“ಬಿ.ವೈ.ವಿಜಯೇಂದ್ರ 482 ಕೆಪಿಎಸ್‍ಸಿ ಹುದ್ದೆಗಳನ್ನು ಮಾರಾಟ ಮಾಡಿದ್ದಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.30- ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 482 ಕೆಪಿಎಸ್‍ಸಿ ಹುದ್ದೆ ಮಾರಾಟ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಡಿಸೆಂಬರ್‍ನಲ್ಲಿ ಆಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ 218 ಕೋಟಿ ಅವ್ಯವಹಾರ, ಅದರಲ್ಲಿ ಹಣ ಕೊಟ್ಟು ಪಡೆದ ದಾಖಲೆಗಳು ನಮ್ಮ ಬಳಿ ಇವೆ. ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರತಾಪ್ ಸಿಂಹ ಅವರ ಹಗರಣಗಳನ್ನು ನಾನು ದಾಖಲೆ ಸಮೇತ ಸಾಬೀತುಪಡಿಸುತ್ತೇನೆ. ನನ್ನ ಮೇಲಿನ ಆರೋಪವನ್ನು ಪ್ರತಾಪ್ ಸಿಂಹ ಸಾಬೀತು ಪಡಿಸಲಿ ಎಂದು ಲಕ್ಷ್ಮಣ್ ಸವಾಲು ಹಾಕಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬ್ಲಾಕ್ ಮೇಲ್ ಗಿರಾಕಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಅವರು ನಾನು ಬ್ಲಾಕ್‍ಮೇಲ್ ಮಾಡಿದ್ದರೆ ದಾಖಲೆಯೊಂದಿಗೆ ಚರ್ಚೆಗೆ ಬರಲಿ. ಸಾಬೀತಾದರೆ ಸಾರ್ವಜನಿಕವಾಗಿ ನಾನು ಹ್ಯಾಂಗ್ ಮಾಡಿಕೊಳ್ಳುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

ನಾನೇದರೂ ಯಾರ ಹತ್ತಿರವಾದರೂ ದುಡ್ಡು ತಿಂದಿದ್ದರೆ ಅದನ್ನೂ ಪ್ರತಾಪ್ ಸಿಂಹ ಸಾಬೀತು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಬಳಿ ಪ್ರತಾಪ್ ಸಿಂಹಗೆ ಸಂಬಂಧಪಟ್ಟ ನಾಲ್ಕು ವಿಡಿಯೋ ಇವೆ. ಸರ್ಕಾರ ರಚನೆ ಆಗಿರೋದು 105 ಜನ ಶಾಸಕರಿಂದ ಅಂತೀರಿ. ಸಂಗೊಳ್ಳಿ ರಾಯಣ್ಣನನ್ನು ಕೇವಲ ಬೆಳಗಾವಿಗೆ ಮಾತ್ರ ಸೀಮಿತ ಮಾಡ್ತೀರಿ ಎಂದು ಸಿಂಹ ವಿರುದ್ಧ ಕಿಡಿಕಾರಿದರು.

ಕೋರ್ಟ್ ಅನುಮತಿ ಪಡೆದು ಪ್ರೊಜೆಕ್ಟರ್ ಅಲ್ಲೇ ಬಿಡುಗಡೆ ಮಾಡುತ್ತೇನೆ. ಪತ್ರಕರ್ತರಾಗಿದ್ದಾಗ ಏನೇನು ಮಾಡಿದ್ದೀಯಾ ಎಂಬುದು ಗೊತ್ತು. ಎಲ್ಲದಕ್ಕೂ ದಾಖಲೆ ಇದೆ ಎಂದು ಹೇಳಿದರು.

ಪ್ರತಾಪ್ ಸಿಂಹಗೆ ಧೈರ್ಯ ಇದ್ದರೆ ನನ್ನ ಮೇಲೆ ಕೇಸ್ ಹಾಕಲಿ. ಮಾನನಷ್ಟ ಮೊಕದ್ದಮೆ ಹಾಕಲಿ. ನಾನು ದಾಖಲೆಗಳನ್ನು ಕೋರ್ಟ್‍ಗೆ ನೀಡುತ್ತೇನೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

Facebook Comments

Sri Raghav

Admin