ಚೀನಾಗೆ ಮೊದಲ ಪೆಟ್ಟು : ಮೇಡ್ ಇನ್ ಇಂಡಿಯಾದ 50 ಸಾವಿರ ವೆಂಟಿಲೇಟರ್‌ಗಳ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.23- ನೆರೆಯ ಚೀನಾ ರಾಷ್ಟ್ರಕ್ಕೆ ಮೊದಲ ಪೆಟ್ಟು ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲಾ ರಾಜ್ಯಗಳಿಗೂ ಮೇಡ್ ಇನ್ ಇಂಡಿಯಾದ 50 ಸಾವಿರ ವೆಂಟಿಲೇಟರ್‍ಗಳನ್ನು ಪೂರೈಕೆ ಮಾಡಲು ತೀರ್ಮಾನಿಸಿದೆ.

ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಕಳೆದ ವಾರ ಭಾರತೀಯ ಸೈನಿಕರ ಮೇಲೆ ವಿನಾಃಕಾರಣ ಚೀನಾ ಕ್ಯಾತೆ ತೆಗೆದಿತ್ತು. ಇದಕ್ಕೆ ಪ್ರತಿಕಾರವೆಂಬಂತೆ ಇದೀಗ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ.

ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರ ತನ್ನಲ್ಲೇ ತಯಾರಿಸಿರುವ ಮೇಡ್ ಇನ್ ಇಂಡಿಯಾದಡಿ 50 ಸಾವಿರ ವೆಂಟಿಲೇಟರ್‍ಗಳನ್ನು ಎಲ್ಲಾ ರಾಜ್ಯಕ್ಕೆ ಪೂರೈಕೆ ಮಾಡಲಿದೆ. ಇದಕ್ಕಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಯ ಎರಡು ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದೆ.

ಈಗಾಗಲೇ 2943 ವೆಂಟಿಲೇಟರ್‍ಗಳನ್ನು ಉತ್ಪಾದಿಸಲಾಗಿದ್ದು, 1340 ವೆಂಟಿಲೇಟರ್‍ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗಿದೆ. ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಮಹಾರಾಷ್ಟ್ರ ಮತ್ತು ದೆಹಲಿಗೆ ತಲಾ 275 ವೆಂಟಿಲೇಟರ್‍ಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರತಿ ರಾಜ್ಯಕ್ಕೂ ತಲಾ ಎರಡು ಸಾವಿರ ವೆಂಟಿಲೇಟರ್‍ಗಳನ್ನು ಪೂರೈಕೆ ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ಇದರ ಮೊದಲ ಹಂತವಾಗಿ ಗುಜರಾತ್‍ಗೆ 175, ಬಿಹಾರ್ 100, ಕರ್ನಾಟಕ 90 ಮತ್ತು ರಾಜಸ್ತಾನಕ್ಕೆ 75 ವೆಂಟಿಲೇಟರ್‍ಗಳನ್ನು ವಿತರಣೆ ಮಾಡಲಾಗಿದೆ.

ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ವೆಂಟಿಲೇಟರ್ ಒದಗಿಸಲು ಪ್ರಧಾನಮಂತ್ರಿ ಪರಿಹಾರ ನಿಧಿಯಲ್ಲಿ ಈಗಾಗಲೇ ಒಂದು ಸಾವಿರ ಹಣವನ್ನೂ ಸಹ ಬಿಡುಗಡೆ ಮಾಡಲಾಗಿದೆ.ಉಳಿದಿರುವ ಹಣವನ್ನು ಪರಿಸ್ಥಿತಿಗೆ ಅನುಗುಣವಾಗಿ ಬಿಡುಗಡೆ ಮಾಡುವುದಾಗಿ ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

ಮತ್ತೊಂದು ಬೆಳಣಿಗೆಯಲ್ಲಿ ವಲಸೆ ಕಾರ್ಮಿಕರಿಗೆ ಆಹಾರ, ವೈದ್ಯಕೀಯ ಚಿಕಿತ್ಸೆ, ವಸತಿ ವ್ಯವಸ್ಥೆ ಕಲ್ಪಿಸಲು ಪ್ರಧಾನಮಂತ್ರಿ ಪರಿಹಾರ ನಿಧಿಯಡಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಅತಿ ಹೆಚ್ಚು ಸೋಂಕು ಇರುವ ಮಾಹಾರಾಷ್ಟ್ರಕ್ಕೆ 181 ಕೋಟಿ, ಉತ್ತರ ಪ್ರದೇಶ 103, ತಮಿಳುನಾಡು 83, ಗುಜರಾತ್ 66, ದೆಹಲಿ 55, ಪಶ್ಚಿಮ ಬಂಗಾಳ 53, ಬಿಹಾರ್ 51 ಕೋಟಿ, ಮಧ್ಯ ಪ್ರದೇಶ 50, ರಾಜಸ್ತಾನ 50 ಹಾಗೂ ಕರ್ನಾಟಕಕ್ಕೆ 34 ಕೋಟಿ ರೂ. ಅನುದಾನ ಸಿಗಲಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ವೇಳೆ ಆಯಾ ರಾಜ್ಯಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದರು. ಮುಖ್ಯಮಂತ್ರಿಗಳು ನೀಡಿದ ಮಾಹಿತಿ ಮೇರೆಗೆ ಕೇಂದ್ರ ಸರ್ಕಾರ ಈ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಮೂಲಗಳು ಖಚಿತ ಪಡಿಸಿವೆ.

Facebook Comments