ಲಾಟರಿ ಏಜೆಂಟರಿಗೆ ಪರಿಹಾರ ನೀಡಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29- ರಾಜ್ಯದಲ್ಲಿ ಲಾಟರಿಯನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಾಟರಿ ಏಜೆಂಟರಿಗೆ ಈ ಬಾರಿಯ ಬಜೆಟ್‍ನಲ್ಲಿ ಪರಿಹಾರ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಅಧ್ಯಕ್ಷ ಟಿ.ರಾಮಕೃಷ್ಣ ಅವರು, 2007ರಲ್ಲಿ ಕರ್ನಾಟಕ ಸರ್ಕಾರ ಲಾಟರಿಯನ್ನು ರಾಜ್ಯದಲ್ಲಿ ನಿಷೇಧ ಮಾಡಿತು. ಪರಿಣಾಮ ಇಂದು ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾವಿರಾರು ಕುಟುಂಬದವರು ಲಾಟರಿ ಮಾರಾಟ ಮಾಡಿ ಕುಟುಂಬಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರ ಏಕಾಏಕಿ ಲಾಟರಿ ಮಾರಾಟ ನಿಷೇಧ ಮಾಡಿದ್ದರಿಂದ ಇದನ್ನೇ ನಂಬಿದ ಅನೇಕರು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಮಾ.5ರಂದು ಮಂಡನೆಯಾಗಲಿರುವ ಬಜೆಟ್‍ನಲ್ಲಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ , ಎಂಎಸ್‍ಐಎಲ್ ಲಾಟರಿ ಏಜೆಂಟರಿಗೆ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ಈ ಹಿಂದೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸಿಎಂ ಯಡಿಯೂರಪ್ಪನವರು ಎಲ್ಲ ಸಮುದಾಯಗಳ ಬಗ್ಗೆ ವಿಶೇಷವಾದ ಅನುಕಂಪ ಹೊಂದಿದ್ದಾರೆ. ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಕೋರಿದರು.

ಇದೇ ವೇಳೆ ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಕೆ.ಆರ್.ಮಾರ್ಕೆಟ್ ಮುಂಭಾಗದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಟೌನ್‍ಹಾಲ್‍ರವರೆಗೆ ಮೆರವಣಿಗೆ ಮಾಡಲಾಗುವುದು. ಜೊತೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕೆಂದು ರಾಮಕೃಷ್ಣ ಮನವಿ ಮಾಡಿದರು.

ಮೈಸೂರಿನ ಮತ್ತೋರ್ವ ರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಮೈಸೂರುನಿಂದ ದೆಹಲಿಗೆ ಸಂಚರಿಸುವ ರೈಲಿಗೆ ಅವರ ಹೆಸರನ್ನು ನಾಮಕರಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಅಧ್ಯಕ್ಷ ಅಶ್ವಥ್ ನಾರಾಯಣ, ಉಪಾಧ್ಯಕ್ಷ ಅಂತೋಣಿ ಮೈಕಲ್ ರಾಜ್, ಕಾರ್ಯದರ್ಶಿ ಪದ್ಮೋಜಿ ರಾವ್, ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ಮತ್ತಿತರರು ಇದ್ದರು.

Facebook Comments

Sri Raghav

Admin