ವಿದ್ಯಾರ್ಥಿಯ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಆವರಿಸಿದ್ದನ್ನು ಗಮನಿಸಿದ ಶಾಲಾ ವಿದ್ಯಾರ್ಥಿ ತನ್ನ ಸಮಯ ಪ್ರಜ್ಞೆಯಿಂದ ತಾಯಿ ಮತ್ತು ತಮ್ಮನನ್ನು ಹೊರಗೆ ಕರೆತಂದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಡಾ.ರಾಜ್‍ಕುಮಾರ್ ವಾರ್ಡ್‍ನ ಅಗ್ರಹಾರ ದಾಸರಹಳ್ಳಿ, ಕಂಠೀರವ ಕಾಲೋನಿಯ 13ನೇ ಇ ಅಡ್ಡರಸ್ತೆಯ ರವಿಕುಮಾರ್ ಎಂಬುವರ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಹೊಸ ಸಿಲಿಂಡರನ್ನು ಅಳವಡಿಸಿದ್ದರು.

ರವಿಕುಮಾರ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರೆ, ಇಬ್ಬರು ಮಕ್ಕಳಾದ ಶ್ರೇಯಸ್ ಮತ್ತು ಪ್ರೀತಮ್ ಶಾಲೆಗೆ ಹೋಗಿದ್ದರು. ಮನೆಯಲ್ಲಿ ಪತ್ನಿ ಸುನಿತಾ ಇದ್ದರು. ಸಂಜೆ 4 ಗಂಟೆ ಸುಮಾರಿನಲ್ಲಿ ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಸುನಿತಾ ಅವರು ಅಡುಗೆ ಮಾಡಲು ಸ್ಟೌವ್ ಹಚ್ಚಿದ ಕೂಡಲೇ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಬೆಂಕಿ ಗಮನಿಸಿದ ಮಗ ಶ್ರೇಯಸ್, ತಾಯಿ ಹಾಗೂ ತಮ್ಮ ಪ್ರೀತಮ್‍ನನ್ನು ಮನೆಯಿಂದ ಹೊರಗೆ ಕರೆ ತಂದು ಪ್ರಾಣ ರಕ್ಷಿಸಿದ್ದಾನೆ. ಇವರೆಲ್ಲಾ ಮನೆಯಿಂದ ಹೊರಗೆ ಬಂದ ಕೆಲವೇ ಸೆಕೆಂಡ್‍ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಪೋಟದ ರಭಸಕ್ಕೆ ಮನೆಯ ಶೀಟ್, ಕಿಟಕಿ, ಬಾಗಿಲುಗಳು ಛಿದ್ರಗೊಂಡಿವೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.

ಬೆಂಕಿಯ ಕೆನ್ನಾಲಗಿಯಿಂದ ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಬಟ್ಟೆ ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments