವಜಪ, ಶಿವಧ್ಯಾನ, ಶಿವಭಜನೆ, ಶಿವನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡಿ ಮಾರನೆ ದಿನ ಶಿವ ಪಾರಾಯಣ ಮಾಡಿ ಪೂಜಿಸಿ ಆಹಾರವನ್ನು ತೆಗೆದುಕೊಳ್ಳುವುದರಿಂದ ಒಳಿತಾಗುತ್ತದೆ.

– ಮಂಡಗದ್ದೆ ಪ್ರಕಾಶ್‍ಬಾಬು

Facebook Comments