ಬೆಂಗಳೂರಿನಲ್ಲೂ `ಲವ್‍ಜಿಹಾದ್’..?, ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.11- ಯುವತಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಮತಾಂತರಗೊಳ್ಳು ವಂತೆ ಒತ್ತಾಯಿಸಿದ ಸಹೋದರರ ಪೈಕಿ ಒಬ್ಬಾತನನ್ನು ಬಂಧಿಸಿರುವ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಮತ್ತೊಬ್ಬನಿಗಾಗಿ ಶೋಧ ನಡೆಸುತ್ತಿದ್ದಾರೆ.  ಪರಾರಿಯಾಗಿರುವ ಆರೋಪಿ ರಿಲ್ವಾನ್‍ಗಾಗಿ ಒಂದು ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದರೆ ಮತ್ತೊಂದು ತಂಡ ನಗರದಲ್ಲಿ ಶೋಧ ನಡೆಸುತ್ತಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಶಬೀರ್ ಅಹಮದ್ ಮತ್ತು ರಿಲ್ವಾನ್ ಸಹೋದರರು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.

ನಗರದ ಹೋಟೆಲ್‍ವೊಂದರಲ್ಲಿ ಸ್ವಾಗತಕಾರಣಿ ಉದ್ಯೋಗಕ್ಕೆ ಯುವತಿಯನ್ನು ಸೇರಿಸಿದ್ದ ಆರೋಪಿ ಶಬೀರ್ ಅಹಮದ್, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ನಂತರ ಕೆಲಸದ ವಿಚಾರವಾಗಿ ಮಾತನಾಡಬೇಕೆಂದು ನಗರದ ಬ್ರಿಗೇಡ್ ರಸ್ತೆಯಲ್ಲಿ ಓಯೋ ಟೌನ್‍ಹೌಸ್‍ಗೆ ಕರೆಸಿಕೊಂಡು ಅತ್ಯಾಚಾರ ವೆಸಗಿದ್ದ. ಈ ವಿಚಾರ ಯಾರಿಗಾದರೂ ಹೇಳಿದರೆ ಉದ್ಯೋಗದಿಂದ ತೆಗೆಸುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೆ ಆ್ಯಸಿಡ್ ಹಾಕುವುದಾಗಿಯೂ ಹೆದರಿಸಿದ್ದಾನೆ.

ಶಬೀರ್ ಅಹಮದ್ ವರ್ತನೆಯಿಂದ ನೊಂದಿದ್ದ ಯುವತಿ ಯಾರೊಂದಿಗೂ ತನಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿರಲಿಲ್ಲ.  ಈ ನಡುವೆ ಯುವತಿ ಕೆಲಸ ಮಾಡುತ್ತಿದ್ದ ಹೋಟೆಲ್‍ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆರೋಪಿ ಸಹೋದರ ರಿಲ್ವಾನ್ ಸಹ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡುನನ್ನ ಅಣ್ಣ ನಿನಗೆ ಅನ್ಯಾಯ ಮಾಡಿದ್ದಾನೆ. ಇನ್ನು ಮುಂದೆ ಹಾಗಾಗಲು ಬಿಡುವುದಿಲ್ಲ ಎಂದು ಹೇಳಿ ಆಕೆಯ ನಂಬಿಕೆ ಗಳಿಸಿದ.

ತದನಂತರದಲ್ಲಿ ನಾನು ನಿನಗೆ ಅನ್ಯಾಯವಾಗಲು ಬಿಡಲ್ಲ. ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಹಲವು ಬಾರಿ ಆಕೆ ಮೇಲೆ ಅತ್ಯಾಚಾರ ವೆಸಗಿದ್ದಾನೆ. ಯುವತಿ ಪಾಲಕರನ್ನು ಮದುವೆಗೆ ಒಪ್ಪಿಸುವ ನಾಟಕವಾಡಿದ ರಿಲ್ವಾನ್ ಎರಡು ತಿಂಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡು ನಂತರ ದುಬೈಗೆ ಬಂದರೆ ಒಳ್ಳೆಯ ಉದ್ಯೋಗ ಸಿಗುತ್ತದೆ. ಪಾಸ್‍ಪೋರ್ಟ್‍ಗೆ ಸಹಿ ಬೇಕೆಂದು ಹಾಳೆಗಳ ಮೇಲೆ ಈ ವಂಚಕ ಸಹಿ ಮಾಡಿಸಿಕೊಂಡಿದ್ದಲ್ಲದೆ ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಒತ್ತಾಯಿಸಿ ಆಕೆಯ ಹಣೆಯ ಕುಂಕುಮವನ್ನು ಬಲವಂತವಾಗಿ ಅಳಿಸಿದ್ದ.

ಈ ಎಲ್ಲ ಬೆಳವಣಿಗೆಗಳ ಬಳಿಕ ರಿಲ್ವಾನ್‍ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸಹೋದರರಿಂದ ವಂಚನೆ ಹಾಗೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಯುವತಿ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆಹೋಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಶಬೀರ್ ಅಹಮದ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ರಿಲ್ವಾನ್‍ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Facebook Comments