ಜನಸಾಮಾನ್ಯನ ಬದುಕು ಬರ್ಬಾದ್ : LPG 15 ರೂ. ಸೇರಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲೂ ಹೆಚ್ಚಳ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.6- ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದಂತೆ ದೇಶಿಯ ತೈಲ ಕಂಪೆನಿಗಳು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆಯನ್ನು ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಎಳೆದಿವೆ.ನಿನ್ನೆ ಮಧ್ಯ ರಾತ್ರಿಯಿಂದ ಜಾರಿಗೆ ಬರುವಂತೆ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್‍ಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 30 ಪೈಸೆ, ಡಿಸೇಲ್ ಮೇಲೆ 35 ಪೈಗೆ ದರ ಹೆಚ್ಚಳವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೇಲ್‍ಗೆ 82.87 ಡಾಲರ್‍ಗಳಾಗಿದೆ. ಕಚ್ಚಾ ತೈಲವನ್ನು ದಾಸ್ತಾನು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುವ ಅಮೆರಿಕಾದ ಟೆಕ್ಸಾಸ್‍ನಲ್ಲೂ ತೈಲ ಬೆಲೆ ಬ್ಯಾರೇಲ್‍ಗೆ 78..87 ಡಾಲರ್‍ಗೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದು ಹೆಚ್ಚು ದುಬಾರಿ ದರ ಎಂದು ಹೇಳಲಾಗುತ್ತಿದೆ. 2014ರ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ Pಚ್ಚಾ ತೈಲದ ದರ ನಿಯಂತ್ರಣದಲ್ಲಿತ್ತು. ಏಳು ವರ್ಷಗಳ ಬಳಿಕ ದುಬಾರಿ ಎನ್ನುವ ಮಟ್ಟಕ್ಕೆ ಹೆಚ್ಚಾಗಿದೆ.

ಈ ಮೊದಲು ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಇಂಧನದ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಲೇ ಇತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಪ್ರತಿಪಕ್ಷಗಳು ಹಲವಾರು ಬಾರಿ ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ದವು. ಕೊರೊನಾ, ತತ್ಪರಿಣಾಮ ಲಾಕ್‍ಡೌನ್‍ನಿಂದ ದೇಶದ ಆರ್ಥಿಕತೆ ಕುಸಿದು ಹೋಗಿದ್ದು, ಜನ ಸಮಾನ್ಯರ ಬಳಿ ಜೀವನ ನಿರ್ವಹಣೆಗೆ ಆದಾಯದ ಕೊರತೆ ಎದುರಾಗಿತ್ತು.

ಅಂತಹ ಸಂದರ್ಭದಲ್ಲೂ ಇಂಧನ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು. ಇತ್ತಿಚೆಗೆ ಕೊರೊನಾ ನಿಯಂತ್ರಣದಲ್ಲಿದ್ದು ಆರ್ಥಿಕ ಚಟುವಟಿಕೆಗಳು ಸುಧಾರಣೆ ಕಾಣುತ್ತಿವೆ. ಈ ಹಂತದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯ ದರ ಏರಿಕೆ ಜನ ಸಾಮಾನ್ಯರ ಮೇಲೆ ಮತ್ತೊಂದು ಬರೆ ಹಾಕುವಂತೆ ಮಾಡಿದೆ.

ಇದೇ ತಿಂಗಳ ಮೊದಲ ದಿನ ತೈಲ ಕಂಪೆನಿಗಳು ವಾಣಿಜ್ಯ ಬಳಕೆಗೆ 19 ಕೆಜಿ ಸಿಲಿಂಡರ್ ಮೇಲೆ 50 ರೂಪಾಯಿ ದರ ಏರಿಕೆ ಮಾಡಿದ್ದವು. ಆ ವೇಳೆ ಅಡುಗೆ ಅನಿಲದ ಬೆಲೆ ಏರಿಕೆಯಾಗಿಲ್ಲ ಎಂದು ನಿಟ್ಟುಸಿರು ಬಿಡುವಂತಾಗಿತ್ತು. ತೈಲ ಕಂಪೆನಿಗಳು ಪ್ರತಿ ದಿನ ಇಂಧನದ ದರ ಪರಿಷ್ಕರಣೆ ಮಾಡಿದರೆ ಗ್ಯಾಸ್ ದರವನ್ನು ಪ್ರತಿ ವಾರ ಪರಿಷ್ಕರಣೆ ಮಾಡಲು ಅವಕಾಶ ಇದೆ. ಆದರೆ ವಾಣಿಜ್ಯ ಬಳಕೆಯ ಅನಿಲ ದರ ಏರಿಕೆ ಮಾಡಿ ವಾರ ಕಳೆಯುವ ಮುನ್ನವೇ ಅಡುಗೆ ಅನಿಲದ ದರ ಹೆಚ್ಚಳ ಮಾಡಿರುವುದು ಜನ ಸಾಮಾನ್ಯರ ಸಿಟ್ಟಿಗೆ ಕಾರಣವಾಗಿದೆ.

ದೆಹಲಿ, ಮುಂಬೈ, ಬೆಂಗಳೂರು, ಚನೈ, ಕೊಲ್ಕತ್ತಾ ಸೇರಿದಂತೆ 100ಕ್ಕೂ ಹೆಚ್ಚು ಮಹಾನಗರಗಳಲ್ಲೂ ಇಂಧನ ಹಾಗೂ ಅನಿಲದ ಬೆಲೆ ಬೇರೆ ಬೇರೆಯಿದ್ದು, ದರ ಹೆಚ್ಚಳ ಅದರೊಂದಿಗೆ ಸೇರಿ ಗ್ರಾಹಕರಿಗೆ ಬರೆ ಹಾಕುತ್ತಿದೆ. ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್-ಡಿಸೇಲ್ ದರವನ್ನು ತೈಲ ಕಂಪೆನಿಗಳು 10 ಬಾರಿ ಹೆಚ್ಚಳ ಮಾಡಿವೆ. ಇಂದು ಹನ್ನೊಂದನೆ ಬಾರಿ ಮತ್ತೆ ಏರಿಕೆಯಾಗಿದೆ.

Facebook Comments

Sri Raghav

Admin