ಅಪ್ರಾಪ್ತೆಗೆ ತಾಳಿ ಕಟ್ಟಿ, ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, ಜ.1- ಅಪ್ರಾಪ್ತೆಯ ಕೊರಳಿಗೆ ತಾಳಿ ಕಟ್ಟಿ ವಿಷ ಕುಡಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಲ್ಲಿ ಪ್ರಿಯತಮೆ ಸಾವನ್ನಪ್ಪಿ, ಪ್ರಿಯಕರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್‍ಪಿ ಗ್ರಾಮದಲ್ಲಿ ನಡೆದಿದೆ. ದ್ಯಾಮವ್ವ ಬೂದಿಹಾಳ(16) ಮೃತಪಟ್ಟ ಬಾಲಕಿ. ಈಕೆಯನ್ನು ಪ್ರೀತಿಸುತ್ತಿದ್ದ ಕುಮಾರ ಪಾಟೀಲ್(20) ಎಂಬ ಯುವಕ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.

10ನೇ ತರಗತಿಯಲ್ಲಿ ಓದುತ್ತಿದ್ದ ದ್ಯಾಮವ್ವ ಹಾಗೂ ಕುಮಾರ ಪಾಟೀಲ್ ಪರಸ್ಪರ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದರು. ನಿನ್ನೆ ಶಾಲೆಯಿಂದ ದ್ಯಾಮವ್ವಳನ್ನು ಕರೆದೊಯ್ದಿದ್ದ ಯುವಕ ಗ್ರಾಮದ ಹೊರವಲಯದಲ್ಲಿ ಆಕೆಯ ಕೊರಳಿಗೆ ಅರಿಶಿನದ ತಾಳಿ ಕಟ್ಟಿ ನಂತರ ವಿಷ ಕುಡಿಸಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಮತ್ತೊಂದೆಡೆ ಈ ಇಬ್ಬರ ಪ್ರೀತಿಗೆ ಪೋಷಕರ ವಿರೋಧವಿದ್ದ ಕಾರಣ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಮಾತುಗಳು ಕೇಳಿಬಂದಿವೆ. ಈ ದುರ್ಘಟನೆಯಲ್ಲಿ ದ್ಯಾಮವ್ವ ಸಾವನ್ನಪ್ಪಿದ್ದು, ಕುಮಾರ ಪಾಟೀಲ ಆಸ್ಪತ್ರೆ ಸೇರಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗುಳೇದಗುಡ್ಡ ಠಾಣಾ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments