ಶ್ವಾಸಕೋಶ ಕ್ಯಾನ್ಸರ್ ಎಂಬ ಹೆಮ್ಮಾರಿಯಿಂದ ದೂರವಿರೋದು ಹೇಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ಆಧುನಿಕ ಜೀವನಶೈಲಿಯಿಂದಾಗಿ ನಾವು ನಮ್ಮ ಅತ್ಯಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಎಲ್ಲವೂ ಬೆರಳ ತುದಿಯಲ್ಲೇ ಸಿಗುವಂತೆ ಮಾಡುತ್ತಿರುವ ತಂತ್ರಜ್ಞಾನ, ಆರಾಮದಾಯಕ ಬದುಕಿನ ಶೈಲಿ, ಐಷಾರಾಮಿ ಸೌಲಭ್ಯಗಳು, ಕಣ್ಣಿಗೆ ಕಂಡ ವಸ್ತುಗಳನ್ನು ನಮ್ಮದಾಗಿಸಿಕೊಳ್ಳುವ ತವಕದಲ್ಲಿ ನಾವು ಅಮೂಲ್ಯವಾದ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ.

ಅದರಲ್ಲೂ ಮಾರಕವಾದ ಕ್ಯಾನ್ಸರ್ ದೇಶದೆಲ್ಲೆಡೆ ಆತಂಕ ಸೃಷ್ಟಿಸುತ್ತಿದ್ದು, ಈ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
20ನೆ ಶತಮಾನದ ಆರಂಭದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆ ತೀರಾ ಅಪರೂಪದ್ದಾಗಿತ್ತು. ಆಗ ಒಂದು ಲಕ್ಷ ಕ್ಯಾನ್ಸರ್ ರೋಗಿಗಳ ಪೈಕಿ ಅಬ್ಬಬ್ಬಾ ಎಂದರೆ ಐದು ಜನರಲ್ಲಿ ಮಾತ್ರ ಈ ಶ್ವಾಸಕೋಶದ ಕ್ಯಾನ್ಸರ್ ಕಂಡು ಬರುತ್ತಿತ್ತು.

ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಈಗ ವರ್ಷಕ್ಕೆ 7.6 ಲಕ್ಷ ಜನರನ್ನು ಶ್ವಾಸಕೋಶದ ಕ್ಯಾನ್ಸರ್ ಬಲಿ ತೆಗೆದುಕೊಳ್ಳುತ್ತಿದೆ. ಭಾರತದಲ್ಲೂ ಅಷ್ಟೆ, ವರ್ಷಕ್ಕೆ 63 ಸಾವಿರ ಜನ ಈ ನಿರ್ದಿಷ್ಟ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ದೇಶದಲ್ಲಿ ಪ್ರತಿ ಒಂದು ಸಾವಿರ ಜನರ ಸಾವಿನಲ್ಲಿ ಐವರು ಇದೇ ರೋಗದಿಂದ ಅಸು ನೀಗುತ್ತಿದ್ದಾರೆ.

ಸಾಮಾನ್ಯವಾಗಿ ಇದು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುವುದಾದರೂ 25-30ರ ನಡುವಿನ ಪ್ರಾಯದವರಲ್ಲಿ ಕೂಡ ಶ್ವಾಸಕೋಶ ಕ್ಯಾನ್ಸರ್ ಕಂಡುಬರುತ್ತಿದೆ. ತಂಬಾಕು ಸೇವನೆ, ವಿಪರೀತವಾಗುತ್ತಿರುವ ವಾಯುಮಾಲಿನ್ಯಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಶ್ವಾಸಕೋಶ ಕ್ಯಾನ್ಸರ್‍ನಲ್ಲಿ ಎರಡು ವಿಧ. ಒಂದು ಸ್ಮಾಲ್ ಸೆಲ್ ಕ್ಯಾನ್ಸರ್; ಇನ್ನೊಂದು ನಾನ್-ಸ್ಮಾಲ್ ಸೆಲ್ ಕ್ಯಾನ್ಸರ್. ಇದರಲ್ಲಿ ಎರಡನೆಯದು ಕಾಣಿಸಿಕೊಳ್ಳುವುದು ಅಪರೂಪ. ಹಿಂದೆಲ್ಲ ಶ್ವಾಸಕೋಶ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲೂ ಇದು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಕಳವಳಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ.

# ಕಾರಣಗಳೇನು?

ಬೀಡಿ-ಸಿಗರೇಟು ಸೇವನೆಯೇ ಶ್ವಾಸಕೋಶ ಕ್ಯಾನ್ಸರ್‍ನ ಹಿಂದಿರುವ ಮುಖ್ಯಕಾರಣ. ಇದರ ಜತೆಗೆ ಇನ್ನೂ ಅನೇಕ ಕಾರಣಗಳಿವೆ ಎನ್ನುವುದನ್ನು ಮರೆಯುವಂತಿಲ್ಲ. ನಮ್ಮಲ್ಲಿ ಪ್ರತಿದಿನ 2,500 ಮಂದಿ ತಂಬಾಕು ಸೇವನೆಯ ದುಷ್ಪರಿಣಾಮಗಳಿಂದ ಕೊನೆಯು ಸಿರೆಳೆಯುತ್ತಿz್ದÁರೆ. ಅದರಲ್ಲೂ ಪುರುಷರ ಪೈಕಿ ಶೇ.87 ಮತ್ತು ಮಹಿಳೆಯರ ಪೈಕಿ ಶೇ.85ರಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಬೀಡಿ-ಸಿಗರೇಟು ಸೇದುವ ಹವ್ಯಾಸವುಳ್ಳವರಾಗಿz್ದÁರೆ ಎಂದು ಸಮೀಕ್ಷೆ ಹೇಳುತ್ತದೆ.

ಅಧ್ಯಯನದ ಪ್ರಕಾರ ವಾಯುಮಾಲಿನ್ಯ, ಯುರೇನಿಯಂ, ರೇಡಿಯೇಷನ್ ಮತ್ತು ಕಲ್ನಾರುಗಳಂಥ ಕೈಗಾರಿಕೋತ್ಪನ್ನಗಳ ಉತ್ಪಾದನೆ, ಅಪೌಷ್ಠಿಕತೆ ಕೂಡ ಶ್ವಾಸಕೋಶದ ಕ್ಯಾನ್ಸರ್‍ಗೆ ಕಾರಣವಾಗಬಲ್ಲವು. ವಿಶ್ವಆರೋಗ್ಯ ಸಂಸ್ಥೆಯು ಭಾರತದ 14 ನಗರಗಳನ್ನು ಭಯಾನಕ ಮಾಲಿನ್ಯದ ನಗರಗಳ ಪಟ್ಟಿಯಲ್ಲಿ ಸೇರಿಸಿದೆ. ಮುಖ್ಯವಾಗಿ ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ.

ಉದಾಹರಣೆಗೆ ಹೇಳುವುದಾದರೆ, ದೆಹಲಿಯಲ್ಲಿ ಹೋದ ವರ್ಷ ಗಾಳಿಯಲ್ಲಿನ ಗುಣಮಟ್ಟದ ಸೂಚ್ಯಂಕ 999ಕ್ಕೆ ಕುಸಿದಿತ್ತು. ಒಬ್ಬ ಮನುಷ್ಯ ದಿನವಿಡೀ ಈ ಗಾಳಿಯನ್ನು ಸೇವಿಸಿದರೆ ಅದು 50 ಸಿಗರೇಟುಗಳನ್ನು ಸೇದಿದ್ದಕ್ಕೆ ಸಮ!

# ಲಕ್ಷಣಗಳೇನೇನು?
ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುತ್ತವೆ. ಅಲ್ಲದೆ, ಇದು ಗೊತ್ತಾಗುವುದು ಕೂಡ ರೋಗ ಉಲ್ಬಣಿಸಿದ ಮೇಲೆಯೇ. ಆದರೆ, ಕೆಲವು ಸಾಮಾನ್ಯ ಲಕ್ಷಣಗಳೂ ಇವೆ. ಅವೆಂದರೆ- ಸತತ ಎದೆ ನೋವು, ಉಸಿರಾಟದ ತೊಂದರೆ, ಸುಲಭಕ್ಕೆ ವಾಸಿಯಾಗದ ಕೆಮ್ಮು, ಕೆಮ್ಮಿದಾಗ ರಕ್ತ ಬರುವುದು, ಆಸ್ತಮಾ, ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಪದೇ ಪದೇ ಬರುವ ತಲೆನೋವು, ಸುಸ್ತು, ಕುತ್ತಿಗೆ ಮತ್ತು ಮುಖದಲ್ಲಿ ಕಾಣಿಸಿಕೊಳ್ಳುವ ಊತ.

# ಪರಿಹಾರವೇನು?
ಆದಷ್ಟು ಬೇಗ ವೈದ್ಯರ ಬಳಿಗೆ ಹೋಗುವುದೇ ಶ್ವಾಸಕೋಶ ಕ್ಯಾನ್ಸರ್ ಮತ್ತಷ್ಟು ಉಲ್ಬಣವಾಗದಂತೆ ತಡೆಯಲು ಇರುವ ಪರಿಹಾರ. ಏಕೆಂದರೆ, ಇದರಿಂದ ಇಮೇಜಿಂಗ್ ಸ್ಟಡೀಸ್, ಟಿಶ್ಶೂ ಸ್ಯಾಂಪ್ಲಿಂಗ್ ಮುಂತಾದ ಪರೀಕ್ಷೆಗಳನ್ನು ನಡೆಸಬಹುದು. ಹೆಚ್ಚಿನ ಜನರು ವೈದ್ಯರ ಬಳಿಗೆ ಹೋಗುವುದನ್ನೇ ತುಂಬಾ ತಡ ಮಾಡುತ್ತಾರೆ ಎನ್ನುವುದು ವಾಸ್ತವ.

# ಶ್ವಾಸಕೋಶ ಕ್ಯಾನ್ಸರ್ ತಡೆಗಟ್ಟಬಹುದೇ?
ಉಳಿದೆಲ್ಲ ಕ್ಯಾನ್ಸರ್‍ಗಳಂತೆಯೇ ಈ ಕ್ಯಾನ್ಸರ್ ಕೂಡ ಮೊದಲೇ ಗೊತ್ತಾಗುವುದಿಲ್ಲ. ಆದರೂ ಕೆಲವು ಮುಂಜÁಗ್ರತಾ ಕ್ರಮಗಳನ್ನು ವಹಿಸಬಹುದು. ಅವೆಂದರೆ- ಬೀಡಿ, ಸಿಗರೇಟು, ಹೊಗೆಸೊಪ್ಪುಗಳಿಂದ ದೂರವಿರುವುದು, ಧೂಮಪಾನಿಗಳಿಂದ ಆದಷ್ಟೂ ದೂರವಿರುವುದು, ಕಲ್ನಾರು, ಮರ-ಮುಟ್ಟುಗಳ ಧೂಳಿನಿಂದ ದೂರವಿರುವುದು ಮುಂತಾದವು.

ಇದರ ಜತೆಗೆ ದಿನವೂ ಒಂದೆರಡು ಗಂಟೆಗಳ ಕಾಲ ವ್ಯಾಯಾಮ, ವಾಕಿಂಗ್, ದೈಹಿಕ ಶ್ರಮದ ಕೆಲಸಗಳನ್ನು ಮಾಡುವುದು, ಊಟ-ತಿಂಡಿಯಲ್ಲಿ ಹಣ್ಣು-ತರಕಾರಿಗಳು ಇರುವಂತೆ ನೋಡಿಕೊಳ್ಳುವುದು, ಅದರಲ್ಲೂ ಹೂಕೋಸು, ಬಸಳೆ-ಪಾಲಕ್ ಸೊಪ್ಪು, ಹುರುಳಿಕಾಯಿ, ಕ್ಯಾರೆಟ್ ಮತ್ತು ಅರಿಶಿನವನ್ನು ಹೆಚ್ಚಾಗಿ ಸೇವಿಸುವುದದಿಂದ ಶ್ವಾಸಕೋಶದ ಕ್ಯಾನ್ಸರ್ ಆದಷ್ಟು ಮಟ್ಟಿಗೆ ಬರದಂತೆ ನೋಡಿಕೊಳ್ಳಬಹುದು. ಜತೆಗೆ, ಸಿ ವಿಟಮಿನ್ ಇರುವ ಆಹಾರ ಪದಾರ್ಥಗಳ ಸೇವನೆಯೂ ಒಳ್ಳೆಯದು.

# ಚಿಕಿತ್ಸೆ ಏನು?
ಶ್ವಾಸಕೋಶದ ಕ್ಯಾನ್ಸರ್‍ಗೆ ನೀಡುವ ಚಿಕಿತ್ಸೆ ಎರಡು ಅಂಶಗಳನ್ನು ಆಧರಿಸಿದೆ. ಒಂದು, ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದು; ಎರಡು, ರೋಗಿಯ ಒಟ್ಟು ಆರೋಗ್ಯದ ಸ್ಥಿತಿಗತಿ. ಸಾಮಾನ್ಯವಾಗಿ ವೈದ್ಯರು ರೇಡಿಯೇಷನ್ ಮತ್ತು ಸರ್ಜರಿಯ ಸಲಹೆಯನ್ನೇ ಕೊಡುತ್ತಾರೆ. ಇದರ ಜತೆಗೆ ಕೀಮೋಥೆರಪಿ ಕೂಡ ಪರಿಣಾಮಕಾರಿ. ಆದರೆ ಇದರಲ್ಲಿ ವಿಪರೀತ ದಣಿವು, ಹಸಿವಾಗದಿರುವುದು, ಮೈ ತೂಕ ಇಳಿಯುವುದು ಮತ್ತು ಕೂದಲು ಉದುರುವುದು- ಇಂಥ ತೀವ್ರ ತೆರನಾದ ಅಡ್ಡ ಪರಿಣಾಮಗಳಿವೆ.

ಶ್ವಾಸಕೋಶದ ಕ್ಯಾನ್ಸರ್ ನಿಜಕ್ಕೂ ಮಾರಣಾಂತಿಕವೇ. ಇದಂತೂ ಹತ್ತಾರು ಕಾರಣಗಳಿಂದ ಭಯಾನಕ ವೇಗದಲ್ಲಿ ದಿನದಿಂದ ದಿನಕ್ಕೆ ಸಾಂಕ್ರಾಮಿಕವಾಗುತ್ತಿದೆ. ಆದ್ದರಿಂದ ಸರ್ಕಾರಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಗೂಡಿಸಿ, ಮೊದಲು ವಾಯುಮಾಲಿನ್ಯಕ್ಕೆ ಅಂಕುಶ ಹಾಕಬೇಕು. ಅಲ್ಲದೆ, ತಂಬಾಕು ಉತ್ಪನ್ನಗಳ ವಿರುದ್ಧ ಜಾಗೃತಿ ಮೂಡಿಸಬೇಕು. ಜತೆಗೆ ವೈಯಕ್ತಿಕವಾಗಿ ಇದರ ಬಗ್ಗೆ ಮುಂಜಾಗ್ರತೆ ಬೆಳೆಸಿಕೊಂಡು, ಆದಷ್ಟು ಒಳ್ಳೆಯ ಜೀವನಶೈಲಿ ಮತ್ತು ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ತಜ್ಞ ವೈದ್ಯರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ