ಲಿಂಗಾಯಿತ ಸಮುದಾಯ ಬಿಜೆಪಿಯ ಆಸ್ತಿಯಲ್ಲ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಜು.17- ಲಿಂಗಾಯಿತ ಸಮುದಾಯ ಬಿಜೆಪಿಯ ಆಸ್ತಿಯಲ್ಲ. ಕಾಂಗ್ರೆಸ್‍ನಲ್ಲೂ ಲಿಂಗಾಯಿತ ಸಮುದಾಯದ ಬಹಳಷ್ಟು ಮಂದಿ ಪ್ರಭಾವಿ ನಾಯಕರಿದ್ದಾರೆ. ಕೆಲವರು ಶಾಸಕರಾಗಿದ್ದಾರೆ. ಇನ್ನು ಕೆಲವರು ಸೋತಿರಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಪಕ್ಷದತ್ತ ಮುಖ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಎರಡು ದಿನಗಳ ಕಾಲ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಪ್ರವಾಸ ಕೈಗೊಂಡು ಲಂಬಾಣಿ ತಾಂಡ್ಯ, ನೇಕಾರರ ಸಮುದಾಯದವರ ಸಮಸ್ಯೆಗಳನ್ನು ಆಲಿಸಲಿರುವ ಅವರು, ಇಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂ.ಬಿ.ಪಾಟೀಲ್ ಕಾಂಗ್ರೆಸ್‍ನ ಪ್ರಭಾವಿ ನಾಯಕರು. ಅದೇ ರೀತಿ ಎಸ್.ಆರ್.ಪಾಟೀಲ್ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರ ಜತೆಗೆ ಹಲವಾರು ನಾಯಕರು ಲಿಂಗಾಯಿತ ಸಮುದಾಯದ ನಾಯಕರನ್ನು ಕಾಂಗ್ರೆಸ್‍ಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ಲಿಂಗಾಯಿತ ಸಮುದಾಯ ಶಾಶ್ವತ ಆಸ್ತಿ ಅಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿಗರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಆದರೆ, ಪಕ್ಷ ಸೇರ್ಪಡೆ ಕುರಿತಂತೆ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ. ಬಹಳಷ್ಟು ಮಂದಿ ನಾಯಕರು ಕಾಂಗ್ರೆಸ್ ಸೇರಲು ಆಸಕ್ತರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಅವರ ಹೆಸರುಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ರಾಜ್ಯ ಸರ್ಕಾರ ಈವರೆಗೂ ಪರಿಹಾರ ಪಾವತಿಸಿಲ್ಲ. ದುರ್ಬಲ ವರ್ಗಗಳ ಸಂಕಷ್ಟಗಳಿಗೆ ಸ್ಪಂದಿಸಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದರು. ನಿನ್ನೆ ಬೆಂಗಳೂರಿನಲ್ಲಿ ಪ್ರಮುಖ ನಾಯಕರುಗಳ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಹೃದಯ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಚರ್ಚೆಗಳು ನಡೆದಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Facebook Comments