ಮಹಾಲಕ್ಷ್ಮಿ ಲೇಔಟ್ ಅಭಿವೃದ್ಧಿಗೆ ಶ್ರಮಿಸುವೆ : ಶಿವರಾಜ್ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಉಪ ಚುನಾವಣೆ ನಡೆಯುತ್ತಿರುವ ಪ್ರತಿಷ್ಠಿತ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವ ಮುಖಂಡ ಎಂ.ಶಿವರಾಜು ಅಪಾರ ಸಂಖ್ಯೆಯ ಬೆಂಬಲಿಗ ರೊಂದಿಗೆ ನಾಮಪತ್ರ ಸಲ್ಲಿಸಿದರು.  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ,ಮಾಜಿ ಗೃಹ ಸಚಿವರು, ಶಾಸಕರಾದ ರಾಮಲಿಂಗಾ ರೆಡ್ಡಿ , ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ ,ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಭಾರೀ ಸಂಖ್ಯೆಯ ಕಾಂಗ್ರೆಸ್ ಕಾರ್ಯ ಕರ್ತರು ಶಿವರಾಜ್ ಅವರಿಗೆ ಸಾಥ್ ನೀಡಿದರು.

ಮಹಾಲಕ್ಷ್ಮಿಲೇಔಟ್‍ನಲ್ಲಿರುವ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರು ನಂತರ ಭಾರೀ ಸಂಖ್ಯೆಯ ಕಾರ್ಯ ಕರ್ತರೊಂದಿಗೆ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಆಗಮಿಸಿ ರಾಜಾಜಿನಗರದ ಆರ್‍ಟಿಒ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜು ಅವರು, ಕಾಂಗ್ರೆಸ್ ಪಕ್ಷ ನನ್ನನು ಗುರುತಿಸಿ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ . ನನ್ನನ್ನು ಈ ಬಾರಿ ಗೆಲ್ಲಿಸಿದರೆ ಕ್ಷೇತ್ರಕ್ಕೆ ಮತ್ತಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರು.

ನಾನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೂರಾರು ಕೋಟಿಗಳ ಅನುದಾನವನ್ನು ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಏಳು ವಾಡ್ರ್ಗಗಳಿಗೆ ನೀಡಲಾಗಿದೆ. ನನಗೆ ಇದೊಂದು ಬಾರಿ ಅವಕಾಶ ನೀಡಿದರೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಮನವರಿ ಮಾಡಿದರು.

ವಿಧಾನಪರಿಷತ್ ಸದಸ್ಯರಾದ ವೇಣು ಗೋಪಾಲ್ , ಮಾಜಿ ಮಹಾಪೌರರಾದ ಹುಚ್ಚಪ್ಪ, ಗುರಪ್ಪನಾಯ್ಡು, ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥಗೌಡ, ಮಹಾಲಕ್ಷ್ಮೀಪುರ ವಾರ್ಡ್ ಬಿಬಿಎಂಪಿ ಸದಸ್ಯರಾದ ಕೇಶವಮೂರ್ತಿ, ವಿ.ಎಸ್. ಆರಾಧ್ಯ , ಎಸ್.ಮನೋಹರ್, ನರಸಿಂಹಮೂರ್ತಿ ,ರಾಮಣ್ಣ, ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ,ಕೃಷ್ಣಪ್ಪ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎನ್. ಕುಮಾರ್ ,ರವಿಶೇಖರ್, ಮಹಿಳಾ ಕಾಂಗ್ರೆಸ್ ,ಯುವ ಕಾಂಗ್ರೆಸ್, ವಿವಿಧ ಘಟಕಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು .

Facebook Comments