ಕಸಗುಡಿಸುವ ಯಂತ್ರದಲ್ಲೂ ಭಾರೀ ಅವ್ಯವಹಾರ ನಡೆಸಿದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.17- ಹಗರಣಗಳಿಗೂ ಬಿಬಿಎಂಪಿಗೂ ಅವಿನಾಭವ ಸಂಬಂಧ. ಹಣ ಲೂಟಿ ಮಾಡಲು ಅಧಿಕಾರಿಗಳು, ಆಡಳಿತ ನಡೆಸುವವರು ಪ್ರತಿದಿನ ಒಂದೊಂದು ಪ್ಲಾನ್ ಹುಡುಕುತ್ತಲೇ ಇರುತ್ತಾರೆ. ಘನತ್ಯಾಜ್ಯ ನಿರ್ವಹಣೆ, ಚರಂಡಿ ಕಾಮಗಾರಿ, ರಸ್ತೆ ಕಾಮಗಾರಿ, ರಸ್ತೆಗಳ ಗುಂಡಿ ಮುಚ್ಚುವುದು, ಬೃಹತ್ ಚರಂಡಿ ಕಾಮಗಾರಿ ಸೇರಿದಂತೆ ಹೀಗೆ ಎಲ್ಲದರಲ್ಲೂ ಹಣವನ್ನು ಲೂಟಿ ಹೊಡೆಯುವ ಬಿಬಿಎಂಪಿ ಈಗ ಸ್ವಯಂ ಚಾಲಿತ ಕಸಗುಡಿಸುವ ಯಂತ್ರಗಳ ಖರೀದಿಯಲ್ಲಿ ಸುಮಾರು 250 ಕೋಟಿ ರೂ.ಗಳಷ್ಟು ಅವ್ಯವಹಾರ ಎಸಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

30 ಲಕ್ಷ ಬೆಲೆ ಬಾಳುವ ಗುಜರಿ ಮಟ್ಟದ ಸ್ವಯಂಚಾಲಿಕ ಕಸಗುಡಿಸುವ ಯಂತ್ರಗಳನ್ನು 1.16 ಕೋಟಿ ಕೊಟ್ಟು ಖರೀದಿ ಮಾಡಿದೆ ಎಂದರೆ ಎಷ್ಟು ಅವ್ಯವಹಾರ ಆಗಿರಬಹುದು ಎಂಬುದು ಊಹಿಸಲು ಅಸಾಧ್ಯ.  ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಪ್ಪು ಪಟ್ಟಿಗೆ ಸೇರಿರುವ 13 ಪ್ರಕರಣಗಳಲ್ಲಿ ಭಾಗಿಯಾಗಿರುವ ಟಿಪಿಎಸ್ ಸಂಸ್ಥೆಗೆ ಬಿಬಿಎಂಪಿ ಸಿಂಗಲ್ ಟೆಂಡರ್‍ನ್ನು ನೀಡಿದೆ.

50 ಕಡೆ ಮಿನಿ ಟ್ರಾನ್ಸಫರ್ಮರ್ ಸ್ಟೇಷನ್,ಮೂರು ಕಡೆ ಪ್ರೋರ್ಟ್ ಕಾಂಫೆಕ್ಟರ್‍ಗಳನ್ನು ಮಾಡಲು ಮುಂದಾಗಿದೆ. ಅಲ್ಲದೆ 1.6 ಕೋಟಿ ಮೊತ್ತದ 17 ಯಂತ್ರಗಳನ್ನು ಖರೀದಿ ಮಾಡಿದೆ. ಈ ಯಂತ್ರಗಳನ್ನು ಸರಬರಾಜು ಮಾಡುವ ಇಟಲಿ ಮೂಲದ ಪ್ರತಿಷ್ಠಿತ ಸಂಸ್ಥೆ ವಿಶ್ವದ ನಂ.1 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಈ ಸಂಸ್ಥೆ 67 ಲಕ್ಷ ರೂ. ಮೊತ್ತದಲ್ಲಿ ಯಂತ್ರಗಳನ್ನು ಸರಬರಾಜು ಮಾಡುತ್ತದೆ. ಆದರೆ 30 ಲಕ್ಷ ಬೆಲೆ ಬಾಳುವ ಈ ಯಂತ್ರಗಳನ್ನು ಇಷ್ಟು ಮೊತ್ತದ ಹಣ ನೀಡಿ ಖರೀದಿ ಮಾಡಿರುವುದರ ಹಿಂದೆ ಸಾಕಷ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

17 ಯಂತ್ರಗಳಲ್ಲಿ ಸೆಲ್ಫ್ ಪ್ರೊಫೈಲ್ ಮಿಷನ್‍ಗಳಾಗಿರಬೇಕು. ಆದರೆ ವಾಕ್ಯೂಮ್ ಪ್ರೊಫೈಲ್ ಮಿಷನ್‍ಗಳಾಗಿವೆ. ಸೆಂಟ್ರಲ್ ಕಂಪ್ರೈಜ್ ಸಿಸ್ಟಮ್ ಇರಬೇಕು. ಆದರೆ ಇದ್ಯಾವುದು ಇಲ್ಲದೆ ಮುಂದೆ ಕಸಗುಡಿಸುವ ಮಿಷನ್ ಹಿಂದೆ ಒಂದು ಡಬ್ಬ ಇರುವ ಯಂತ್ರ ಇವಾಗಿವೆ. ಹೀಗಾಗಿ ಈ ಯಂತ್ರಗಳ ಖರೀದಿಯಲ್ಲಿ ಸಾಕಷ್ಟು ಅನುಮಾನಗಳು ಮೂಡತೊಡಗಿದೆ.

Facebook Comments