ನಿಂತಿದ್ದ ಕಬ್ಬಿನ ಲಾರಿಗೆ ಆಟೋ ಡಿಕ್ಕಿ, ಮೂವರ ಸಾವು
ಹುಬ್ಬಳ್ಳಿ, ಜ.10- ನಿಂತಿದ್ದ ಕಬ್ಬಿನ ಲಾರಿಗೆ ಹಿಂಬದಿಯಿಂದ ಆಟೋ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸೂಗುರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ. ಬಾಷಪ್ಪ (35), ರಮೇಶ್ (30) ಹಾಗೂ ಸಿದ್ದಮ್ಮ (55) ಮೃತ ದುರ್ದೈವಿಗಳು.
ಬೆಳಗಿನ ಜಾವ ಯಾದಗಿರಿಯಿಂದ ಹುಳೆಸುಗೂರ ಮತ್ತು ಹಾಲಗೇರಾ ಗ್ರಾಮಗಳ ಕಡೆ ಪ್ರಯಾಣಿಕರನ್ನು ತುಂಬಿಕೊಂಡು ತೆರಳುತ್ತಿದ್ದ ಆಟೋ, ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಷಪ್ಪ ಹಾಲಗೆರಾ ಗ್ರಾಮದವನಾಗಿದ್ದು, ರಮೇಶ್ ಮತ್ತು ಸಿದ್ದಮ್ಮ ತಾಯಿ-ಮಗ ಎಂದು ತಿಳಿದು ಬಂದಿದೆ. ಇವರು ಕಲಬುರಗಿ ಮೂಲದ ಚಿತ್ತಾಪುರ ತಾಲೂಕಿನ ಹಲಕಟ್ಟಿ ಗ್ರಾಮದವರಾಗಿದ್ದು, ಹಾಲಗೇರಾದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ವಡಗೇರಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.