ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಸಜೀವ ದಹನ..!

ಈ ಸುದ್ದಿಯನ್ನು ಶೇರ್ ಮಾಡಿ

ದಿಬ್ರುಗಢ್(ಅಸ್ಸಾಂ), ಅ.19- ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ದಿಬ್ರುಗಢ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಅಪ್ಪರ್ ಅಸ್ಸಾಂನ ದಿಬ್ರುಗಢ್ ಜಿಲ್ಲೆಯ ಥರ್ಮಲ್ ಕಾಲೋನಿ ಪ್ರದೇಶದ ನಿಖ್ ಕೊಡೊಮ್ ಪ್ರದೇಶದಲ್ಲಿ 1.30ರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ದಿಬ್ರುಗಢ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ರೈಲ್ವೆ ಟ್ರ್ಯಾಕ್ ಸನಿಹದಲ್ಲಿದ್ದ ಪುಟ್ಟ ಮನೆಯೊಂದರಲ್ಲಿ ನಸುಕಿನ ವೇಳೆ ಗ್ಯಾಸ್ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿತು. ಈ ದುರಂತದಲ್ಲಿ ಒಂದೇ ಕುಟುಂಬದ ಐವರು ಸುಟ್ಟು ಕರಕಲಾದರು. ಘಟನೆ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ್ ದಿಗ್ಭ್ರಮೆ ವ್ಯಕ್ತಪಡಿಸಿ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಉತ್ತರ ಪ್ರದೇಶದ ಮಾವು ಜಿಲ್ಲೆಯಲ್ಲಿ ಅಡುಗೆ ಅನಿಲ ಸ್ಫೋಟಗೊಂಡು ಎರಡು ಅಂತಸ್ತಿನ ಕಟ್ಟಡ ಕುಸಿದು 12 ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments