ತಪ್ಪಾಗಿದೆ, ಉದ್ವೇಗದಲ್ಲಿ ಕೆಟ್ಟ ಪದ ಬಳಸಿದ್ದೇನೆ : ಸಚಿವ ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.9- ಸರ್ಕಾರದಿಂದ ಅಭಿವೃದ್ಧಿಗೆ ಬಂದ ಹಣವನ್ನು ಸಮರ್ಪಕವಾಗಿ ಬಳಕೆ ಆಗದೆ ವಾಪಸ್ ಹೋಗುತ್ತಿದೆ, ಉದ್ವೇಗದಲ್ಲಿ ಸಭೆಯಲ್ಲಿ ಕೆಟ್ಟ ಪದವನ್ನು ಬಳಸಿದ್ದೇನೆ ತಪ್ಪಾಗಿದೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸಾಕಷ್ಟು ಬಾರಿ ಸಭೆಗಳಲ್ಲಿ ಸರ್ಕಾರದಿಂದ ಬರುವ ಹಣವನ್ನು ಬಳಸಿಕೊಂಡು ಜಿಲ್ಲಾಯ ಅಭಿವೃದ್ಧಿಗೆ ಒತ್ತು ನೀಡಿ ಎಂದು ಸೂಚನೆ ನೀಡಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿಲ್ಲಾ ತಮ್ಮ ಇಲಾಖೆಗಳ ಕೆಲಸಗಳ ಬಗ್ಗೆ ಕೇಳಿದರೂ ಉತ್ತರ ಇಲ್ಲ. ಹಾಗಾಗಿ ಅಂದಿನ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತಾಳ್ಮೆ ಸಹಿಸದೆ ಅವರನ್ನು ಕೆಟ್ಟ ಪದದಲ್ಲಿ ತರಾಟೆಗೆ ತೆಗೆದುಕೊಂಡಿದ್ದೇನೆ. ತಪ್ಪಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020-2021ರ 3ನೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದ ಬಗ್ಗೆ ಮಾತನಾಡಿ, ತುಮಕೂರು ಉಪ ವಿಭಾಗದಲ್ಲಿ 269 ಕೋಟಿ ಹಣವಿದೆ ಖರ್ಚು ಮಾಡಬೇಕಾಗಿದೆ. ಆದರೆ ಇದರಲ್ಲಿ ಕೇವಲ 86 ಲಕ್ಷ ಹಣವನ್ನು ಬಳಕೆ ಮಾಡಿಕೊಂಡು ಇದ್ದಾರೆ. ಇದರಿಂದ ಅವಧಿ ಮುಗಿದ ನಂತರ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ.

ಇದರಿಂದ ನಷ್ಟ ಯಾರಿಗೆ ಜನರಿಗಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಸಂದರ್ಭದಲ್ಲಿ ಹಲವು ಬಾರಿ ಹೇಳಿದರು ಅಧಿಕಾರಿಗಳು ಸರಿ ಹೋಗದೆ ಇದ್ದರೆ ಏನು ಮಾಡಲಿ, ಹಾಗಾಗಿ ನಾನು ಇಂದು ಅಧಿಕಾರಿಗಳ ವಿರುದ್ಧ ಕೆಟ್ಟ ಪದವನ್ನು ಬಳಸಿದ್ದೇನೆ ತಪ್ಪಾಗಿದೆ ದಯ ಮಾಡಿ ಮಾಧ್ಯಮಗಳು ಸಹಕರಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಪರಿಷತ್ ಇಂಜಿಯರ್‍ಗಳು ಯಾರೂ ಕೆಲಸ ಮಾಡಿಲ್ಲ. ಕೇಳಿದರೆ ಹೋಗುತ್ತೇವೆ, ಮಾಡುತ್ತೇವೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಕಾಗದದಲ್ಲಿ ಸಿದ್ಧ ಮಾಡಿಕೊಂಡು ಬಂದಿರುತ್ತಾರೆ. ಆದರೆ ಎಲ್ಲಿ ಏನೇನೋ ಆಗಿದೆ ಹೇಳಿ, ಎಂದರೆ ಉತ್ತರ ಇಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಅಧಿಕಾರಿಗಳ ಮೇಲೆ ಅಕ್ಷನ್ ತೆಗೆದುಕೊಳ್ಳದೆ ಸಹಿಸಿಕೊಂಡು ಹೋದ್ರೆ ಅವರು ಅದನ್ನೇ ದೌರ್ಬಲ್ಯ ಎಂದುಕೊಳ್ತಾರೆ… ಕಾಂಗ್ರೆಸ್, ಜೆಡಿಎಸ್, ಸೇರಿದಂತೆ ಮಾದ್ಯಮಗಳು ನನ್ನ ಮೇಲೆ ಬಿದ್ದರೆ ಹೇಗೆ.

ಕೆಲಸ ಮಾಡುವಾಗ ಸಣ್ಣ ಪುಟ್ಟ ವ್ಯತ್ಯಾಸಗಳಾದಾಗ ಅದನ್ನೇ ದೊಡ್ಡದಾಗಿ ಬಿಂಬಿಸಿದರೆ ಹೇಗೆ ದಯವಿಟ್ಟು ಮಾಧ್ಯಮದವರು ಸಹಕರಿಸಿ ಎಂದು ಮನವಿ ಮಾಡಿಕೊಂಡರು. ನಾನು ನನಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಜಿಲ್ಲಾಯ ಅಭಿವೃದ್ಧಿಗೆ ಯಾವುದೇ ಕಾರಣಕ್ಕೂ ಹಿನ್ನಡೆ ಆಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳು ಕೈಗೊಳ್ಳಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.

Facebook Comments