ಅವ್ರು ಬೀಳಿಸಿದ್ರು, ನಾವು ಹಿಡ್ಕೊಂಡ್ವಿ ಯಾವುದೇ ಆಫರ್ ಇಲ್ಲ : ಸಚಿವ ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.7- ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅವರೇ ಬೀಳಿಸಿದರು ನಾವು ಹಿಡಿದು ಕೊಂಡೆವು ಅಷ್ಟೆ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ತಿಳಿಸಿದರು. ಸಕಲೇಶಪುರ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಜೆಡಿಎಸ್ ಪಕ್ಷದ ಯಾವ ಶಾಸಕರಿಗೂ 5 ಕೋಟಿ ಆಫರ್ ನೀಡಿರಲಿಲ್ಲ, ಬಿಜೆಪಿ ಸರ್ಕಾರ ರಚನೆ ವೇಳೆ ಜೆಡಿಎಸ್‍ನ ಕೆಲ ಶಾಸಕರಿಗೆ 5 ಕೋಟಿ ಆಫರ್ ನೀಡಲಾಗಿದೆ ಎಂದು ಬೇಲೂರು ಶಾಸಕರು ಆರೋಪಿಸಿದ್ದಾರೆ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರವರಲ್ಲೆ ಇದ್ದ ಅಸಮಾಧಾನದ ಕಾರಣ ಸಮ್ಮಿಶ್ರ ಸರ್ಕಾರ ಬಿದ್ದಿದೆ ಎಂದು ಹೇಳಿದರು.

ಕೆಎಂಎಫ್ ಚುನಾವಣೆ ಪಾರದರ್ಶಕವಾಗಿ ನಡೆದಿದೆ. ಆದರೆ ಮಾಜಿ ಅಧ್ಯಕ್ಷರಾದ ರೇವಣ್ಣ ಅವರು ಚುನಾವಣೆ ಮುಂದೂಡಲಾಗಿದ್ದರೂ ಸ್ಪರ್ಧೆಗೆ ಅರ್ಜಿ ಹಾಕಿದ್ದರು ಹಾಗೂ ತಮಗೆ ಬೇಕಾದ ಸದಸ್ಯರನ್ನು ಚುನಾವಣೆಯಲ್ಲಿ ಮತ ಹಾಕುವಂತೆ ಒತ್ತಡ ತಂದಿದ್ದರು. ಆದರೆ ಅವರ ಆಸೆ ಫಲಿಸಿಲ್ಲ. ಅವರು ಈ ಹುದ್ದೆಯನ್ನು ಕೇವಲವಾಗಿ ಹೇಳಿದ್ದಾರೆ. ಆದರೆ ಈ ಹುದ್ದೆಯಲ್ಲಿ ನಮ್ಮವರು ಇರುವುದು ನಮ್ಮ ಪುಣ್ಯವೇ ಸರಿ ಎಂದು ಉತ್ತರಿಸಿದರು.

ರಾಜ್ಯದಲ್ಲಿ ತಲೆದೋರಿರುವ ನೆರೆ ಹಾವಳಿ ಪರಿಹಾರ ಬಿಡುಗಡೆ ಕುರಿತು ರಾಜ್ಯದ ಸಚಿವ ಸಂಪುಟ ಸಭೆ ನಡೆಸಿ ಚರ್ಚಿಸಲಾಗಿದೆ. ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಸದ್ಯ 35 ಸಾವಿರ ಕೋಟಿ ಹಣ ಪರಿಹಾರ ನೀಡುವಂತೆ ಕೇಳಲಾಗಿದೆ. ಅಲ್ಲದೆ ರಾಜ್ಯಕ್ಕೆ ವಿಶೇಷ ಪ್ಯಾಕೆಜ್ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು. ನೆರೆ ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ರೀತಿಯ ತಾರತಮ್ಯ ತೋರಿಲ್ಲ, ಪ್ರಜ್ವಲ್ ಅವರ ಆರೋಪ ಸರಿಯಲ್ಲ ಎಂದರು.

ಕಾಫಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ತರಲು ಚಿಂತಿಸಲಾಗಿದೆ ಕಾಫಿಬೆಳೆಗೆ ಹಾನಿಯಾದರೆ ಬೆಳೆಗಾರರಿಗೆ ಲಕ್ಷಾಂತರ ರೂ. ಹಾನಿಯಾಗಲಿದ್ದು ಕಾಫಿಬೆಳೆಗಾರ ರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಯಾವುದೇ ಕಾಮಗಾರಿಗೆ ಬ್ರೇಕ್ ಹಾಕಲ್ಲ; ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಯಾದ ಯಾವುದೇ ಕಾಮಗಾರಿ ಯೋಜನೆಗೆ ಬ್ರೇಕ್ ಹಾಕೋ ಪ್ರಶ್ನೆಯೇ ಇಲ್ಲ.

ಸಾರ್ವಜನಿಕರ ಹಿತದೃಷ್ಟಿಯಿಂದ ಮಾತ್ರ ಸರ್ಕಾರ ದ ನಡೆ ಇರಲಿದೆ ಎಂದ ಸಚಿವರು ಕಾಮಗಾರಿಗಳಿಗೆ ಬಿಜೆಪಿ ಸರಕಾರ ಬ್ರೇಕ್ ಹಾಕಲಿದೆ ಎಂಬುದು ಕೇವಲ ರೇವಣ್ಣ ಅವರ ಮನಸಿನಲ್ಲಿದೆ ಅಷ್ಟೆ , ಅಂತಹ ದ್ವೇಷದ ರಾಜಕೀಯ ನಾವು ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತನಿಖೆಗೆ ಸಹಕರಿಸಲಿ;ಡಿ.ಕೆ.ಶಿವಕುಮಾರ್ ತನಿಖೆಗೆ ಸಹಕಾರ ನೀಡದ ಕಾರಣ ಇಡಿ ಅಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಕಾನೂನಿನಲ್ಲಿ ಎಲ್ಲರೂ ಒಂದೇ ಎಂದರು.

ಶ್ರೀಮಂತರಾಗೊದು ತಪ್ಪಲ್ಲ. ಆದರೆ ಎಲ್ಲವು ಕಾನೂನಿನಡಿ ಇರಬೇಕಷ್ಟೆ ಎಂದ ಹೇಳಿದ ಮಾಧುಸ್ವಾಮಿ ಯವರು ಶಿವಕುಮಾರ್ ತನಿಖೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರೆ ಅವರನ್ನು ಇಡಿ ಅಧಿಕಾರಿಗಳು ಬಂಧಿಸುತ್ತಿರಲಿಲ್ಲ ಎಂದರು.

Facebook Comments