ಅನರ್ಹರಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಗೆಲ್ಲಿಸಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಸರ್ವರಿಗೂ ಸಮ ಪಾಲು, ಸಮ ಬಾಳು ಎಂಬ ಬಸವೇಶ್ವರ ಸಿದ್ಧಾಂತವನ್ನು ಪಾಲಿಸಿ ಬಡವರ ಏಳಿಗೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಇಂದಿಲ್ಲಿ ಭರವಸೆ ನೀಡಿದರು.

ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಸ್ವಾಮಿ ವಿವೇಕಾನಂದ, ಅಕ್ಕ ಮಹಾದೇವಿ, ಲೈನ್ ಪಾರ್ಕ್ ಮತ್ತಿತರ ಉದ್ಯಾನವನಗಳಲ್ಲಿ ಇಂದು ಬೆಳಗ್ಗೆ ಮತ ಯಾಚಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ 130 ವರ್ಷ ಇತಿಹಾಸವಿರುವ ಜಾತ್ಯತೀತ ನಿಲುವಿನ ಏಕೈಕ ಪಕ್ಷ ಕಾಂಗ್ರೆಸ್ ಎಂದು ಅವರು ಬಣ್ಣಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾ ಗುವ ಮುನ್ನ ರಾಜ್ಯದ ಜನತೆಗೆ 165 ಭರವಸೆಗಳನ್ನು ನೀಡಿದ್ದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ 5 ವರ್ಷಗಳಲ್ಲಿ ಮತದಾರರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ಕಾಂಗ್ರೆಸ್ ಸರ್ಕಾರ ಭಾಜನವಾಗಿತ್ತು.

ಬಡವರು ಹಸಿವಿನಿಂದ ಬಳಲಬಾರದು ಎಂದು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದರು. ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಮಕ್ಕಳಿಗೆ ಕ್ಷೀರ ಭಾಗ್ಯ, ಯಶಸ್ವಿನಿ, ಶಾದಿ ಭಾಗ್ಯದಂತಹ ಹಲವಾರು ಜನಪ್ರಿಯ ಯೋಜನೆಗಳನ್ನು ಎಲ್ಲಾ ಜಾತಿ , ಧರ್ಮದವರಿಗೆ ತಲುಪುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದರು.

ನುಡಿದಂತೆ ನಡೆದ ಏಕೈಕ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ. ಈ ಬಾರಿ ನನಗೆ ಮತ ನೀಡಿದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ನೀಡಿದ ವಚನ ಈಡೇರಿಸಿದ ಮಾದರಿಯಲ್ಲೇ ನಾನು ನಿಮಗೆ ನೀಡಿರುವ ಭರವಸೆಯನ್ನು ಈಡೇರಿಸುತ್ತೇನೆ ಎಂದು ಶಿವರಾಜ್ ವಾಗ್ದಾನ ಮಾಡಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಪತನಕ್ಕೆ ಕಾರಣಕರ್ತ ರಾಗಿರುವವರಿಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಭವಿಷ್ಯದಲ್ಲಿ ಪಕ್ಷಾಂತರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂದು ಅವರು ಮನವಿ ಮಾಡಿದರು.

ಹಿಂದುಳಿದ ವರ್ಗದ ನಾಯಕ ರಾದ ಲಕ್ಷ್ಮೀನಾರಾಯಣ್, ಪಾಲಿಕೆ ಮಾಜಿ ಸದಸ್ಯರಾದ ಮೋಹನ್‍ಕುಮಾರ್, ಕೃಷ್ಣಪ್ಪ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಶೇಖರ್, ಪ್ರಚಾರ ಸಮಿತಿಯ ಅಧ್ಯಕ್ಷ ಪರಿಸರ ರಾಮಕೃಷ್ಣ ಮತ್ತಿತರರು ಜತೆಗಿದ್ದರು.

Facebook Comments