ಬಿಡಿಎ ನಿರ್ಮಾಣದ ಅಪಾರ್ಟ್ ಮೆಂಟ್ ಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿರುವ ವಸತಿ ಸಂಕೀರ್ಣಗಳಿಗೆ ಕೊಳವೆ ಮೂಲಕ (ಪೈಪ್ ಲೈನ್) ಅಡುಗೆ ಅನಿಲ ಪೂರೈಸುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. ಮಾಳಗಾಳದಲ್ಲಿ ನಿರ್ಮಾಣವಾಗಿರುವ ಬ್ರಹ್ಮಗಿರಿ ವಸತಿ ಸಂಕೀರ್ಣಕ್ಕೆ ಮಂಗಳವಾರ ಭೇಟಿ ನೀಡಿ ಮಾಲೀಕರ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಮಾಳಗಾಳ ಸೇರಿದಂತೆ ಬಿಡಿಎ ಕೈಗೆತ್ತಿಕೊಂಡಿರುವ ವಸತಿ ಸಂಕೀರ್ಣಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಗೇಲ್ ಸಂಸ್ಥೆಗೆ ಪತ್ರ ವ್ಯವಹಾರಗಳನ್ನು ನಡೆಸಲಾಗಿದೆ. ಈಗಾಗಲೇ ಕೆಲವು ವಸತಿ ಸಂಕೀರ್ಣಗಳಿಗೆ ಅಡುಗೆ ಅನಿಲ ಪೂರೈಸುವ ಬಗ್ಗೆ ಗೇಲ್ ಸಂಸ್ಥೆಯವರು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.

# ಓಪನ್ ಜಿಮ್ ಸ್ಥಾಪನೆಗೆ ಸೂಚನೆ :
ಮಾಳಗಾಳ ಅಪಾರ್ಟ್ ಮೆಂಟ್ ನಲ್ಲಿ ನಿವಾಸಿಗಳ ಅನುಕೂಲಕ್ಕಾಗಿ ಓಪನ್ ಜಿಮ್ ಮತ್ತು ಮಕ್ಕಳಿಗಾಗಿ ಕ್ರೀಡಾ ಪರಿಕರಗಳನ್ನು ಅಳವಡಿಸುವಂತೆ ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಅಪಾರ್ಟ್ ಮೆಂಟ್ ನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ ಅವರು, ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಮನೆಗೊಂದು ಸಸಿಯನ್ನು ನೆಟ್ಟು ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯವನ್ನಾಗಿಸುವಂತೆ ಕರೆ ನೀಡಿದರು.

# ನಾಗರಭಾವಿ, ಕೊಮ್ಮಘಟ್ಟಗಳಿಗೆ ಭೇಟಿ :
ನಾಗರಭಾವಿ ವ್ಯಾಪ್ತಿಯ ಚಂದ್ರಾ ಲೇಔಟ್ ನಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣಕ್ಕೆ ಭೇಟಿ ನೀಡಿ, ಆದಷ್ಟೂ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ನಾಗರಿಕರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸೂಚನೆ ನೀಡಿದರು.

ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನಾಗರಿಕರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳು ಹಾಗೂ ಉದ್ಯಾನ, ಜಿಮ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಅಪಾರ್ಟ್ ಮೆಂಟ್ ಗಳಲ್ಲಿ ಸಾರ್ವಜನಿಕರ ಮನಸ್ಥಿತಿಗೆ ಹೊಂದಿಕೊಳ್ಳುವ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

# ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಕ್ಕೆ ಸೂಚನೆ :
ಕೊಮ್ಮಘಟ್ಟದಲ್ಲಿ ನಿರ್ಮಾಣವಾಗುತ್ತಿರುವ 3 ರಿಂದ 5 ನೇ ಹಂತದ ವಸತಿ ಸಂಕೀರ್ಣದ ಕಾಮಗಾರಿ ಶೇ.70 ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಆದೇಶ ನೀಡಿದರು. ನೈಸ್ ರಸ್ತೆಗೆ ಹೊಂದಿಕೊಂಡತೆ ಇರುವ ಈ ವಸತಿ ಸಮುಚ್ಚಯ ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ನಿರ್ಮಾಣವಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನು ಬಿಡಿಎ ಕಡೆಯಿಂದ ನೀಡಿದರೆ ಸಾರ್ವಜನಿಕರು ಖರೀದಿಗೆ ಮುಂದಾಗುತ್ತಾರೆ. ಓಪನ್ ಜಿಮ್, ಉದ್ಯಾನವನ ನಿರ್ಮಿಸಿ ಉತ್ತಮ ಪರಿಸರ ನಿರ್ಮಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ಕೊಟ್ಟರು.

# ಅಪಾರ್ಟ್ ಮೆಂಟ್ ವಾಸಿಗಳಿಂದ ಸನ್ಮಾನ :
ಮಾಳಗಾಳ ವಸತಿ ಸಮುಚ್ಚಯದಲ್ಲಿ ಇದ್ದ ಸಮಸ್ಯೆಗಳನ್ನು ಕೆಲವೇ ದಿನಗಳಲ್ಲಿ ಬಗೆಹರಿಸಿದ ಹಿನ್ನೆಲೆಯಲ್ಲಿ ನಿವಾಸಿಗಳ ಸಂಘ ಎಸ್. ಆರ್. ವಿಶ್ವನಾಥ್ ಅವರನ್ನು ಸನ್ಮಾನಿಸಿತು.

# ಜೂನ್ ಅಂತ್ಯದೊಳಗೆ ಮಾರಾಟ :
ನಾಗರಭಾವಿ ಬಳಿ ನಿರ್ಮಾಣ ಮಾಡುತ್ತಿರುವ ಅತ್ಯಂತ ಸುಸಜ್ಜಿತ ವಸತಿ ಸಮುಚ್ಚಯದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಜೂನ್ ಅಂತ್ಯದೊಳಗೆ ಮಾರಾಟ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಮೂರು ರೂಂ ಗಳಿರುವ ಅಪಾರ್ಟ್ ಮೆಂಟ್ ಗಳಿಗೆ ಈಗಾಗಲೇ ಭಾರೀ ಡಿಮ್ಯಾಂಡ್ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

# ಗುಣಮಟ್ಟದಲ್ಲಿ ರಾಜಿ ಇಲ್ಲ :
ಬಿಡಿಎ ನಿರ್ಮಾಣ ಮಾಡುತ್ತಿರುವ ಅಪಾರ್ಟ್ ಮೆಂಟ್ ಗಳಲ್ಲಿ ಯಾವುದೇ ರಾಜಿ ಇಲ್ಲ. ಉತ್ತಮ ಗುಣಮಟ್ಟದ ಕಾಮಗಾರಿ ನಡೆಸದೇ ಇದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನ ವಿಶ್ವನಾಥ್ ನೀಡಿದರು.

# ಟೈಟಲ್ ಡೀಡ್ ಪಕ್ಕಾ ಇರುತ್ತದೆ :
ಕೆಲವು ಖಾಸಗಿ ಬಿಲ್ಡರ್ ಗಳು ನಿರ್ಮಾಣ ಮಾಡುವ ಅಪಾರ್ಟ್ ಮೆಂಟ್ ನಲ್ಲಿ ಟೈಟಲ್ ಡೀಡ್ ಇರೋದಿಲ್ಲ. ಆದರೆ ಬಿಡಿಎ ನಿರ್ಮಾಣ ಮಾಡುತ್ತಿರುವ ಅಪಾರ್ಟ್ ಮೆಂಟ್ ನಲ್ಲಿ ಟೈಟಲ್ ಡೀಡ್ ಪಕ್ಕಾ ಇರಲಿದೆ. ಹಾಗೆನೇ ಯಾವುದೇ ಭಯವಿಲ್ಲದೆ ಖರೀದಿ ಮಾಡುಬಹುದು ಎಂದು ಭರವಸೆ ಕೊಟ್ಟರು.

Facebook Comments

Sri Raghav

Admin