ನಾಗಮೋಹನ್ ದಾಸ್ ವರದಿಯನ್ನು ಪರಾಮರ್ಶಿಸಲು ಸಂಪುಟ ಉಪಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.18- ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ)ದ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ಪರಾಮರ್ಶಿಸಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು.

ಎಸ್ಸಿ-ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಹಾಲಿ ಇರುವ ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಇದನ್ನು ಪರಿಷ್ಕøತ ಮಾಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ನೀಡಿರುವ ವರದಿಯನ್ನುಪರಾಮರ್ಶಿಸಲು ಸಂಪುಟ ಉಪಸಮಿತಿಯನ್ನು ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪಸಮಿತಿಯಲ್ಲಿ ಯಾರ್ಯಾರು ಇರಬೇಕು ಎಂಬುದನ್ನು ಮುಖ್ಯಮಂತ್ರಿಯವರೇ ತೀರ್ಮಾನಿಸಲಿದ್ದು, ಒಂದು ವಾರದೊಳಗೆ ಘೋಷಣೆ ಮಾಡಲಿದ್ದಾರೆ. ವರದಿಯ ಶಿಫಾರಸ್ಸುಗಳನ್ನು ಆಧರಿಸಿ ಸರ್ಕಾರಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದರು.

ಎಸ್ಸಿ ಸಮುದಾಯಕ್ಕೆ ಶೇ.3ರಿಂದ 7ರಷ್ಟು ಹಾಗೂ ಎಸ್ಟಿ ಸಮುದಾಯಕ್ಕೆ ಶೇ.15ರಿಂದ 17ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಸಮಿತಿ ಸುದೀರ್ಘವಾಗಿ ಚರ್ಚಿಸಿ ಸಾಧಕಬಾಧಕಗಳ ಬಗ್ಗೆ ಪರಾಮರ್ಶಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.

ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಯೋಜನೆಯಡಿ ರಾಜ್ಯಕ್ಕೆ 500 ಕೋಟಿ ಬಿಡುಗಡೆಯಾಗಿದ್ದು, ರಾಜ್ಯ ಸರ್ಕಾರ ನಾಲ್ಕು ಸಾವಿರ ಕೋಟಿ ಸೇರಿ ನೆರೆಪೀಡಿತ ಪ್ರದೇಶಗಳಲ್ಲಿ ತಕ್ಷಣವೇ ಒಂದು ಸಾವಿರ ಕೋಟಿ ಪರಿಹಾರ ಕಾರ್ಯವನ್ನು ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೆಪಿಎಸ್‍ಸಿಗೆ ನೀಡಲಾಗಿದ್ದ ಅಧಿಕಾರವನ್ನು ಹಿಂಪಡೆದು ಇನ್ನು ಮುಂದೆ ಯಾವುದೇ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಸರ್ಕಾರದ ಅನುಮತಿ ಸಾಕು. ಹೀಗಿರುವ ಕಾನೂನಿಗೆ ಸಂಪುಟ ಸಭೆ ತಿದ್ದುಪಡಿ ಮಾಡಿದೆ.

ಕರ್ನಾಟಕ ಕೃಷಿ ಸೇವೆಗಳು(ನೇಮಕಾತಿ) ನಿಯಮಗಳು 2020ಕ್ಕೆ ಒಪ್ಪಿಗೆಯನ್ನು ಸೂಚಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ವತಿಯಿಂದ ವಿವಿಧ ಇಲಾಖೆಗೊಳಪಡುವ ಜಲ ನಿಗಮಗಳಿಗೆ ಸಾಲ ಪಡೆಯಲು ಸಂಪುಟ ಅನುಮೋದನೆ ನೀಡಿದೆ.  2020-21ನೇ ಸಾಲಿನಲ್ಲಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಐಇಡಿಆರ್ ಅಡಿಯಲ್ಲಿ 500 ಕೋಟಿ, ಕರ್ನಾಟಕ ನೀರಾವರಿ ನಿಗಮಕ್ಕೆ 650 ಕೋಟಿ , ಕಾವೇರಿ ನೀರಾವರಿ ನಿಗಮಕ್ಕೆ 250 ಕೋಟಿ, ವಿಶ್ವೇಶ್ವರಯ್ಯ ಜಲನಿಗಮಕ್ಕೆ 250 ಕೋಟಿ ಹಣವನ್ನು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಂಪುಟ ಅನುಮೋದನೆ ನೀಡಿದೆ.

ಬೆಳಗಾವಿ ನಗರದ ದಕ್ಷಿಣ ಮತ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು 28.63 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.  ಬಳ್ಳಾರಿ ಜಿಲ್ಲೆಯ ಹೊಸಪೇಟೆ, ನಗರಸಭೆ ವ್ಯಾಪ್ತಿಯ ವಾರ್ಡ್ ನಂ.4ರಲ್ಲಿ ಉದ್ಯೋಗ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಹಳೆ ತರಕಾರಿ ಮಾರುಕಟ್ಟೆ ಇರುವ ಜಾಗದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ 13.85 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಒಪ್ಪಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮರಾಠ ಅಭಿವೃದ್ಧಿ ನಿಗಮ ಪ್ರಾಧಿಕಾರಕ್ಕೆ ಬದಲಾಗಿ ಮರಾಠ ಸಮುದಾಯ ನಿಗಮವನ್ನು ಅಧಿಕೃತವಾಗಿ ರಚಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಯಾವುದೇ ಒಂದು ನಿಗಮವನ್ನು ಸ್ಥಾಪನೆ ಮಾಡುವ ವೇಳೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Facebook Comments