ನಾಳೆ ಲಾರಿ ಮುಷ್ಕರ, ಕೇಂದ್ರ ಸರ್ಕಾರದ ವಿರುದ್ಧ ಮಾಲೀಕರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.25- ತೈಲ ಬೆಲೆ ಏರಿಕೆ ಖಂಡಿಸಿ ನಾಳೆ ಲಾರಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, ಪ್ರತಿದಿನ ಡೀಸೆಲ್, ಟೋಲ್, ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್ ಉದ್ಯಮದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ಕ್ರಾಪಿಂಗ್ ನೀತಿ, ಇ-ವೇ ಬಿಲ್, ಹಸಿರು ತೆರಿಗೆ ಹೆಚ್ಚಳ, ಬಿಎಸ್6 ವಾಹನಗಳ ವೆಚ್ಚ, ವಾಹನಗಳ ಬಿಡಿಭಾಗಗಳ ದರ ಹೆಚ್ಚಳದಿಂದ ಸಮಸ್ಯೆಯಾಗಿದೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾಳೆ ಒಂದು ದಿನ ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಸುತ್ತೇವೆ. ಮಾರ್ಚ್ 5ರಂದು ಸಭೆ ನಡೆಸಿ, ಮಾ.15ರಿಂದ ಅರ್ನಿಷ್ಟಾವ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಅವರು ಹೇಳಿದರು.

ಕೇಂದ್ರದ ಸ್ಕ್ರ್ಯಾಪ್ ನೀತಿಗೆ ನಮ್ಮ ಸಂಪೂರ್ಣ ವಿರೋಧವಿದೆ. ನಮ್ಮ ಪ್ರಾಣ ಬೇಕಾದರೂ ಕೊಡುತ್ತೇವೆ. ನಮ್ಮ ವಾಹನಗಳನ್ನು ಸ್ಕ್ರ್ಯಾಪ್‍ಗೆ ಕೊಡುವುದಿಲ್ಲ.ಕೇಂದ್ರ ಸರ್ಕಾರ ಟಾಟಾ ಮತ್ತು ಅಶೋಕ್ ಲೈಲ್ಯಾಂಡ್ ಕಂಪನಿಗಳ ಜೊತೆ ಸೇರಿಕೊಂಡು ಇಂಥ ನೀತಿಗಳನ್ನು ತರಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

ಬೇರೆ ರಾಜ್ಯಕ್ಕೆ ಹೋಗುವ ನಮ್ಮ ಲಾರಿಗಳು ಅಲ್ಲಿ ಡೀಸೆಲ್ ಬೆಲೆ ಕಡಿಮೆ ಇರುವುದರಿಂದ ಅಲ್ಲಿ ಡೀಸೆಲ್ ಹಾಕಿಸುತ್ತಾರೆ. ಇದರಿಂದ ನಮ್ಮ ರಾಜ್ಯಕ್ಕೆ ಸುಮಾರು 1.60 ಕೋಟಿ ರೂ. ನಷ್ಟವಾಗುತ್ತದೆ. ಹೆದ್ದಾರಿಗಳಲ್ಲಿ ಟೋಲ್ ಲೂಟಿ ನಡೆಯುತ್ತಿದೆ. ಅವ ಮುಗಿದರೂ ಟೋಲ್ ಸಂಗ್ರಹ ನಡೆಯುತ್ತಿದೆ. ರಾಜ್ಯದಲ್ಲಿ 11 ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಅವ ಮುಗಿದರೂ ನಿರ್ವಹಣೆ ಹೆಸರಲ್ಲಿ ಸಂಗ್ರಹ ಮಾಡಲಾಗುತ್ತಿದೆ ಎಂದು ಷಣ್ಮುಗಪ್ಪ ಆರೋಪಿಸಿದರು.

ಬಿಜೆಪಿ ಆಡಳಿತದಲ್ಲಿರುವ ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿಮೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾಡಿಲ್ಲ.ರಾಜ್ಯ ಸರ್ಕಾರ 4 ರೂ. ಡೀಸೆಲ್ ಬೆಲೆ ಕಡಿಮೆ ಮಾಡಬೇಕು. ಒಂದು ಕಿ.ಮೀಗೆ 26 ರೂ. ಖರ್ಚಾಗುತ್ತದೆ. ನಾವು ಹೇಗೆ ಈ ಉದ್ಯಮವನ್ನು ನಡೆಸುವುದು ಎಂದು ಪ್ರಶ್ನಿಸಿದ ಷಣ್ಮುಗಪ್ಪ, ಡೀಸೆಲ್-ಪೆಟ್ರೋಲ್‍ನ್ನು ಜಿಎಸ್‍ಟಿ ವ್ಯಾಪಿಗೆ ತರಲಿ ಎಂದು ಒತ್ತಾಯಿಸಿದರು.

ನಾಳೆ ಒಂದು ದಿನ ಮುಷ್ಕರ ನಡೆಸುತ್ತೇವೆ. 6 ಲಕ್ಷ ಲಾರಿಗಳು ನಿಂತಲ್ಲೆ ನಿಲ್ಲಲಿವೆ. ಡೀಸೆಲ್ ದರ ಕಡಿಮೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇವೆ. ಮನವಿಗೆ ಸ್ಪಂದಿಸದಿದ್ದರೆ ಮಾ.5ರಂದು ಸಭೆ ನಡೆಸಿ ಮಾ.15ರಂದು ಅರ್ನಿಷ್ಟಾವ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Facebook Comments

Sri Raghav

Admin