ಶಿವಕುಮಾರ್ ಬಂಧಿಸಿ ಹೀರೋ ಮಾಡುವ ಅಗತ್ಯ ನಮಗಿಲ್ಲ :ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಸೆ.4- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಮಾಡಿಸಿ ಯಾರನ್ನೂ ಹೀರೋ ಮಾಡುವ ಅಗತ್ಯ ನಮಗಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಇಲಾಖೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ.

ಡಿ.ಕೆ.ಶಿವಕುಮಾರ್ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನು ಬಂಧನ ಮಾಡಿಸಿ ಹೀರೋ ಮಾಡಿಸುವ ಅಗತ್ಯವೂ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನವಾಗಿರುವುದನ್ನು ಸ್ವತಃ ಅವರೇ ಹೇಳಿದ್ದಾರೆ. ನಾವೇ ಮಾಡಿದ ಅಧಿಕಾರಿಗಳು, ನಾವೇ ಕಾನೂನು ರಚನೆ ಮಾಡಿದವರೇ ನಮ್ಮನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ಹೊಣೆ ಎಂಬುದು ತಪ್ಪು ಕಲ್ಪನೆ.

ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ನೀಡಿರುವುದು ಬಿಜೆಪಿಯ ಹೈಕಮಾಂಡ್‍ಗೆ ಬಿಟ್ಟಿದ್ದು. ಆದರೆ ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಹಿರಿಯರೂ ಇರುತ್ತಾರೆ. ಆಯಾ ಜಿಲ್ಲೆಯ ಪ್ರಾಂತ್ಯಗಳನ್ನು ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಎಲ್ಲವನ್ನು ಅಳೆದು ತೂಗಿ ಸಚಿವರನ್ನು ನೇಮಕ ಮಾಡಿದ್ದಾರೆ ಎಂದರು.
ನಾನು ಬೆಳಗಾವಿ ಜಿಲ್ಲೆಯ ಪ್ರವಾಸದಲ್ಲಿ ಸಣ್ಣ ನೀರಾವರಿಗೆ ಸೇರಿದಂತೆ ಕೆರೆಗಳು ಹಾನಿಯಾಗಿರುವ ಕುರಿತು ಸ್ವತಃ ಪರಿಶೀಲನೆ ನಡೆಸಲಿದ್ದೇನೆ. ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದೇನೆ ಎಂದರು.

ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿಲ್ಲ. ನೆರೆಯಲ್ಲಿ ಕೊಚ್ಚಿ ಹೋದವರಿಗೆ ಪರಿಹಾರ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವುದರ ಕುರಿತು ಸಮಿತಿ ರಚನೆ ಮಾಡಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ.

ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ಐದು ಎಕರೆ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಹೊಂದಿರುವವರಿಗೆ ಪರಿಹಾರ ಸಿಗುವುದು ಕಷ್ಟ. ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಲಾಗುವುದು. ಯಾವುದರಲ್ಲಿ ಅಡ್ಡಿಯಾಗುತ್ತಿದೆ ಎನ್ನುವುದನ್ನು ವಿಪಕ್ಷದವರು ಸ್ಪಷ್ಟವಾಗಿ ಹೇಳಲಿ ಎಂದು ಮಾಧು ಸ್ವಾಮಿ ಹೇಳಿದರು.

Facebook Comments