ಮಹಾ ಮಳೆಯಿಂದ ರಾಜ್ಯದಲ್ಲಿ ಅಂದಾಜು 10 ಸಾವಿರ ಕೋಟಿ ರೂ. ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.14- ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಸುಮಾರು 10 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಇತ್ತೀಚೆಗೆ ನಡೆಸಿದ ಆರಂಭಿಕ ಮೌಲ್ಯಮಾಪನದ ಅನುಸಾರ ಮಳೆಯಿಂದ 10 ಸಾವಿರ ಕೋಟಿ ರೂ. ನಷ್ಟ ಉಂಟಾಗಿದ್ದು, ಕೇಂದ್ರದಿಂದ 4 ಸಾವಿರ ಕೋಟಿ ಹಣಕಾಸಿನ ನೆರವನ್ನು ನಿರೀಕ್ಷಿಸಲಾಗಿದೆ. ಅದಕ್ಕಾಗಿ ಸಂಪೂರ್ಣ ವರದಿ ತಯಾರಿಸಲಾಗುತ್ತಿದೆ.

ಆಗಸ್ಟ್ 1 ರಿಂದ ಇಂದಿನವರೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ನೂರಾರು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿವೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಕಾರದ ವಿವರಣೆಯಂತೆ 18 ಮಂದಿ ಜೀವ ಕಳೆದುಕೊಂಡಿದ್ದಾರೆ, 42 ಜಾನುವಾರುಗಳು ಅಸುನೀಗಿವೆ, ಜೊತೆಗೆ 125 ಮನೆಗಳು ಸಂಪೂರ್ಣವಾಗಿ ಜಖಂಗೊಂಡಿವೆ, 3,639 ಮನೆಗಳು ಭಾಗಶಃ ಹಾನಿಗೀಡಾಗಿವೆ.

ಅಲ್ಲದೆ 43,827 ಹೆಕ್ಚೇರ್ ಕೃಷಿ ಭೂಮಿ, 48,696 ಹೆಕ್ಟೇರ್ ತೋಟಗಾರಿಕಾ ಭೂಮಿ ನಾಶವಾಗಿವೆ. ವಿವಿಧ ಜಿಲ್ಲೆಗಳಲ್ಲಿರುವ 109 ಪರಿಹಾರ ಶಿಬಿರಗಳಲ್ಲಿ ಸುಮಾರು 3,500 ಮಂದಿ ಜನ ಆಶ್ರಯ ಪಡೆದಿದ್ದಾರೆ, 50ರಿಂದ 100 ರಸ್ತೆ ಮತ್ತು ಸೇತುವೆ ಹಾನಿಗೊಳಗಾಗಿವೆ.

ರಸ್ತೆಗಳು, ಸೇತುವೆಗಳು ಸೇರಿದಂತೆ ಮಳೆಯಿಂದ ಉಂಟಾಗಿರುವ ನಷ್ಟದ ಅಂದಾಜು ಒದಗಿಸಲು ಎಂಜಿನಿಯರ್‍ಗಳಿಗೆ ಮತ್ತು ಗ್ರಾಮ ಪಂಚಾಯಿತಿ ಅಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, 16,633 ಕಿ.ಮೀ ರಸ್ತೆಗಳು ಹಾಳಾಗಿದ್ದು, ಕೆಲವು ಭಾಗಶಃ ಮತ್ತು ಕೆಲವು ಸಂಪೂರ್ಣವಾಗಿ ಹಾಳಾಗಿವೆ, ಇದರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಕೂಡ ಸೇರಿವೆ.

ಕೊಡಗು ಮತ್ತು ಬೆಳಗಾವಿಗಳಲ್ಲಿ 547 ಸೇತುವೆ ಮತ್ತು ತೂಬುಗಳು ಕೂಡ ಹಾನಿಗೊಂಡಿವೆ. ರಸ್ತೆಗಳು ಮತ್ತು ಸೇತುವೆಗಳಲ್ಲಿ ನೀರು ಸಂಗ್ರಹವಾದಾಗ ಹಾನಿಯನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin